ಸೋಮವಾರ, ಮೇ 10, 2021
25 °C
ಕೋವಿಡ್ ನಿರ್ವಹಣೆ: ಸರ್ಕಾರದ ವಿರುದ್ಧ ಡಿ.ಕೆ.ಶಿವಕುಮಾರ್ ವಾಗ್ದಾಳಿ

ಡಿಕೆಶಿ ಸಮ್ಮುಖದಲ್ಲಿ ‘ಕೈ’ ಹಿಡಿದ ಜೆಡಿಎಸ್ ಮಾಜಿ ಶಾಸಕ, ರಾಮನಗರದ ಕೆ. ರಾಜು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸಮ್ಮುಖದಲ್ಲಿ ಜೆಡಿಎಸ್ ಮಾಜಿ ಶಾಸಕ, ರಾಮನಗರದ ಕೆ. ರಾಜು ಅವರು ಭಾನುವಾರ ಕಾಂಗ್ರೆಸ್ ಸೇರಿದರು.

ರಾಜು ಅವರಿಗೆ ಪಕ್ಷದ ಶಾಲು ಹೊದಿಸಿ, ಶಿವಕುಮಾರ್ ಅವರು ಪಕ್ಷಕ್ಕೆ ಬರಮಾಡಿಕೊಂಡರು. ರಾಜು‌ ಜೊತೆ ಕೆಲವು ಜೆಡಿಎಸ್ ಮುಖಂಡರು ಕೂಡಾ ಕಾಂಗ್ರೆಸ್ ಸೇರ್ಪಡೆಗೊಂಡರು.

ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದ ಸದಸ್ಯ ಡಿ.ಕೆ. ಸುರೇಶ್, ವಿಧಾಪರಿಷತ್‌ ಸದಸ್ಯರಾದ ಸಿ.ಎಂ. ಲಿಂಗಪ್ಪ, ಎಸ್. ರವಿ, ಮಾಜಿ ಶಾಸಕ ಬಾಲಕೃಷ್ಣ ಇದ್ದರು.

ಕಾಂಗ್ರೆಸ್ ಸೇರಿದ ಬಳಿಕ ಮಾತನಾಡಿದ ಕೆ.ರಾಜು‌, ‘ಕುಮಾರಸ್ವಾಮಿ ನನ್ನನ್ನು ಶಾಸಕರನ್ನಾಗಿ ಮಾಡಿದ್ದರು. ನಾನು ಪ್ರಾಮಾಣಿಕವಾಗಿ ಪಕ್ಷಕ್ಕೆ ಕೆಲಸ ಮಾಡಿದ್ದೆ. ಶಾಸಕನಾದ ಒಂದು ವರ್ಷದ ಬಳಿಕ ಮಾನಸಿಕ ಹಿಂಸೆ ಕೊಟ್ಟರು. ಅದನ್ನು ನಾ‌ನು ಇಲ್ಲಿ ಹೇಳಲು ಆಗುವುದಿಲ್ಲ. ಆಗ ಶಾಸಕ ಸ್ಥಾನಕ್ಕೆ ರಾಜೀನಾಮೆ ಮಾಡಲು ಹೊರಟಿದ್ದೆ. ನಂತರ ಸಾಮಾನ್ಯ ಕಾರ್ಯಕರ್ತನಾಗಿಯೂ ಇದ್ದೆ. ಆದರೂ ನ‌ನಗೆ ಕಿರಿಕಿರಿ ಕೊಡಲು ಹೊರಟರು. ಹೀಗಾಗಿ ನಾನು ಕಾಂಗ್ರೆಸ್ ಸೇರಿದ್ದೇನೆ’  ಎಂದರು.

ಡಿ. ಕೆ.ಶಿವಕುಮಾರ್‌ ಮಾತನಾಡಿ, ‘ಪಕ್ಷಕ್ಕೆ ಬರುವವರಿಗೆ ಮುಕ್ತ ಆಹ್ವಾನ ಕೊಟ್ಟಿದ್ದೇವೆ. ಯಾರು ಬೇಕಾದರೂ ಸಿದ್ಧಾಂತ ಒಪ್ಪಿ ಬರಬಹುದು. ನಾವೇನು ಬಲವಂತವಾಗಿ ಕರೆತರುತ್ತಿಲ್ಲ. ನಾವು ಯಾರನ್ನೂ ಒಡೆದು ಇಲ್ಲಿಗೆ ಕರೆದುಕೊಂಡು ಬರುತ್ತಿಲ್ಲ’ ಎಂದರು.

ಇದನ್ನೂ ಓದಿ... ಆಕ್ಸಿಜನ್ ಕೊರತೆ ಇಲ್ಲ, ಬೆಂಗಳೂರಿನಲ್ಲಿ ಬಿಗಿ ಕ್ರಮ ಅನಿವಾರ್ಯ: ಸುಧಾಕರ್

ಕೋವಿಡ್‌ ನಿರ್ವಹಣೆ: ಸರ್ಕಾರ ವಿರುದ್ಧ ಡಿಕಿಶಿ ವಾಗ್ದಾಳಿ: ‘ಸರ್ಕಾರಕ್ಕೆ ಯಾವುದೇ ಯೋಜನೆ ಇಲ್ಲ. 19 ಸಾವಿರ ಬೆಡ್ ಮಾಡಿದ್ದರು. ಹೊಟೇಲ್ ವಶಕ್ಕೆ ಪಡೆದರು. ಆದರೂ, ಬೆಡ್ ಇಲ್ಲ. ಅತಿ ಹೆಚ್ಚು ಆಸ್ಪತ್ರೆ ನಮ್ಮ ರಾಜ್ಯದಲ್ಲಿವೆ. ದೇಶದಲ್ಲೇ ತಜ್ಙ ವೈದ್ಯರು ನಮ್ಮಲ್ಲಿದ್ದಾರೆ. ಆದರೂ ಸರ್ಕಾರ ಕೈಚೆಲ್ಲಿ ಕುಳಿತಿದೆ’ ಎಂದು ವಾಗ್ದಾಳಿ ನಡೆಸಿದರು.

‘ರೆಮ್‌ಡಿಸಿವಿರ್ ಇಂಜೆಕ್ಷನ್ ಸಿಗುತ್ತಿಲ್ಲ. ಆಸ್ಪತ್ರೆಗಳಲ್ಲಿ‌ ಹಾಸಿಗೆಗಳು ಸಿಗುತ್ತಿಲ್ಲ. ಅಧಿಕಾರಿಗಳು ಏನು ಮಾಡುತ್ತಿದ್ದಾರೆ. ಆಸ್ಪತ್ರೆಗಳಿಗೆ ಎಷ್ಟು ಅಧಿಕಾರಿಗಳು ಭೇಟಿ ಮಾಡಿದ್ದಾರೆ. ಸಚಿವರು ರಾಜ್ಯದ ಎಷ್ಟು ಕಡೆ ಭೇಟಿ ಮಾಡಿದ್ದಾರೆ’ ಎಂದು ಪ್ರಶ್ನಿಸಿದರು.

‘ಸರ್ಕಾರ ಯಾರಿಗೂ ನಯಾ ಪೈಸೆ ಸಹಾಯ ಮಾಡುತ್ತಿಲ್ಲ. ಜಿಮ್‌ಗಳು ಸ್ಥಗಿತಗೊಂಡಿವೆ. ವ್ಯಾಪಾರ ಬಿದ್ದು‌ ಹೋಗುತ್ತಿದೆ. ಜನರ ಆರೋಗ್ಯ ಹದಗೆಡುತ್ತಿದೆ. ಮಕ್ಕಳ ಭವಿಷ್ಯದ ಬಗ್ಗೆ ಪೋಷಕರಿಗೆ ಆತಂಕವಾಗಿದೆ.‌ ಸರ್ಕಾರ ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದೆಯೇ' ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಜನ ಇದ್ದರೆ ಜೀವನ, ಅವರಿದ್ದರೆ ರಾಜ್ಯ, ಆರ್ಥಿಕತೆ. ಮೊದಲು ಜನರನ್ನು ಉಳಿಸಿಕೊಳ್ಳುವ ಕೆಲಸ ಮಾಡಬೇಕು. ಜನರ ಜೀವದ ಜೊತೆ ಕೇಂದ್ರ- ರಾಜ್ಯ ಸರ್ಕಾರ ಚೆಲ್ಲಾಟವಾಡುತ್ತಿದೆ’ ಎಂದು ದೂರಿದರು.

'ಗಂಟೆ ಹೊಡೆಯಿರಿ ಅಂದರು. ಗಂಟೆ ಹೊಡೆದೆವು. ದೀಪ‌ ಹಚ್ಚಿ ಅಂದರು. ದೀಪ‌ ಹಚ್ಚಿದೆವು. ಚಪ್ಪಾಳೆ ಹೊಡೆಯಿರಿ ಅಂದರು‌. ಚಪ್ಪಾಳೆಯನ್ನೂ‌ ಹೊಡೆದೆವು. ಲಾಕ್ ಡೌನ್ ಮಾಡಿದರೂ ಫಾಲೋ ಮಾಡಿದೆವು. ಇಷ್ಟೆಲ್ಲಾ ಮಾಡಿದರೂ ನಿಯಂತ್ರಣ ಮಾಡಲು ಆಗುತ್ತಿಲ್ಲ. ನಾವು ಬದುಕುತ್ತೇ, ಇಲ್ವೋ ಎಂಬ ಆತಂಕ ಜನರಿಗಿದೆ. ಒಂದು ವರ್ಷ ಸರ್ಕಾರಕ್ಕೆ ಸಹಕಾರ ಕೊಟ್ಟಿದ್ದೇವೆ. ಪರಿಸ್ಥಿತಿ ಕೈಮೀರಿ ಹೋಗಿದೆ ಎಂದು ಆರೋಗ್ಯ ಸಚಿವರು ಈಗ ಹೇಳುತ್ತಿದ್ದಾರೆ. ಸರ್ಕಾರ ಇದೆಯೋ, ಇಲ್ವೋ ಗೊತ್ತಾಗ್ತಿಲ್ಲ' ಎಂದು ಕಿಡಿಕಾರಿದರು.

‘ಮನೆಗೆ ಬೆಂಕಿ ಬಿದ್ದಾಗ ಬಾವಿ ತೋಡಲು ಸರ್ಕಾರ ಹೊರಟಿದೆ. ಕೋವಿಡ್ ನಿಯಂತ್ರಣಕ್ಕೆ ಇಲಾಖೆಗಳ ಅಧಿಕಾರಿಗಳನ್ನು ಬಳಸಿಕೊಳ್ಳಿ. ಅಭಿವೃದ್ಧಿ ಕೆಲಸ ನಿಲ್ಲಿಸಿ. ಆರೋಗ್ಯಕ್ಕೆ ಒತ್ತು ಕೊಡಿ. ಕೋವಿಡ್‌ ನಿರ್ವಹಿಸಲು ಸದ್ಯಕ್ಕೆ ₹ 300 ಕೋಟಿ ಹಣ ಮೀಸಲಿಡಿ’ ಎಂದು ಸಲಹೆ ನೀಡಿದರು.

‘ಹೆಣ ಹೂಳಲು ಜಾಗವಿಲ್ಲ. ಕಂದಾಯ ಭೂಮಿ ಗುರುತಿಸಿ ಅವಕಾಶ ಮಾಡಿಕೊಡಿ. ಜನರ ಬಗ್ಗೆ ಸರಿಯಾದ ಡಾಟಾ ಸರ್ಕಾರಕ್ಕಿಲ್ಲ. ಉದ್ಯೋಗ ಕಳೆದುಕೊಂಡವರ ಬಗ್ಗೆ ಮಾಹಿತಿ ಇಲ್ಲ. ಸರ್ಕಾರ ಇನ್ನೇನು‌ ಮಾಡುತ್ತಿದೆ. ಕೋವಿಡ್‌ಗೆ ಉಚಿತ ಚಿಕಿತ್ಸೆ ಕಲ್ಪಿಸಬೇಕು’ ಎಂದು ಆಗ್ರಹಿಸಿದರು.

‘ಪ್ರಧಾನಿಗೆ ಜನರ ಆರೋಗ್ಯ ಬೇಕಿಲ್ಲ. ಮತ ಕೊಡಿ ಅಂತ ಪ್ರಚಾರಕ್ಕೆ ಒತ್ತು ಕೊಡುತ್ತಾರೆ. ಚುನಾವಣೆಯೇ ಇವರಿಗೆ ಮುಖ್ಯವಾಗಿದೆ. ₹ 20 ಲಕ್ಷ ಕೋಟಿ ಕೇಂದ್ರ ಸರ್ಕಾರ ಘೋಷಣೆ ಮಾಡಿದೆ. ಇಲ್ಲಿಯವರೆಗೆ ಯಾರಿಗೆ ಆ ಹಣ ಸಿಕ್ಕಿದೆ. ಜಿಎಸ್‌ಟಿ ಕಟ್ಟುವ ದುಡ್ಡಿಗೂ ದಂಡ ಹಾಕುತ್ತಿದ್ದಾರೆ. ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆಯಾಗಿದೆ. ಸಿಮೆಂಟ್, ಗೊಬ್ಬರದ ದರ ಗಗನಕ್ಕೀರಿದೆ. ರೈತರು ಪರದಾಡುತ್ತಿದ್ದಾರೆ. ಹೆಣ್ಣುಮಕ್ಕಳು ಉದ್ಯೋಗ ಕಳೆದುಕೊಂಡಿದ್ದಾರೆ. ಸರ್ಕಾರ ಜನರಿಗೆ ಸಂಪೂರ್ಣ ಉಚಿತ ಚಿಕಿತ್ಸೆ ನೀಡಬೇಕು. ಸರಿಯಾದ ಮಾರ್ಗಸೂಚಿ ಹೊರಡಿಸಬೇಕು. ಶಿಕ್ಷಣ ವಿಚಾರದಲ್ಲಿ ಹೆಚ್ಚಿನ ಗಮನಹರಿಸಬೇಕು’ ಎಂದರು.

ಸಾರಿಗೆ ನೌಕರರ ಮುಷ್ಕರದ ಬಗ್ಗೆ ಮಾತನಾಡಿದ ಶಿವಕುಮಾರ್‌, ‘ಸಾರಿಗೆ ನೌಕರರನ್ನು ಕರೆದು ಮಾತನಾಡಲು ಸಮಸ್ಯೆಯೇನು. ಸರ್ಕಾರಕ್ಕೆ ಪ್ರತಿಷ್ಠೆ ಯಾಕೆ. ಸಾರಿಗೆ ಸಂಸ್ಥೆಯನ್ನು ಖಾಸಗಿಯವರಿಗೆ ಕೊಡಲು ಹೊರಟಿದ್ದೀರಾ’ ಎಂದು ಪ್ರಶ್ನಿಸಿದರು. ‘ನೌಕರರದ್ದು ಸರಿಯೋ, ತಪ್ಪೋ ಗೊತ್ತಿಲ್ಲ. ಮೊದಲು ಅವರನ್ನು ಕರೆದು ಮಾತುಕತೆ ನಡೆಸಿ’ ಎಂದೂ ಆಗ್ರಹಿಸಿದರು.

‘ಸೋಮವಾರ ನಡೆಯಲಿರುವ ಬೆಂಗಳೂರು ಜನಪ್ರತಿನಿಧಿಗಳ ಸಭೆಯಲ್ಲಿ ನಮ್ಮವರೂ (ಕಾಂಗ್ರೆಸ್‌ನವರು) ಭಾಗವಹಿಸುತ್ತಾರೆ. ಸಲಹೆ ಕೊಡುತ್ತಾರೆ. ಲಾಕ್ ಡೌನ್‌ಗೆ ನಮ್ಮ ವಿರೋಧವಿದೆ. ಜೀವ ಉಳಿಯಬೇಕು, ಬದುಕು ಇರಬೇಕು. ಲಾಕ್ ಡೌನ್‌ನಿಂದ ಏನು ಪ್ರಯೋಜನ. ರಾತ್ರಿ ಮಾಡಿದರೆ ಮಾತ್ರ ಉಪಯೋಗವಾಗುತ್ತದೆ. ಹಗಲು ಹೊತ್ತು ಕೊರೊನಾ ಬರುವುದಿಲ್ಲವೇ’ ಎಂದು ಪ್ರಶ್ನಿಸಿದರು.

‘ಕೇವಲ ಸಭೆಗಳನ್ನು ಮಾಡಿದರೆ ಸಾಲದು.‌ ಜನರನ್ನು ಬದುಕಿಸುವ ಕೆಲಸವನ್ನು ಮಾಡಲಿ. ಸರ್ಕಾರ ಅಧಿಕಾರಿಗಳಿಗೆ ನಿರ್ದೇಶನ ಕೊಡಬೇಕು. ಮುಖ್ಯಮಂತ್ರಿ ಒಬ್ಬರೇ ಸರ್ಕಾರ ಅಲ್ಲ. ವ್ಯಾಕ್ಸಿನ್ ಕಾಳಸಂತೆಯಲ್ಲಿ ಮಾರಾಟವಾಗುತ್ತಿದೆ. ಅದನ್ನು ತಡೆಯಬೇಕು. ಜಿಲ್ಲಾ ಪಂಚಾಯ್ತಿ, ತಾಲ್ಲೂಕು ಪಂಚಾಯ್ತಿ ಚುನಾವಣೆ ನಡೆಸಲು ಹೊರಟಿದ್ದಾರೆ.‌ ಕೆಲವು ತಿಂಗಳು ಚುನಾವಣೆ ಮುಂದಕ್ಕೆ ಹಾಕಲಿ. ಇಂಥ ಸಂದರ್ಭದಲ್ಲೂ ಚುನಾವಣೆಗಳು ಬೇಕೇ’ ಎಂದೂ ಪ್ರಶ್ನಿಸಿದರು.

ಖಾಸಗಿ ಆಸ್ಪತ್ರೆಗೆ ಹಣ ಸಂದಾಯ ಆಗಿಲ್ಲ: ಸಂಸದ ಡಿ.ಕೆ.ಸುರೇಶ್, ‘ಖಾಸಗಿ‌ ಆಸ್ಪತ್ರೆಗಳಿಗೆ ಸರ್ಕಾರ ಕೊಡಬೇಕಾದ ಬಾಕಿ‌ ಹಾಗೇ ಉಳಿದಿದೆ. ಬಾಕಿ ಯಾಕೆ ಉಳಿಸಿಕೊಂಡಿದ್ದಾರೊ ಗೊತ್ತಿಲ್ಲ. ಕಮಿಷನ್ ಕೊಡುವವರಿಗೆ ಬಿಲ್ ಕೊಡುತ್ತಾರೆ. ಕೊರೊನಾ ಸಮಯದಲ್ಲಿ ಹಾಸಿಗೆ ಕೊಟ್ಟವರಿಗೆ ಬಿಲ್ ಇಲ್ಲ. ಚಿಕಿತ್ಸೆ ನೀಡಿದವರಿಗೆ ಹಣ ಕೊಡದಿದ್ದರೆ ಹೇಗೆ. ಇದು ಉದ್ದೇಶಪೂರ್ವಕವಾಗಿ ಮಾಡಿರುವಂಥದ್ದು. ಈಗ ಬೆಡ್ ಕೊಡಿ ಅಂದರೆ ಯಾರು ಸಹಾಯ ಮಾಡುತ್ತಾರೆ. ಖಾಸಗಿ ಆಸ್ಪತ್ರೆಗೆ ಹಣ ಸಂದಾಯ ಆಗದೇ ಇರುವುದರಿಂದ ಸಮಸ್ಯೆ ಆಗುತ್ತಿದೆ’ ಎಂದರು.

‘ಶವಸಂಸ್ಕಾರಕ್ಕೂ ಸರ್ಕಾರ ಸರಿಯಾದ ವ್ಯವಸ್ಥೆ ಮಾಡುತ್ತಿಲ್ಲ. ಅಂಥ ಸ್ಥಿತಿಗೆ ಸರ್ಕಾರ ರಾಜ್ಯದ ಜನರನ್ನು ತಂದಿಟ್ಟಿದೆ. ಶವಸಂಸ್ಕಾರಕ್ಕೆ ಅವಕಾಶ ಕೊಡಿ ಎಂದು ಹಿರಿಯರು, ಸಾಹಿತಿಗಳು ಕಣ್ಣಲ್ಲಿ ನೀರು ಹಾಕುತ್ತಿದ್ದಾರೆ. ಇಂಥ ನೀಚ ಸರ್ಕಾರವಿದು. ಚಿತಾಗಾರಗಳಲ್ಲಿ ಕ್ಯೂ ನಿಲ್ಲಬೇಕಾಗಿದೆ’ ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಲಾಕ್‌ಡೌನ್‌ ಕುರಿತು ಪ್ರತಿಕ್ರಿಯಿಸಿದ ಅವರು, ‘ಇದೊಂದು ಅವೈಜ್ಞಾನಿಕ ಕ್ರಮ, ಸರ್ಕಾರದ ತಂತ್ರಗಾರಿಕೆ. ರಾತ್ರಿ ವೇಳೆ ಜನ ಓಡಾಡುವುದು ಶೇ 1 ಇಲ್ಲವೇ 2 ರಷ್ಟು. ಶೇ 90ರಷ್ಟು ಮಂದಿ ಬೆಳಿಗ್ಗೆಯೇ ಓಡಾಡುವುದು. ಬೆಳಿಗ್ಗೆ ಓಡಾಡುವವರಿಗೆ ಕಠಿಣ ಕ್ರಮ ಕೈಗೊಳ್ಳಲಿ. ಕಠಿಣ ಕಾನೂನು ಜಾರಿಗೆ ತರಲಿ. ಅದು ಬಿಟ್ಟು, ರಾತ್ರಿ ಓಡಾಡಬೇಡಿ ಅಂದ್ರೆ ಹೇಗೆ? ಸರಕು ಸಾಗಣಿಕೆ, ಟ್ರಾವೆಲರ್ಸ್‌‌ ಬಿಟ್ಟರೆ ಉಳಿದವರೆಲ್ಲ ಮನೆಯಲ್ಲಿ ‌ಇರುತ್ತಾರೆ. ಬೇರೆ ಯಾರು ರಾತ್ರಿ ಹೊತ್ತು ಓಡಾಡಲ್ಲ. ರಾತ್ರಿ ಕರ್ಫ್ಯೂ ಅಂತ ಹುಟ್ಟು ಹಾಕಿದ್ದಾರೆ. ಅವೈಜ್ಞಾನಿಕವಾಗಿ ರಾತ್ರಿ ಕರ್ಪ್ಯೂ ಜಾರಿ ಮಾಡಿದ್ದಾರೆ’ ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು