ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಶ್ಲೀಲ ಸಿ.ಡಿ ಪ್ರಕರಣದ ಸೂತ್ರಧಾರ ಡಿ.ಕೆ. ಶಿವಕುಮಾರ್: ಅಶ್ವತ್ಥನಾರಾಯಣ ವಾಗ್ದಾಳಿ

Last Updated 13 ಮಾರ್ಚ್ 2023, 23:15 IST
ಅಕ್ಷರ ಗಾತ್ರ

ಬಂಗಾರಪೇಟೆ (ಕೋಲಾರ): ‘ಕಾಂಗ್ರೆಸ್‌ ಎಂದರೆ ಸಿ.ಡಿ ಮತ್ತು ಬ್ಲ್ಯಾಕ್‌ ಮೇಲ್‌ ಪಕ್ಷ. ರಮೇಶ್‌ ಜಾರಕಿಹೊಳಿ ಸೇರಿದಂತೆ ವಿವಿಧ ನಾಯಕರ ಸಿ.ಡಿ ಸೃಷ್ಟಿಸಿ, ಕಿರುಕುಳ ಕೊಡುವುದೇ ಕಾಂಗ್ರೆಸ್‌ ಕೆಲಸ. ಕೆಪಿಸಿಸಿ ಅಧ್ಯಕ್ಷರೇ ಇದರ ಸೂತ್ರಧಾರ’ ಎಂದು ಸಚಿವ ಡಾ.ಸಿ.ಎನ್‌. ಅಶ್ವತ್ಥನಾರಾಯಣ ವಾಗ್ದಾಳಿ ನಡೆಸಿದರು.

ಸುದ್ದಿಗಾರರೊಂದಿಗೆ ಮಾತನಾಡಿ, ‘ಕಾಂಗ್ರೆಸ್‌ ಯಾವತ್ತೂ ಉತ್ತಮ ಆಡಳಿತದ ಬಗ್ಗೆ ಮಾತನಾಡಲ್ಲ. ಅದು ಭ್ರಷ್ಟಾಚಾರದಲ್ಲಿ ನಂಬಿಕೆ ಇಟ್ಟಿರುವ ಪಕ್ಷ‌. ‘ಸಿ’ ಎಂದರೆ ಕಾಂಗ್ರೆಸ್‌, ‘ಸಿ’ ಎಂದರೆ ಕರಪ್ಷನ್‌’ ಎಂದು ಅವರು ಹೇಳಿದರು.

‘ಜೆಡಿಎಸ್‌ಗೆ ಅಭಿವೃದ್ಧಿ ಎಂದರೇನು ಗೊತ್ತಿಲ್ಲ. ಬೆಂಗಳೂರು-ಮೈಸೂರು ದಶಪಥ ರಸ್ತೆ ವಿಚಾರದಲ್ಲಿ ಕುಮಾರಸ್ವಾಮಿ ನೀಡುತ್ತಿರುವ ಹೇಳಿಕೆ ಹಾಸ್ಯಾಸ್ಪದ. ದಶಪಥಕ್ಕೆ ಇನ್ನೂ ₹1 ಸಾವಿರ ಕೋಟಿ ವಿನಿಯೋಗಿಸಲಾಗುವುದು’ ಎಂದರು.

ಹೇಳಿಕೆಗೆ ಪ್ರತಿಕ್ರಿಯಿಸಲ್ಲ: ಶಿವಕುಮಾರ್‌
ಬೆಂಗಳೂರು: ‘ಕಾಂಗ್ರೆಸ್ ಪಕ್ಷದ ಕುರಿತು ಆಧಾರರಹಿತ ಆರೋಪ ಮಾಡುತ್ತಾ ಬಾಯಿಗೆ ಬಂದಂತೆ ಮಾತನಾಡುವ ಮೆಂಟಲ್ ಗಿರಾಕಿಗಳ ಹೇಳಿಕೆಗಳಿಗೆ ಪ್ರತಿಕ್ರಿಯಿಸುವುದಿಲ್ಲ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.

‘ಬಿಜೆಪಿ ಸಚಿವರಿಗೆ ಸಿ.ಡಿ. ತೋರಿಸಿ ಪಕ್ಷಕ್ಕೆ ಕರೆದುಕೊಳ್ಳುವ ಪ್ರಯತ್ನವನ್ನು ಕಾಂಗ್ರೆಸ್‌ ಮಾಡುತ್ತಿದೆ’ ಎಂಬ ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ ಹೇಳಿಕೆಗೆ ತಿರುಗೇಟು ನೀಡಿರುವ ಅವರು, ‘ಬಿಜೆಪಿಯಲ್ಲಿ ಆಂತರಿಕವಾಗಿ ಏನೇನಾಗುತ್ತಿದೆಯೋ ಅದನ್ನು ಮೊದಲು ನೋಡಿಕೊಳ್ಳಲಿ. ನಿಮ್ಹಾನ್ಸ್ ಸೇರಬೇಕಾದ ಗಿರಾಕಿಗಳು ಹೇಳಿದ್ದಕ್ಕೆಲ್ಲ ನಾನು ಪ್ರತಿಕ್ರಿಯಿಸುವುದಿಲ್ಲ. ಅವರನ್ನು ಆಸ್ಪತ್ರೆಗೆ ಸೇರಿಸುವುದು ಉತ್ತಮ’ ಎಂದರು. ‘ಡಿ.ಕೆ. ಶಿವಕುಮಾರ್ ಅವರ ಕೈಗೆ ರಾಜ್ಯ ಸಿಕ್ಕರೆ ‘ಡಿ.ಕೆ. ಶಿವಕುಮಾರ್ ಟೋಲ್’ ಎಂಬ ಟೋಲ್ ಹಾಕುತ್ತಾರೆ’ ಎಂಬ ಹೇಳಿಕೆ ಬಗ್ಗೆ ಪ್ರಶ್ನಿಸಿದಾಗ, ‘ಟೋಲ್ ವಿಚಾರವಾಗಿ ಮಾತನಾಡುವುದಾದರೆ, ಸದ್ಯಕ್ಕೆ ಬೆಂಗಳೂರು–ಮೈಸೂರು ರಾಷ್ಟ್ರೀಯ ಹೆದ್ದಾರಿಯ ಟೋಲ್ ವಿಚಾರವಾಗಿ ಮಾತನಾಡೋಣ’ ಎಂದರು.

ನಂಜನಗೂಡು ಕ್ಷೇತ್ರದಲ್ಲಿ ಆರ್‌. ಧ್ರುವನಾರಾಯಣ ಪುತ್ರನಿಗೆ ಟಿಕೆಟ್ ನೀಡುವಂತೆ ಒತ್ತಡ ಇರುವ ಬಗ್ಗೆ ಕೇಳಿದ ಪ್ರಶ್ನೆಗೆ, ‘ಪಕ್ಷದ ಟಿಕೆಟ್ ಹಂಚಿಕೆ ವಿಚಾರದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಂತಿಮ ತೀರ್ಮಾನ ಮಾಡಲಿದ್ದಾರೆ. ನಾನು ಯಾವ ಸಲಹೆ ನೀಡಬೇಕೊ ನೀಡಿದ್ದೇನೆ’ ಎಂದರು.

‘ಇದೇ 16ರಂದು ಒಂದು ಸಭೆ ಕರೆದಿದ್ದು, 17ರಂದು ಪಕ್ಷದ ಚುನಾವಣಾ ಸಮಿತಿ ಸಭೆ ನಡೆಯಲಿದೆ. ಆ ಸಭೆಯಲ್ಲಿ ಪಕ್ಷದ ಅಭ್ಯರ್ಥಿಗಳ ಮೊದಲ ಪಟ್ಟಿ ಅಂತಿಮವಾಗಲಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT