ಮಂಗಳವಾರ, ಜುಲೈ 27, 2021
21 °C
ಮುಂದಿನ ಮುಖ್ಯಮಂತ್ರಿ ಹೇಳಿಕೆ ಮಹತ್ವ ಬೇಡ

ಪದಾಧಿಕಾರಿಗಳ ಬದಲಾವಣೆಗೆ ಒತ್ತು: ಡಿಕೆಶಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ‘ಜಿಲ್ಲಾ ಪಂಚಾಯ್ತಿ, ತಾಲ್ಲೂಕು ಪಂಚಾಯ್ತಿ ಹಾಗೂ ಪಾಲಿಕೆ ಚುನಾವಣೆಗಳಿಗೆ ಪಕ್ಷವನ್ನು ಸನ್ನದ್ಧಗೊಳಿಸುವ ನಿಟ್ಟಿನಲ್ಲಿ ಕಾಂಗ್ರೆಸ್‌ನ ಜಿಲ್ಲಾ ಹಾಗೂ ಬ್ಲಾಕ್‌ ಮಟ್ಟದ ಪದಾಧಿಕಾರಿಗಳನ್ನು ಬದಲಿಸುವ ಚಿಂತನೆ ನಡೆದಿದೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾಜ್ಯದ ಅರ್ಧದಷ್ಟು ಜಿಲ್ಲೆಗಳಲ್ಲಿ ಕೊರೊನಾದಿಂದ ಸಮಸ್ಯೆಗೆ ಒಳಗಾಗಿರುವ ಜನರ ನೆರವಿಗೆ ಬಾರದ ಹಾಗೂ ಪಕ್ಷ ಸಂಘಟನೆಯಲ್ಲಿ ವಿಫಲರಾಗಿರುವ ಅಧ್ಯಕ್ಷರನ್ನೂ ಒಳಗೊಂಡಂತೆ ಆಯಾ ಘಟಕಗಳ ಪದಾಧಿಕಾರಿಗಳನ್ನು ಬದಲಿಸುವ ಅಗತ್ಯವಿದೆ’ ಎಂದು ಅವರು ಅಭಿಪ್ರಾಯಪಟ್ಟರು.

‘ಪಕ್ಷವನ್ನು ಪುನಶ್ಚೇತನಗೊಳಿಸುವ ನಿಟ್ಟಿನಲ್ಲಿ ಕೆಲವು ಬದಲಾವಣೆಗಳನ್ನು ತರುವುದು ಅಗತ್ಯ. ಕೆಪಿಸಿಸಿ ಅಧ್ಯಕ್ಷನಾದ ನಂತರ ಕೆಲವು ನಿಷ್ಕ್ರಿಯ ಅಧ್ಯಕ್ಷರು ಇರುವುದನ್ನು ಗಮನಿಸಿದ್ದೇನೆ. ಅಂಥವರನ್ನು ಬದಲಿಸಿ, ಕಾರ್ಯಕರ್ತರಲ್ಲೂ ಹುರುಪು ತುಂಬುವ ಕೆಲಸ ಮಾಡಬೇಕಿದೆ’ ಎಂದು ಹೇಳಿದರು.

‘ರಾಜ್ಯದಲ್ಲಿ ಈಗ ಮುಖ್ಯಮಂತ್ರಿ ಸ್ಥಾನ ಖಾಲಿ ಇಲ್ಲ. ಆದರೂ ಕೆಲವರು ಮುಂದಿನ ಮುಖ್ಯಮಂತ್ರಿ ಯಾರು ಆಗಲಿದ್ದಾರೆ ಎಂಬ ಗೊಂದಲಮಯ ಹೇಳಿಕೆ ನೀಡುತ್ತಿದ್ದಾರೆ. ಈ ಬಗ್ಗೆ ಮಹತ್ವ ನೀಡುವ ಅಗತ್ಯ ಇಲ್ಲ’ ಎಂದು ಹೇಳಿದರು.

‘ಪಕ್ಷದ ಮುಖಂಡರಾದ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರೊಂದಿಗೆ ಚರ್ಚಿಸಿ ಪಕ್ಷ ಸಂಘಟನೆ ಹಾಗೂ ಪದಾಧಿಕಾರಿಗಳ ಬದಲಾವಣೆಗೆ ಸಂಬಂಧಿಸಿದಂತೆ ಒಪ್ಪಿಗೆ ಪಡೆಯುವೆ’ ಎಂದು ಅವರು ಹೇಳಿದರು.

ಸದನ ಸಮಿತಿ ರಚಿಸಿ:
‘ಜಲಸಂಪನ್ಮೂಲ ಇಲಾಖೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮದ ತನಿಖೆಗಾಗಿ ಜಂಟಿ ಸದನ ಸಮಿತಿ ರಚಿಸಿ ತನಿಖೆ ನಡೆಸುವಂತೆ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಕೋರಿದ್ದೇವೆ. ಕೂಡಲೇ ವಿಧಾನ ಮಂಡಲದ ‘ವರ್ಚುವಲ್’ ಅಧಿವೇಶನ ನಡೆಸುವಂತೆಯೂ ಆಗ್ರಹಿಸಲಾಗಿದೆ’ ಎಂದರು.
 

ನಲಪಾಡ್‌– ರಕ್ಷಾ ಸಂಧಾನ ಸಭೆ

ನವದೆಹಲಿ: ಯುವ ಕಾಂಗ್ರೆಸ್‌ನ ರಾಜ್ಯ ಘಟಕದ ಅಧ್ಯಕ್ಷ ಸ್ಥಾನವನ್ನು ಅಂತಿಮಗೊಳಿಸುವ ನಿಟ್ಟಿನಲ್ಲಿ ಶಾಂತಿನಗರ ಶಾಸಕ ಎನ್‌.ಎ. ಹ್ಯಾರಿಸ್‌ ಅವರ ಪುತ್ರ ಮೊಹಮ್ಮದ್‌ ನಲಪಾಡ್‌ ಹಾಗೂ ಮಾಜಿ ಸಚಿವ ಎಂ.ಆರ್‌. ಸೀತಾರಾಮ್‌ ಅವರ ಪುತ್ರ ರಕ್ಷಾ ರಾಮಯ್ಯ ನಡುವೆ ಸಂಧಾನ ಏರ್ಪಡಿಸಲು ಕಾಂಗ್ರೆಸ್‌ ಯುವ ಘಟಕ ಪ್ರಯತ್ನಿಸುತ್ತಿದೆ.

ಕಳೆದ ಫೆಬ್ರುವರಿಯಲ್ಲೇ ಅಧ್ಯಕ್ಷ ಸ್ಥಾನದ ಚುನಾವಣೆ ಮುಗಿದಿದೆ. ಹಲ್ಲೆಯಂತಹ ಗಂಭೀರ ಅಪರಾಧ ಪ್ರಕರಣದಲ್ಲಿ ಭಾಗಿಯಾಗಿರುವ ಮೊಹಮ್ಮದ್‌ ನಲಪಾಡ್‌ ಅತಿ ಹೆಚ್ಚು ಮತ ಪಡೆದಿದ್ದರೂ ಅಧ್ಯಕ್ಷ ಸ್ಥಾನ ದೊರೆಯಲಿಲ್ಲ. ಮತ ಗಳಿಕೆಯ ಆಧಾರದಲ್ಲಿ ನಂತರದ ಸ್ಥಾನದಲ್ಲಿರುವ ರಕ್ಷಾ ರಾಮಯ್ಯ ಅವರಿಗೆ ಅಧ್ಯಕ್ಷ ಸ್ಥಾನವನ್ನು ನೀಡಲು ನಿರ್ಧರಿಸಲಾಗಿತ್ತು.

‘ನಿಯಮಾನುಸಾರ ಸ್ಪರ್ಧೆಗೆ ಅವಕಾಶ ನೀಡಿದ್ದರಿಂದ ಅತಿ ಹೆಚ್ಚು ಮತ ಪಡೆದಿದ್ದೇನೆ. ಆದರೂ, ನನ್ನ ಆಯ್ಕೆಯನ್ನು ಮಾನ್ಯ ಮಾಡದೆ, ಅನರ್ಹಗೊಳಿಸಲಾಗಿದೆ’ ಎಂದು ನಲಪಾಡ್‌ ಪ್ರಶ್ನಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಇಬ್ಬರೂ ಯುವ ಮುಖಂಡರ ನಡುವೆ ಯುವ ಕಾಂಗ್ರೆಸ್‌ ಉಸ್ತುವಾರಿ ಕೃಷ್ಣ ಅಲ್ಲವಾರು ನೇತೃತ್ವದಲ್ಲಿ ಸಂಧಾನ ಸಭೆ ನಡೆಸಲಾಗುತ್ತಿದೆ. ಮುಂದಿನ ಎರಡು ದಿನಗಳ ಅವಧಿಯಲ್ಲಿ ಈ ಸಂಬಂಧ ಅಂತಿಮ ತೀರ್ಮಾನ ಹೊರಬರುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು