ಬುಧವಾರ, ಸೆಪ್ಟೆಂಬರ್ 22, 2021
23 °C
ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಸೂಚನೆ

ಕೊರೊನಾ ತಗ್ಗಿತೆಂದು ಮೈಮರೆಯಬೇಡಿ: ರಮೇಶ ಜಾರಕಿಹೊಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ‘ಜಿಲ್ಲೆಯಲ್ಲಿ ಕೊರೊನಾ ಸೋಂಕು ನಿಯಂತ್ರಣಕ್ಕೆ ಬಂದಿದೆ. ಹಾಗೆಂದು ಮೈಮರೆಯಬೇಡಿ. ತಾಲ್ಲೂಕುಗಳಲ್ಲಿರುವ ಕೋವಿಡ್ ಕೇರ್‌ ಸೆಂಟರ್‌ಗಳಿಗೆ ಭೇಟಿ ನೀಡಿ ವ್ಯವಸ್ಥೆ ಪರಿಶೀಲಿಸುತ್ತಿರಬೇಕು ಮತ್ತು ನಿಗಾ ವಹಿಸಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅಧಿಕಾರಿಗಳಿಗೆ ಸೂಚಿಸಿದರು.

ಇಲ್ಲಿನ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಇತರ ರೋಗಗಳಿಗೆ ಹೋಲಿಸಿದರೆ ಕೋವಿಡ್ ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ. ಜಿಲ್ಲೆಯಲ್ಲಿ ಜುಲೈಗೆ ಹೋಲಿಸಿದರೆ ಆಗಸ್ಟ್‌ನಲ್ಲಿ ಸ್ವಲ್ಪ ಹತೋಟಿಗೆ ಬಂದಿದೆ. ಜನರು ಕೂಡ ಮಾನಸಿಕವಾಗಿ ಸಿದ್ಧವಾಗಿದ್ದಾರೆ. ಇನ್ನೂ ಕೆಲ ತಿಂಗಳು ಎಚ್ಚರ ವಹಿಸಬೇಕು’ ಎಂದರು.

ಮನೆಯಲ್ಲಿಯೇ ಉತ್ತಮ:

‘ಪೊಲೀಸರಿಗೆ ಸೋಂಕು ದೃಢಪಟ್ಟರೆ ಮನೆಯಲ್ಲಿಯೇ ಚಿಕಿತ್ಸೆ ನೀಡುವುದು ಉತ್ತಮ. ಸಾರ್ವಜನಿಕರಿಗೂ ಹಾಗೆಯೇ ಮಾಡಬೇಕು. ಮನೆಯಲ್ಲಿ ಚಿಕಿತ್ಸೆ ನೀಡುವುದರಿಂದ ಅವರಿಗೆ ಒಳ್ಳೆಯ ಆಹಾರದ ಜೊತೆಗೆ ಕುಟುಂಬ ಸದಸ್ಯರಿಂದ ಧೈರ್ಯ ಸಿಗುತ್ತದೆ. ಶೇ 60ರಷ್ಟು ಕೋವಿಡ್ ಸೋಂಕಿತರಿಗೆ ಮನೆಯಲ್ಲೇ ಚಿಕಿತ್ಸೆ ನೀಡಲಾಗುತ್ತಿದೆ’ ಎಂದರು.

15 ದಿನಗಳ ನಂತರ:

‘ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವರಿಗೆ ಸರಿಯಾದ ಆಹಾರ ನೀಡಬೇಕು. ಜಿಲ್ಲಾಸ್ಪತ್ರೆಯಲ್ಲಿ ಬೇರೆ ರೋಗಿಗಳಿಗೆ ಚಿಕಿತ್ಸೆ ನೀಡವ ಬಗ್ಗೆ 15 ದಿನಗಳ ನಂತರ ಚರ್ಚಿಸಲಾಗುವುದು’ ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ, ‘ಜಿಲ್ಲಾಸ್ಪತ್ರೆಯಲ್ಲಿ ಬೆಡ್‌ಗಳು ಹಾಗೂ ಆಕ್ಸಿಜನ್ ವ್ಯವಸ್ಥೆ ಇದೆ. ಜಿಲ್ಲೆಗೆ 54 ವೆಂಟಿಲೇಟರ್‌ಗಳು ಪೂರೈಕೆಯಾಗಿದ್ದು, ಅದರಲ್ಲಿ ಇಪ್ಪತ್ತನ್ನು ಜಿಲ್ಲಾಸ್ಪತ್ರೆಗೆ ನೀಡಲಾಗಿದೆ. ಉಳಿದವುಗಳನ್ನು ತಾಲ್ಲೂಕುಗಳಿಗೆ ನೀಡಲಾಗಿದೆ. ಇತರ ಜಿಲ್ಲೆಗಳಿಗೆ ಹೋಲಿಸಿದರೆ ಬೆಳಗಾವಿಯಲ್ಲಿ ಸಾವಿನ ಸಂಖ್ಯೆ ಕಡಿಮೆ ಇದೆ. ಸೋಂಕಿತರು ಬಯಸಿದಲ್ಲಿ ಚಿಕಿತ್ಸೆ ಪಡೆಯಬಹುದು’ ಎಂದು ಮಾಹಿತಿ ನೀಡಿದರು.

ಡಿಎಚ್‌ಒ ಡಾ.ಎಸ್.ವಿ. ಮುನ್ಯಾಳ, ‘140 ಸೋಂಕಿತೆಯರಿಗೆ ಸುರಕ್ಷಿತವಾಗಿ ಹೆರಿಗೆ ಮಾಡಲಾಗಿದೆ. ಶಿಶುಗಳ ಕೋವಿಡ್ ವರದಿ ನೆಗೆಟಿವ್ ಬಂದಿದೆ’ ಎಂದರು.

ನಗರ ಪೋಲಿಸ್ ಆಯುಕ್ತ ಕೆ.ತ್ಯಾಗರಾಜನ್, ಎಸ್ಪಿ ಲಕ್ಷ್ಮಣ ನಿಂಬರಗಿ, ಸಿ.ಇ.ಒ. ದರ್ಶನ ಎಚ್.ವಿ., ಹೆಚ್ಚುವರಿ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಬಿಮ್ಸ್‌ ನಿರ್ದೇಶಕ ಡಾ.ವಿನಯ ದಾಸ್ತಿಕೊಪ್ಪ, ಮಹಾನಗರ ಪಾಲಿಕೆ ಆಯುಕ್ತ ಕೆ.ಎಚ್. ಜಗದೀಶ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.