ಗುರುವಾರ , ಆಗಸ್ಟ್ 11, 2022
26 °C
ಕೆಲಸ ಮಾಡಿ ಸಾಲ ತೀರಿಸುವಂತೆ ಬಲವಂತ ಮಾಡಿದ್ದರಿಂದ ಕೃತ್ಯ

ಮನೆ ಕೆಲಸಗಾರನಿಂದ ಜೋಡಿ ಕೊಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿರಹಟ್ಟಿ: ಕೆಲಸ ಮಾಡಿ ಸಾಲ ತೀರಿಸುವಂತೆ ಬಲವಂತ ಮಾಡಿದ್ದರಿಂದ ಮನೆಯೊಡತಿಯ ಮಗ ಹಾಗೂ ಅವರ ಸಂಬಂಧಿಯೊಬ್ಬರನ್ನು ಮನೆಯ ಕೆಲಸಗಾರ ಹೊಡೆದು ಕೊಲೆ ಮಾಡಿರುವ ಘಟನೆ ತಾಲ್ಲೂಕಿನ ಕೆರಹಳ್ಳಿ ಗ್ರಾಮದಲ್ಲಿ ನಡೆದಿದೆ.

ಮಹಾಂತೇಶ ಮಾಚೇನಹಳ್ಳಿ (28), ಫಕೀರೇಶ ಮಾಚೇನಹಳ್ಳಿ (17) ಕೊಲೆಯಾದವರು. ಆರೋಪಿ ಅಲಗಿಲವಾಡ ಗ್ರಾಮದ ನಿವಾಸಿ ಮಂಜುನಾಥ (40) ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಆರೋಪಿ ಮಂಜುನಾಥ, ಮೃತ ಮಹಾಂತೇಶ ಅವರ ಮನೆಯಲ್ಲಿ ಎರಡು ವರ್ಷಗಳಿಂದ ಕುರಿ ಕಾಯುವ ಕೆಲಸಕ್ಕಿದ್ದ. ಆರೋಪಿಯು ಅವರಿಂದ ₹10 ಸಾವಿರ ಮುಂಗಡ ತೆಗೆದುಕೊಂಡು ಕೆಲಸಕ್ಕೆ ಬಾರದೇ ಊರಿಗೆ ತೆರಳಿದ್ದ. ಜೂನ್‌ 30ರಂದು ಕೆರಹಳ್ಳಿ ಸಮೀಪದಲ್ಲಿರುವ ಅಲಗಿಲವಾಡಕ್ಕೆ ತೆರಳಿದ್ದ ಮಹಾಂತೇಶ ಅವರು ಮಂಜುನಾಥನನ್ನು ಊರಿಗೆ ಕರೆತಂದಿದ್ದರು. ಇದರಿಂದ ಕುಪಿತನಾದ ಮಂಜುನಾಥ ಕೃತ್ಯ ಎಸಗಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಕೋಳಿ ಮಾಂಸದೂಟ ಮಾಡಿ ಮಲಗಿದ್ದರು: ಮಹಾಂತೇಶ ಅವರ ತಾಯಿ ಫಕ್ಕೀರವ್ವ ಮನೆಯಲ್ಲಿ ರಾತ್ರಿ ಕೋಳಿ ಮಾಂಸದ ಸಾರು ಮಾಡಿದ್ದರು. ಮನೆಯವರು ಹಾಗೂ ಆರೋಪಿ ಊಟ ಮಾಡಿ ಮಹಡಿ ಮೇಲೆ ಮಲಗಿದ್ದರು. ಬೆಳಗಿನ ಜಾವ 3 ಗಂಟೆ ಸುಮಾರಿಗೆ, ‘ದುಡಿಯಲು ಮನಸ್ಸಿಲ್ಲ ಎಂದರೂ ದುಡಿಸಿಕೊಳ್ಳಲು ಕರೆದುಕೊಂಡು ಬಂದಾನ, ಮುಂಗಡ ತೆಗೆದುಕೊಂಡ ಹಣವನ್ನು ದುಡಿದು ಮುಟ್ಟಿಸು ಅಂತಾನ’ ಎಂದು ಹೇಳಿಕೊಂಡು ಕೋಲಿನಿಂದ ಮನಸೋಇಚ್ಛೆ ಹೊಡೆದ ಪರಿಣಾಮ ಮಹಾಂತೇಶ ಮತ್ತು ಅವರ ಚಿಕ್ಕಪ್ಪನ ಮಗ ಫಕೀರೇಶ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಚೀರಾಟದ ಶಬ್ದ ಕೇಳಿ ಬಂದ ಮನೆಯವರು, ಅಕ್ಕಪಕ್ಕದ ಮನೆಯವರ ಮೇಲೂ ದಾಳಿಗೆ ಮುಂದಾದ ಮಂಜುನಾಥನ ಕೈಕಾಲುಗಳನ್ನು ಕಟ್ಟಿ ನಂತರ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.

ಸ್ಥಳಕ್ಕೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜು, ಡಿವೈಎಸ್‌ಪಿ ವಿಜಯ ಬಿರಾದಾರ, ಸಿಪಿಐ ವಿಕಾಸ ಲಮಾಣಿ ಭೇಟಿ, ಶಿರಹಟ್ಟಿ ಠಾಣೆ ಪಿಎಸ್‌ಐ ಪ್ರವೀಣ ಗಂಗೋಳ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.