ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧರ್ಮದ ಹಾದಿಯಲ್ಲಿ ನಡೆದಾಗ ಮಾತ್ರ ದೇಶದ ಅಭಿವೃದ್ಧಿ

ಸಿದ್ದಲಿಂಗೇಶ್ವರ ಸ್ವಾಮಿ ದೇವಸ್ಥಾನದ ಪ್ರಾರ್ಥನಾ ಮಂದಿರ ಉದ್ಘಾಟನೆ ಕಾರ್ಯಕ್ರಮದಲ್ಲಿ ಬಿ.ಎಸ್‌.ವೈ ಅಭಿಮತ
Last Updated 3 ಏಪ್ರಿಲ್ 2022, 16:04 IST
ಅಕ್ಷರ ಗಾತ್ರ

ಬೆಂಗಳೂರು: ‘ಎಲ್ಲರೂ ಧರ್ಮದ ಹಾದಿಯಲ್ಲಿ ನಡೆದಾಗ ಮಾತ್ರ ದೇಶದ ಅಭಿವೃದ್ಧಿ ಹಾಗೂ ಆಡಳಿತ ವ್ಯವಸ್ಥೆ ಸುಲಲಿತವಾಗುತ್ತದೆ. ವೀರಶೈವ ಲಿಂಗಾಯತ ಧರ್ಮವು ಅಂತರಂಗ–ಬಹಿರಂಗ ಶುದ್ಧಿಗೆ ಪ್ರಾಧಾನ್ಯತೆ ಕೊಟ್ಟು ಸಕಲ ಜೀವರಾಶಿಗೂ ಒಳಿತನ್ನೇ ಬಯಸುತ್ತಿದೆ’ ಎಂದು ಬಿಜೆಪಿ ಶಾಸಕ ಬಿ.ಎಸ್‌.ಯಡಿಯೂರಪ್ಪ ಹೇಳಿದರು.

ನಗರದ ದೊಡ್ಡಮಠದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಸಿದ್ದಲಿಂಗೇಶ್ವರ ಸ್ವಾಮಿ ದೇವಸ್ಥಾನದ ಪ್ರಾರ್ಥನಾ ಮಂದಿರ ಉದ್ಘಾಟಿಸಿ ಅವರು ಮಾತನಾಡಿದರು. ಮಠದ ಆವರಣದಲ್ಲಿ ನಿರ್ಮಾಣವಾಗಿರುವ ವಿದ್ಯಾರ್ಥಿನಿಲಯವನ್ನೂ ಭಾನುವಾರ ಉದ್ಘಾಟಿಸಲಾಯಿತು.

‘ಮಠಗಳು ಸಮಾಜದ ಅಭಿವೃದ್ಧಿಯ ದಿಕ್ಸೂಚಿಯಾಗಿ ಕಾರ್ಯನಿರ್ವಹಿಸಬೇಕು. ಈ ಹಾದಿಯಲ್ಲಿ ದೊಡ್ಡಮಠ ಮುನ್ನಡೆಯುತ್ತಿದೆ.ಸರ್ವ ಸಮಾಜಕ್ಕಾಗಿ, ಜಗತ್ತಿನ ಶ್ರೇಯೋಭಿವೃದ್ಧಿಗಾಗಿ, ಶಾಂತಿ–ಸಾಮರಸ್ಯದ ನಿರ್ಮಾಣಕ್ಕಾಗಿ ಮಠಾಧೀಶರು ಶ್ರಮಿಸುತ್ತಿದ್ದಾರೆ’ ಎಂದು ಅಭಿಪ್ರಾಯಪಟ್ಟರು.

‘ಈ ಪುಣ್ಯಭೂಮಿಯಲ್ಲಿ ಸಾವಿರಾರು ಸಾಧು–ಸಂತರು ಆದರ್ಶಯುತ ಜೀವನ ನಡೆಸುತ್ತಾ ನಮಗೆಲ್ಲಾ ಮಾದರಿಯಾಗಿದ್ದಾರೆ. ಶ್ರೀ ಸಿದ್ದಗಂಗಾ, ಸುತ್ತೂರು, ಆದಿಚುಂಚನಗಿರಿ ಹಾಗೂ ತರಳಬಾಳು ಮಠಗಳು ಈ ನಾಡಿನಲ್ಲಿ ಪ್ರಸಿದ್ಧಿ ಹೊಂದಿವೆ’ ಎಂದರು.

ಸುತ್ತೂರು ಮಠದ ಪೀಠಾಧ್ಯಕ್ಷರಾದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ‘12ನೇ ಶತಮಾನದ ನಂತರ ಧಾರ್ಮಿಕ ಪರಂಪರೆಗೆ ವಿಶಿಷ್ಟ ಮಾನ್ಯತೆ ದೊರಕಿಸಿಕೊಟ್ಟವರು ಸಿದ್ದಲಿಂಗೇಶ್ವರ ಶ್ರೀಗಳು. ಅವರು ಧರ್ಮಕ್ಕೆ ಸಿದ್ಧಾಂತಗಳ ಮೌಲ್ಯ ದೊರಕಿಸಿಕೊಟ್ಟರು. ಕರ್ನಾಟಕ, ಕೇರಳ, ತಮಿಳುನಾಡಿನಲ್ಲಿ ಸಂಚಾರ ಮಾಡಿದ್ದಲ್ಲದೆ,ಹೋದಲೆಲ್ಲಾ ಹಲವು ಪರೀಕ್ಷೆಗಳನ್ನು ಎದುರಿಸಿ ಗೆದ್ದು ಬಂದಿದ್ದರು’ ಎಂದು ತಿಳಿಸಿದರು.

ದೊಡ್ಡಮಠದ ಅಧ್ಯಕ್ಷ ಶಿವಬಸವ ಸ್ವಾಮೀಜಿ, ‘ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿ ಅವರ ಕೃಪೆಯಿಂದ ಮಠವು ಅಭಿವೃದ್ಧಿ ಕಂಡಿದೆ. ಮಠವು ತನ್ನದೇ ಆದ ಗುರು ಪರಂಪರೆ ಹೊಂದಿದೆ’ ಎಂದರು.

ಸಂಸದ ಪಿ.ಸಿ.ಮೋಹನ್‌, ‘ಮಠದಲ್ಲಿ ಎಲ್ಲಾ ಸಮುದಾಯದ ಮಕ್ಕಳಿಗೂ ಶಿಕ್ಷಣ ನೀಡಲಾಗುತ್ತಿದೆ.ವಿದ್ಯಾರ್ಥಿನಿಲಯದಲ್ಲಿ 50 ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಮಠಕ್ಕೆ ಅಗತ್ಯವಿರುವ ಎಲ್ಲಾ ನೆರವು ನೀಡಲು ಸಿದ್ಧನಿದ್ದೇನೆ’ ಎಂದು ಹೇಳಿದರು.

ಗಾಂಧಿನಗರ ವಿಧಾನಸಭಾ ಕ್ಷೇತ್ರದ ಶಾಸಕ ದಿನೇಶ್‌ ಗುಂಡೂರಾವ್‌, ಹೊನ್ನಮ್ಮನ ಗವಿಮಠದ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ, ಕಂಬಾಳು ಸಂಸ್ಥಾನ ಮಠದ ಚನ್ನವೀರ ಶಿವಾಚಾರ್ಯ ಸ್ವಾಮೀಜಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT