ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಗ್ಗಕ್ಕೂ 40 ಪರ್ಸೆಂಟ್ ಕಮೀಷನ್ ಕೊಡಬೇಕಾ? ಪ್ರಿಯಾಂಕ್‌ ಖರ್ಗೆ ಪ್ರಶ್ನೆ

ರಾಹುಲ್‌ ಗಾಂಧಿ ಭದ್ರತೆಯಲ್ಲಿ ವೈಫಲ್ಯ; ಪ್ರಿಯಾಂಕ್‌ ಖರ್ಗೆ ಗಂಭೀರ ಆರೋಪ
Last Updated 3 ಅಕ್ಟೋಬರ್ 2022, 14:49 IST
ಅಕ್ಷರ ಗಾತ್ರ

ಮಂಡ್ಯ: ‘ರಾಹುಲ್‌ ಗಾಂಧಿ ಅವರಿಗೆ ಭದ್ರತೆ ನೀಡುವಲ್ಲಿ ಬಿಜೆಪಿ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ. ಜನರನ್ನು ನಿಯಂತ್ರಿಸುವ ಭದ್ರತಾ ಹಗ್ಗ ತರುವುದಕ್ಕೂ 40 ಪರ್ಸೆಂಟ್‌ ಕಮೀಷನ್‌ ಕೊಡಬೇಕಾ’ ಎಂದು ಕೆಪಿಸಿಸಿ ಸಂವಹನ ವಿಭಾಗದ ಮುಖ್ಯಸ್ಥ, ಶಾಸಕ ಪ್ರಿಯಾಂಕ್‌ ಖರ್ಗೆ ಸೋಮವಾರ ಪ್ರಶ್ನಿಸಿದರು

‘ಮಂಡ್ಯ ಜಿಲ್ಲೆ ಪ್ರವೇಶಿಸುವಾಗ ಮೈಸೂರು ಪೊಲೀಸರು ಭದ್ರತಾ ಹಗ್ಗವನ್ನು ಮಂಡ್ಯ ಪೊಲೀಸರಿಗೆ ಹಸ್ತಾಂತರ ಮಾಡಲಿಲ್ಲ. ಇಲ್ಲಿಯ ಪೊಲೀಸರು ಬೇರೆ ಹಗ್ಗ ತಂದಿರಲಿಲ್ಲ, ಇದರಿಂದ ಗೊಂದಲ ಉಂಟಾಯಿತು. ಆದರೂ ಕೈಕೈ ಜೋಡಿಸಿ ರಾಹುಲ್‌ಗಾಂಧಿ ಅವರಿಗೆ ಭದ್ರತೆ ನೀಡಿದ ಪೊಲೀಸರಿಗೆ ಕೃತಜ್ಞತೆ ಸಲ್ಲಿಸುತ್ತೇವೆ. ಭದ್ರತೆ ವಿಚಾರದಲ್ಲಿ ರಾಜ್ಯ ಸರ್ಕಾರ ನಿರ್ಲಕ್ಷ್ಯ ವಹಿಸಿದ್ದು ಬೇಕಂತಲೇ ಹೀಗೆ ಮಾಡುತ್ತಿರುವ ಅನುಮಾನವಿದೆ’ ಎಂದು ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.

‘ಮೈಸೂರು ಬಳಿ ರಾಹುಲ್‌ ಗಾಂಧಿಯವರು ಮಳೆಯಲ್ಲಿ ಮಾತನಾಡುವಾಗಲೂ ಭದ್ರತೆ ಇರಲಿಲ್ಲ, ಕಡಕೋಳ– ಬಂಡಿಪಾಳ್ಯ ರಸ್ತೆಯಲ್ಲಿ ಹೊರಟಾಗ ಅವರು ಅರ್ಧ ಗಂಟೆ ಟ್ರಾಫಿಕ್‌ ಜಾಮ್‌ನಲ್ಲಿ ಸಿಲುಕಿದ್ದರು. ಈ ಭದ್ರತಾ ವೈಫಲ್ಯಕ್ಕೆ ಯಾರು ಹೊಣೆ? ಶಿಷ್ಟಾಚಾರದಂತೆ ಭದ್ರತೆ ನೀಡುವುದು ರಾಜ್ಯ ಸರ್ಕಾರದ ಜವಾಬ್ದಾರಿಯಾಗಿತ್ತು. ಆದರೆ, ಸರ್ಕಾರ ರಾಹುಲ್‌ ಗಾಂಧಿಯವರ ಪಾದಯಾತ್ರೆಯನ್ನು ದುರ್ಬಲಗೊಳಿಸುವ ಹುನ್ನಾರ ನಡೆಸುತ್ತಿದೆ’ ಎಂದು ಕಿಡಿಕಾರಿದರು.

‘ಬಡತನ, ಅಸಮಾನತೆ, ನಿರುದ್ಯೋಗ ದೇಶವನ್ನು ಅಸುರನಂತೆ ಕಾಡುತ್ತಿದೆ ಎಂದು ಆರ್‌ಎಸ್‌ಎಸ್‌ನ ಅಗ್ರ ನಾಯಕ ದತ್ತಾತ್ರೇಯ ಹೊಸಬಾಳೆ ತಿಳಿಸಿದ್ದಾರೆ. 20 ಕೋಟಿ ಜನ ಬಡತನ ರೇಖೆಯಿಂತ ಕೆಳಗಿದ್ದಾರೆ, ಶೇ 20ರಷ್ಟು ಸಂಪತ್ತು ಶೇ 1ರಷ್ಟು ಜನರ ಕೈಲಿದೆ. ಇದಕ್ಕೆ ಕೇಂದ್ರ, ರಾಜ್ಯ ಸರ್ಕಾರಗಳೇ ಹೊಣೆ ಎಂದೂ ತಿಳಿಸಿದ್ಧಾರೆ. ಬಿಜೆಪಿ ಸರ್ಕಾರ ಮೊದಲು ತಮ್ಮ ಆರ್‌ಎಸ್‌ಎಸ್‌ ಗುರುವಿನ ಪ್ರಶ್ನೆಗಳಿಗೆ ಉತ್ತರ ನೀಡಲಿ’ ಎಂದು ಸವಾಲು ಹಾಕಿದರು.

‘ಬಿಜೆಪಿ ಮುಖಂಡ ರವಿಕುಮಾರ್‌ ಅವರು ರಾಹುಲ್‌ ಗಾಂಧಿಯವರಿಗೆ 10 ಪ್ರಶ್ನೆ ಕೇಳಿದ್ದಾರೆ. ಅದಕ್ಕೂ ಮೊದಲು ಹೊಸಬಾಳೆ ಕೇಳಿರುವ ಪ್ರಶ್ನೆಗಳಿಗೆ ಅವರು ಉತ್ತರ ನೀಡಲಿ. ಉತ್ತರ ನೀಡಿದರೆ ಅವರೇ ರಾಹುಲ್‌ ಗಾಂಧಿಯವರ ಜೊತೆ ಪಾದಯಾತ್ರೆಗೆ ಬರುತ್ತಾರೆ. ಪಾದಯಾತ್ರೆಯಲ್ಲಿ ನಕ್ಸಲರು ಪಾಲ್ಗೊಳ್ಳುತ್ತಿದ್ದಾರೆ ಎಂದೂ ಆರೋಪಿಸಿದ್ದಾರೆ. ಇಂಟಿಲಿಜೆನ್ಸ್‌ ಸಿಬ್ಬಂದಿಯನ್ನು ಪಾದಯಾತ್ರೆಗೆ ಕಳುಹಿಸಿ ಪರಿಶೀಲನೆ ನಡೆಸಲಿ’ ಎಂದರು.

‘ಧರ್ಮದ ಆಧಾರದ ಮೇಲೆ ದೇಶ ವಿಭಜನೆಯಾಗಬೇಕು ಎಂದು ಮೊದಲು ಹೇಳಿದವರು ಸಾವರ್ಕರ್‌ ಅವರೇ ಹೊರತು ನೆಹರೂ ಅಲ್ಲ. ಆ ಹೇಳಿಕೆಯನ್ನು ಡಾ.ಬಿ.ಆರ್‌.ಅಂಬೇಡ್ಕರ್‌ ಪ್ರಶ್ನಿಸಿದ್ದರು. ದೇಶ ವಿಭಜನೆ ಕುರಿತು ಸಾವರ್ಕರ್‌ ಹಾಗೂ ಮೊಹಮ್ಮದ್‌ ಅಲಿ ಜಿನ್ನಾ ನಡುವೆ ಒಳ ಒಪ್ಪಂದ ಇತ್ತು ಎಂಬ ಅನುಮಾನವಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT