ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾನಪದ ಕಲಾವಿದರ ಸಾಕ್ಷ್ಯಚಿತ್ರ: ಕಡತದಲ್ಲೇ ಉಳಿದ ‘ಡಿಜಿಟಲ್ ಆತ್ಮಕಥೆ’

ಜಾನಪದ ಕಲಾವಿದರ ಸಾಕ್ಷ್ಯಚಿತ್ರ ನಿರ್ಮಾಣಕ್ಕೆ ಆರು ವರ್ಷಗಳಾದರೂ ಸಿಗದ ಅನುಮೋದನೆ
Last Updated 21 ಅಕ್ಟೋಬರ್ 2021, 19:18 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕ ಜಾನಪದ ಅಕಾಡೆಮಿಯು ಕಲಾವಿದರ ಸಾಕ್ಷ್ಯಚಿತ್ರ ನಿರ್ಮಾಣಕ್ಕೆ ಯೋಜನೆ ರೂಪಿಸಿ ಆರು ವರ್ಷಗಳು ಕಳೆದರೂ ಸರ್ಕಾರದಿಂದ ಈವರೆಗೂ ಅನುಮೋದನೆ ಸಿಕ್ಕಿಲ್ಲ. ಹೀಗಾಗಿ, ‘ಡಿಜಿಟಲ್ ಆತ್ಮಕಥೆ’ ಹೊಂದುವ ಕಲಾವಿದರ ಕನಸುಗಳು ಕಡತದಲ್ಲಿಯೇ ಕಮರಿಹೋಗುತ್ತಿವೆ.

ಕಲೆ ಹಾಗೂ ಕಲಾವಿದರ ಜೀವನವನ್ನು ಪರಿಚಯಿಸುವ ಉದ್ದೇಶದಿಂದ 2015ರಲ್ಲಿ ಅಕಾಡೆಮಿಯ ಅಂದಿನ ಅಧ್ಯಕ್ಷ ಪಿಚ್ಚಳ್ಳಿ ಶ್ರೀನಿವಾಸ ಅವರು ‘ಡಿಜಿಟಲ್ ಆತ್ಮಕಥೆ’ ಯೋಜನೆ ರೂಪಿಸಿದ್ದರು. ಇದಕ್ಕಾಗಿ ₹ 2.5 ಕೋಟಿ ವಿಶೇಷ ಅನುದಾನ ಮೀಸಲಿಡಲಾಗಿತ್ತು. ಆದರೆ, ಈವರೆಗೂ ಜಾನಪದ ಕಲಾವಿದರ ಸಾಕ್ಷ್ಯಚಿತ್ರ ನಿರ್ಮಾಣ ಸಾಕಾರವಾಗಿಲ್ಲ.‌

ಡೊಳ್ಳು ಕುಣಿತ, ಗೊರವರ ಕುಣಿತ, ತಮಟೆ ವಾದನ, ಪಟ ಕುಣಿತ, ಕಂಸಾಳೆ, ಪೂಜಾ ಕುಣಿತ ಸೇರಿದಂತೆ ಜಾನಪದ ಕಲೆಯ ವಿವಿಧ ಪ್ರಕಾರಗಳಲ್ಲಿ ಸಾಧನೆ ಮಾಡಿದ ಕಲಾವಿದರ ಪಟ್ಟಿಯನ್ನು ಈ ಹಿಂದೆ ಸಿದ್ಧ ಪಡಿಸಲಾಗಿತ್ತು. ಸಾಕ್ಷ್ಯಚಿತ್ರ ನಿರ್ಮಾಣಕ್ಕೆ ಸಂಬಂಧಿಸಿದಂತೆ ನಿರ್ದೇಶಕರ ಆಯ್ಕೆಗೆ ಸಾಹಿತಿ ಬರಗೂರು ರಾಮಚಂದ್ರಪ್ಪ ಅವರ ಅಧ್ಯಕ್ಷತೆಯಲ್ಲಿ ಸಮಿತಿಯನ್ನೂ ರಚನೆ ಮಾಡಲಾಗಿತ್ತು.

ಪ್ರತಿ ಕಲಾವಿದರ ಬಗ್ಗೆ 10 ಗಂಟೆ ಚಿತ್ರೀಕರಣ ನಡೆಸಿ, ಅವರ ಕುಟುಂಬದ ಸದಸ್ಯರು ಹಾಗೂ ಆಪ್ತರಿಂದಲೂ ಮಾಹಿತಿ ಕಲೆ ಹಾಕುವುದು ಯೋಜನೆಯ ಭಾಗವಾಗಿತ್ತು.

ಸಿಗದ ಅನುಮತಿ: ಚಿತ್ರೀಕರಣವನ್ನುಒಂದು ಗಂಟೆಗೆ ಪರಿಷ್ಕರಿಸಿ, ಅರ್ಧ ಗಂಟೆಯ ಎರಡು ಕಂತುಗಳನ್ನು ಹೊರತರಲು ಯೋಜನೆ ರೂಪಿಸಲಾಗಿತ್ತು.

ಪ್ರತಿ ಸಾಕ್ಷ್ಯಚಿತ್ರಕ್ಕೆ ₹ 4 ಲಕ್ಷ ವೆಚ್ಚವಾಲಿದೆ ಎಂದು ಅಕಾಡೆಮಿ ಅಂದಾಜಿಸಿತ್ತು. ಈ ಯೋಜನೆಗೆ ಟೆಂಡರ್‌
ರಹಿತ ಅನುಮತಿ ನೀಡುವಂತೆ ಅಕಾಡೆಮಿಯು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಆದರೆ, ಸರ್ಕಾರ ಇದಕ್ಕೆ ಅವಕಾಶ ನೀಡದಿದ್ದರಿಂದ ಯೋಜನೆ ನನೆಗುದಿಗೆ ಬಿದ್ದಿದೆ.

‘ಕಲಾವಿದರು ಬಳಸುವ ವಸ್ತ್ರಗಳು, ವಾದ್ಯಗಳು ಹಾಗೂ ಹಾಡುವ ಶೈಲಿಯನ್ನೂ ಮರು ನಿರ್ಮಾಣ ಮಾಡಲು ಡಿಜಿಟಲ್ ಆತ್ಮಕಥೆ ಸಹಕಾರಿಯಾಗಲಿದೆ. ವಾರ್ತಾ ಇಲಾಖೆ ನಿರ್ಮಿಸಿದ ಸಾಕ್ಷ್ಯಚಿತ್ರಗಳ ರೀತಿ ಆಗಬಾರದು ಎಂಬ ಕಾರಣಕ್ಕೆ ಟೆಂಡರ್ ರಹಿತ ಅನುಮತಿ ಕೇಳಲಾಗಿತ್ತು. ಕಲೆ ಹಾಗೂ ಕಲಾವಿದರ ಬಗ್ಗೆ
ಸರ್ಕಾರಗಳು ಆಸಕ್ತಿ ತೋರದಿದ್ದರಿಂದ ಈವರೆಗೂ ಅದು ಸಾಕಾರಗೊಂಡಿಲ್ಲ’ ಎಂದು ಅಕಾಡೆಮಿಯ ಮಾಜಿ ಅಧ್ಯಕ್ಷ ಹಾಗೂ ಕಲಾವಿದಪಿಚ್ಚಳ್ಳಿ ಶ್ರೀನಿವಾಸ ಬೇಸರ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT