ಶುಕ್ರವಾರ, ನವೆಂಬರ್ 27, 2020
19 °C
ದೂರವಾಣಿಯಲ್ಲೇ ಕೌನ್ಸೆಲಿಂಗ್; ಪರಿಹಾರ, ರಕ್ಷಣೆ– ಪ್ರಮೀಳಾ ನಾಯ್ಡು

ಕೌಟುಂಬಿಕ ಕ್ರೌರ್ಯ, ದೌರ್ಜನ್ಯಕ್ಕಿಲ್ಲ ತಡೆ!

ರಾಜೇಶ್‌ ರೈ ಚಟ್ಲ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕು, ಲಾಕ್‌ಡೌನ್‌ ಅವಧಿಯಲ್ಲಿ 250ಕ್ಕೂ ಹೆಚ್ಚು ಕೌಟುಂಬಿಕ ಕ್ರೌರ್ಯ, ದೌರ್ಜನ್ಯ ಪ್ರಕರಣಗಳು ದಾಖಲಾಗಿದ್ದರೆ, ರಕ್ಷಣೆ ನೀಡುವಂತೆ ಕೋರಿ 300ಕ್ಕೂ ಹೆಚ್ಚು ಮಹಿಳೆಯರು ರಾಜ್ಯ ಮಹಿಳಾ ಆಯೋಗದ ಕದ ತಟ್ಟಿದ್ದಾರೆ.

ಕೆಲಸದ ಸ್ಥಳದಲ್ಲಿ ಕಿರುಕುಳ, ವರದಕ್ಷಿಣೆ, ಲೈಂಗಿಕ ಕಿರುಕುಳ, ಆಸ್ತಿ ವಿವಾದ, ಪೊಲೀಸ್‌ ದೌರ್ಜನ್ಯ, ಪ್ರೇಮ ಪ್ರಕರಣ ಹೀಗೆ ಏಪ್ರಿಲ್‌ನಿಂದ ಸೆಪ್ಟೆಂಬರ್‌ವರೆಗಿನ ಆರು ತಿಂಗಳ ಅವಧಿಯಲ್ಲಿ 1,032 ದೂರುಗಳು ಆಯೋಗಕ್ಕೆ ಬಂದಿವೆ. ಈ ಪೈಕಿ, ಬಹುತೇಕ ದೂರುಗಳನ್ನು ಆನ್‌ಲೈನ್‌ ಮೂಲಕವೇ ಸ್ವೀಕರಿಸಲಾಗಿದೆ.

‘ಪರಿಹಾರ ಕೋರಿ ಬಂದ ದೂರುಗಳಲ್ಲಿ 223 ‍ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. ಉಳಿದ ಪ್ರಕರಣಗಳಿಗೆ ಸಂಬಂಧಿಸಿ ವಿವಿಧ ಇಲಾಖೆಗಳಿಂದ ವರದಿ, ಮುಂದುವರಿದ ವಿಚಾರಣೆ, ಆಪ್ತ ಸಮಾಲೋಚನೆ ಪೂರ್ಣಗೊಳ್ಳದ ಕಾರಣಕ್ಕೆ ಇತ್ಯರ್ಥಗೊಳಿಸಲು ಬಾಕಿ ಇವೆ’ ಎಂದು ಆಯೋಗದ ಅಧ್ಯಕ್ಷೆ ಪ್ರಮೀಳಾ ನಾಯ್ದು ಆರ್. ತಿಳಿಸಿದರು.

ಲಾಕ್‌ಡೌನ್‌ ಅವಧಿಯಲ್ಲಿ ಮಾತ್ರ ಕೆಲಸದ ಸ್ಥಳದಲ್ಲಿ ದೌರ್ಜನ್ಯ, ಕೆಲಸದಿಂದ ತೆಗೆದುಹಾಕಿರುವುದು, ರಕ್ಷಣೆ ಕೋರಿ ಹೀಗೆ 170 (ಆನ್‌ಲೈನ್‌ ಮೂಲಕ 77, ಟಪಾಲಿನಲ್ಲಿ 93) ದೂರುಗಳನ್ನು ಸ್ವೀಕರಿಸಲಾಗಿದೆ. ಈ ಪೈಕಿ, ಕೌಟುಂಬಿಕ ದೌರ್ಜನ್ಯ ಪ್ರಕರಣಗಳೇ (40) ಹೆಚ್ಚು. ಒಟ್ಟು ಪ್ರಕರಣಗಳಲ್ಲಿ 41 ದೂರುಗಳನ್ನು ಈಗಾಗಲೇ ಇತ್ಯರ್ಥಪಡಿಸಲಾಗಿದೆ. ಉಳಿದ ಪ್ರಕರಣಗಳಲ್ಲಿ ವಿವಿಧ ಇಲಾಖೆಗಳಿಂದ ವರದಿ ಬರಬೇಕಿದೆ’ ಎಂದೂ ಅವರು ಮಾಹಿತಿ ನೀಡಿದರು.

ಮರ್ಯಾದೆಗೇಡು ಹತ್ಯೆ ಶಂಕೆ– ಆಯೋಗ

‘ತಮ್ಮ ವಿರೋಧದ ನಡುವೆಯೂ ಐದು ವರ್ಷಗಳ ಹಿಂದೆ ಅಂತರ್ಜಾತಿ ವಿವಾಹವಾಗಿದ್ದ ಮಗಳು ಕಣ್ಮರೆಯಾಗಿದ್ದು, ಆಕೆಯನ್ನು ಹುಡುಕಿಕೊಡುವಂತೆ ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕಿನ ನಂಜೇಗೌಡನ ದೊಡ್ಡಿ ಗ್ರಾಮದ ಪರಿಶಿಷ್ಟ ಜಾತಿಯ ಮಹಿಳೆಯೊಬ್ಬರು ನಮ್ಮ ಬಳಿ ಬಂದಿದ್ದರು. ತಕ್ಷಣವೇ ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುವಂತೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗೆ ಸೂಚಿಸಿದ್ದು, ತನಿಖೆ ಆರಂಭಗೊಂಡಿದೆ. ಈ ಪ್ರಕರಣದಲ್ಲಿ ಮರ್ಯಾದೆಗೇಡು ಹತ್ಯೆಯ ಶಂಕೆ ವ್ಯಕ್ತವಾಗಿದ್ದು, ಪೋಷಕರಿಗೆ ನ್ಯಾಯ ದೊರಕಿಸಿಕೊಡಲು ಆಯೋಗ ಬದ್ಧವಾಗಿದೆ’ ಎಂದೂ ಪ್ರಮೀಳಾ ವಿವರಿಸಿದರು.

***
ಕೊರೊನಾ ಮಧ್ಯೆಯೇ ಉತ್ತರ ಕರ್ನಾಟಕದ ಏಳು ಜಿಲ್ಲೆಗಳಿಗೆ ಭೇಟಿ ನೀಡಿ ಶೋಷಣೆ, ದೌರ್ಜನ್ಯದ ಅಹವಾಲುಗಳನ್ನು ಸ್ಥಳೀಯವಾಗಿ ಪರಿಹರಿಸಿದ್ದೇನೆ. ಉಳಿದ ಕಡೆಗೂ ಶೀಘ್ರ ಹೋಗುತ್ತೇನೆ.
-ಪ್ರಮೀಳಾ ನಾಯ್ಡು ಆರ್‌, ಅಧ್ಯಕ್ಷೆ, ರಾಜ್ಯ ಮಹಿಳಾ ಆಯೋಗ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.