ಭಾನುವಾರ, 4 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರದಕ್ಷಿಣೆ ಕಿರುಕುಳ ಪ್ರಕರಣ, ನಟಿ ಅಭಿನಯಗೆ ಜೈಲು ಶಿಕ್ಷೆ

Last Updated 14 ಡಿಸೆಂಬರ್ 2022, 16:10 IST
ಅಕ್ಷರ ಗಾತ್ರ

ಬೆಂಗಳೂರು: ವರದಕ್ಷಿಣೆ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ 20 ವರ್ಷಗಳ ಹಿಂದಿನ ಕ್ರಿಮಿನಲ್‌ ಪ್ರಕರಣದಲ್ಲಿ ಕನ್ನಡ ಚಲನಚಿತ್ರ ನಟಿ ಅಭಿನಯ, ಅವರ ತಾಯಿ ಜಯಮ್ಮ ಹಾಗೂ ಅಣ್ಣ ಚೆಲುವರಾಜ್‌ಗೆ ಜೈಲು ಶಿಕ್ಷೆ ವಿಧಿಸಿ ಹೈಕೋರ್ಟ್ ತೀರ್ಪು ನೀಡಿದೆ.

‘ಲಕ್ಷ್ಮೀದೇವಿ ಅವರಿಗೆ ವರದಕ್ಷಿಣೆ ಕಿರುಕುಳ ನೀಡಿದ ಪ್ರಕರಣದಲ್ಲಿ ಅಭಿನಯ ಸೇರಿದಂತೆ ಎಲ್ಲ ಆರೋಪಿಗಳನ್ನು ಖುಲಾಸೆಗೊಳಿಸಿ ಬೆಂಗಳೂರಿನ ಸೆಷನ್ಸ್‌ ನ್ಯಾಯಾಲಯ ಹೊರಡಿಸಿದ್ದ ಆದೇಶ ರದ್ದುಪಡಿಸಬೇಕು’ ಎಂದು ಕೋರಿ ಪ್ರಾಸಿಕ್ಯೂಷನ್‌ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು. ಫಿರ್ಯಾದುದಾರರಾದ ಲಕ್ಷ್ಮೀದೇವಿ ಸಹ ಸೆಷನ್ಸ್‌ ಕೋರ್ಟ್ ಆದೇಶವನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದ್ದರು.

ಈ ಮೇಲ್ಮನವಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಚ್.ಬಿ. ಪ್ರಭಾಕರ ಶಾಸ್ತ್ರಿ ಅವರಿದ್ದ ಏಕಸದಸ್ಯ ನ್ಯಾಯಪೀಠ, ‘ಪ್ರಕರಣದಲ್ಲಿ ಪ್ರಾಸಿಕ್ಯೂಷನ್ ಒದಗಿಸಿರುವ ಸಾಕ್ಷ್ಯಾಧಾರಗಳು ಆರೋಪಿಗಳು ಕೃತ್ಯ ಎಸಗಿರುವುದನ್ನು ಸಾಬೀತುಪಡಿಸುತ್ತಿವೆ’ ಎಂದು ಆರೋಪಿಗಳನ್ನು ಖುಲಾಸೆಗೊಳಿಸಿ ಸೆಷನ್ಸ್‌ ನ್ಯಾಯಾಲಯ 2012ರ ಮಾರ್ಚ್‌ 9ರಂದು ನೀಡಿದ್ದ ಆದೇಶವನ್ನು ರದ್ದುಪಡಿಸಿದೆ. ಪ್ರಕರಣದಲ್ಲಿ ಅಭಿನಯ ಮತ್ತವರ ಕುಟುಂಬ ಸದಸ್ಯರನ್ನು ದೋಷಿಗಳೆಂದು ತೀರ್ಮಾನಿಸಿ 2010ರ ಜನವರಿ 5ರಂದು ಬೆಂಗಳೂರಿನ 8ನೇ ಎಸಿಎಂಎಂ ನ್ಯಾಯಾಲಯ ಹೊರಡಿಸಿದ್ದ ಆದೇಶವನ್ನು ಎತ್ತಿ ಹಿಡಿದಿದೆ. ಹೈಕೋರ್ಟ್‌ನಲ್ಲಿ ಪ್ರಾಸಿಕ್ಯೂಷನ್‌ ಪರ ವಿ.ಎಸ್.ವಿನಾಯಕ ವಾದ ಮಂಡಿಸಿದ್ದರು.

ಶಿಕ್ಷೆ ಹೆಚ್ಚಳ: ಮ್ಯಾಜಿಸ್ಟ್ರೇಟ್ ಕೋರ್ಟ್ 3ನೇ ಆರೋಪಿ ಜಯಮ್ಮ, 4ನೇ ಆರೋಪಿ ಚೆಲುವರಾಜ್ ಹಾಗೂ 5ನೇ ಆರೋಪಿ ಅಭಿನಯ ಅವರಿಗೆ ಭಾರತೀಯ ದಂಡ ಸಂಹಿತೆ (ಐಪಿಸಿ) ಕಲಂ 498-ಎ ಅಡಿಯಲ್ಲಿ ವಿಧಿಸಿದ್ದ 2 ವರ್ಷಗಳ ಜೈಲು ಶಿಕ್ಷೆ ಹಾಗೂ ವರದಕ್ಷಿಣೆ ನಿಷೇಧ ಕಾಯ್ದೆಯ ಕಲಂ 4ರ ಅಡಿ ಜಯಮ್ಮ ಅವರಿಗೆ ವಿಧಿಸಿದ್ದ 2 ವರ್ಷಗಳ ಶಿಕ್ಷೆಯನ್ನು ಹೈಕೋರ್ಟ್ ಎತ್ತಿ ಹಿಡಿದಿದೆ. ಕಲಂ 3ರ ಅಡಿ ಜಯಮ್ಮ ಅವರಿಗೆ ವಿಧಿಸಿದ್ದ 2 ವರ್ಷಗಳ ಶಿಕ್ಷೆಯನ್ನು 5 ವರ್ಷಕ್ಕೆ ಹೆಚ್ಚಿಸಿದೆ.

ಪ್ರಕರಣವೇನು?: ಅಭಿನಯ ಅವರ ಅಣ್ಣ ಶ್ರೀನಿವಾಸ್ ಹಾಗೂ ಲಕ್ಷ್ಮೀದೇವಿ ವಿವಾಹ 1998ರಲ್ಲಿ ನಡೆದಿತ್ತು. ಈ ವೇಳೆ, ‘ವರದಕ್ಷಿಣೆ ರೂಪದಲ್ಲಿ ₹ 80 ಸಾವಿರ ನಗದು ಹಾಗೂ 250 ಗ್ರಾಂ ಚಿನ್ನಾಭರಣ ನೀಡಲಾಗಿತ್ತು. ಹೆಚ್ಚುವರಿ ವರದಕ್ಷಿಣೆಗಾಗಿ ಪೀಡಿಸುತ್ತಿದ್ದರು’ ಎನ್ನಲಾಗಿದೆ. ಗರ್ಭಿಣಿಯಾಗಿದ್ದ ಲಕ್ಷ್ಮೀದೇವಿ ತವರು ಮನೆಗೆ ತೆರಳಿದ್ದರು. 1999ರ ಅಕ್ಟೋಬರ್ 24ರಂದು ಗಂಡು ಮಗುವಿಗೆ ಜನ್ಮ ನೀಡಿದ್ದರು. ನಂತರ ಲಕ್ಷ್ಮೀದೇವಿ ಮತ್ತು ಮಗುವನ್ನು ಶ್ರೀನಿವಾಸ್ ಮನೆಗೆ ವಾಪಸು ಕರೆಸಿಕೊಂಡಿರಲಿಲ್ಲ.

ಈ ಕಾರಣಕ್ಕಾಗಿ ಲಕ್ಷ್ಮೀದೇವಿ ಅವರ ತಂದೆ 2002ರ ನವೆಂಬರ್ 9ರಂದು ಶ್ರೀನಿವಾಸ್ ಮನೆಗೆ ತೆರಳಿ, ಮಗಳು ಹಾಗೂ ಮೊಮ್ಮಗನನ್ನು ಕರೆಸಿಕೊಳ್ಳಿ ಎಂದು ಕೇಳಿಕೊಂಡಿದ್ದರು. ಇದಕ್ಕೆ ಶ್ರೀನಿವಾಸ್ ಮತ್ತು ಅವರ ಕುಟುಂಬದವರು ನಿರಾಕರಿಸಿದ್ದರು. ‘ಲಕ್ಷ್ಮಿದೇವಿ ₹ 1 ಲಕ್ಷ ವರದಕ್ಷಿಣೆ ತರುವತನಕ ಮನೆಗೆ ಸೇರಿಸುವುದಿಲ್ಲ ಎಂದು ಹೇಳುತ್ತಿದ್ದಾರೆ’ ಎಂದು ಆಪಾದಿಸಿ ಲಕ್ಷ್ಮೀದೇವಿ ಚಂದ್ರ ಲೇ ಔಟ್ ಪೊಲೀಸ್ ಠಾಣೆಯಲ್ಲಿ ಪತಿ ಶ್ರೀನಿವಾಸ್ ಮತ್ತು ಕುಟುಂಬದ ಸದಸ್ಯರ ವಿರುದ್ಧ ದೂರು ನೀಡಿದ್ದರು.

ಆರೋಪಿಗಳ ವಿರುದ್ಧ ಐಪಿಸಿ ಕಲಂ 498-ಎ (ವರದಕ್ಷಿಣೆ ಕಿರುಕುಳ) ಹಾಗೂ ವರದಕ್ಷಿಣೆ ನಿಷೇಧ ಕಾಯ್ದೆಯ ಕಲಂ 3 ಹಾಗೂ 4ರ ಅಡಿಯಲ್ಲಿ ಪ್ರಕರಣ ದಾಖಲಿಸಿ, ತನಿಖೆ ನಡೆಸಿದ್ದ ಪೊಲೀಸರು ವಿಚಾರಣಾ ಕೋರ್ಟ್‌ಗೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT