ಸೋಮವಾರ, ನವೆಂಬರ್ 30, 2020
19 °C
ತಹಶೀಲ್ದಾರ್‌ಗಳಿಂದ ಸಿಗದ ಪರವಾನಗಿ

ಕೋವಿಡ್‌ ಹಿನ್ನೆಲೆ: ನಾಟಕಗಳ ಪ್ರದರ್ಶನಕ್ಕೆ ವಿಘ್ನ

ವರುಣ ಹೆಗಡೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ರಂಗಮಂದಿರಗಳಲ್ಲಿ ಸಾಂಸ್ಕೃತಿಕ ಚಟುವಟಿಕೆ ನಡೆಸಲು ಸರ್ಕಾರ ಅವಕಾಶ ನೀಡಿದ್ದರೂ ತಾಲ್ಲೂಕು ಮಟ್ಟದಲ್ಲಿ ತಹಶೀಲ್ದಾರ್‌ಗಳು ವೃತ್ತಿ ನಾಟಕಕಂಪನಿಗಳಿಗೆ ಪ್ರದರ್ಶನಕ್ಕೆ ಪರವಾನಗಿ ನೀಡುತ್ತಿಲ್ಲ.ಇದರಿಂದ ವೃತ್ತಿ ರಂಗಭೂಮಿ ಕಲಾವಿದರು ಮತ್ತಷ್ಟು ಸಂಕಷ್ಟಕ್ಕೆ ಸಿಲುಕುವ ಪರಿಸ್ಥಿತಿ ಎದುರಾಗಿದೆ.

ಕೋವಿಡ್‌ ಕಾರಣದಿಂದಾಗಿ ಎಂಟು ತಿಂಗಳಿನಿಂದ ಯಾವುದೇ ಸಾಂಸ್ಕೃತಿಕ ಚಟುವಟಿಕೆಗಳು ನಡೆದಿಲ್ಲ. ಇದರಿಂದ ರಂಗಭೂಮಿ ಸೇರಿದಂತೆ ವಿವಿಧ ಕಲಾ ಪ್ರಕಾರವನ್ನೇ ಜೀವನಾಧಾರವಾಗಿ ನೆಚ್ಚಿಕೊಂಡವರು ಸಮಸ್ಯೆಗಳನ್ನು ಎದುರಿಸಿದ್ದಾರೆ. ಲಾಕ್‌ಡೌನ್‌ ಅನ್ನು ಹಂತ ಹಂತವಾಗಿ ತೆರವುಗೊಳಿಸಿದ ಬಳಿಕ ಸಿನಿಮಾಮಂದಿರಗಳು, ರಂಗಮಂದಿರಗಳು, ಮಲ್ಟಿಪ್ಲೆಕ್ಸ್‌ಗಳನ್ನು ತೆರೆಯಲು ಅನುಮತಿ ನೀಡಿ ಇದೇ 14ರಂದು ಸರ್ಕಾರ ಆದೇಶ ಹೊರಡಿಸಿದೆ.

ಒಟ್ಟು ಆಸನ ಸಾಮರ್ಥ್ಯದ ಶೇ 50ರಷ್ಟು ಮಂದಿಗೆ ಮಾತ್ರ ಅವಕಾಶ ನೀಡಬೇಕು ಎಂಬುದು  ಸೇರಿದಂತೆ ವಿವಿಧ ನಿರ್ಬಂಧಗಳನ್ನು ವಿಧಿಸಲಾಗಿದೆ.

ಇಷ್ಟಾಗಿಯೂ ತಹಶೀಲ್ದಾರ್‌ಗಳು ‘ನಮಗೆ ಸ್ಪಷ್ಟನೆಯಿಲ್ಲ’ ಎಂಬ ಕಾರಣ ನೀಡಿ ಅನುಮತಿ ನಿರಾಕರಿಸುತ್ತಿರುವುದು ವೃತ್ತಿ ನಾಟಕ ಕಂಪನಿಗಳ ಮುಖ್ಯಸ್ಥರ ಅಸಮಾಧಾನಕ್ಕೆ ಕಾರಣವಾಗಿದೆ. ನಾಟಕ ಪ‍್ರದರ್ಶನಗಳಿಗೆ ಅವಕಾಶ ನೀಡುವ ಸಂಬಂಧ ಸರ್ಕಾರವು ಕೂಡಲೇ ಪ್ರತ್ಯೇಕ ಆದೇಶವನ್ನು ಹೊರಡಿಸಬೇಕು ಎನ್ನುವುದು ಅವರ ಒತ್ತಾಯ.

ಬದುಕು ಬೀದಿಗೆ ಬಿದ್ದಿದೆ: ‘ಕಲೆಯನ್ನೇ ನಂಬಿಕೊಂಡಿದ್ದ ಕಲಾವಿದರ ಬದುಕು ಲಾಕ್‌ಡೌನ್ ಹಾಗೂ ಕೋವಿಡ್‌ ನಿಂದಾಗಿ
ಬೀದಿಗೆ ಬಿದ್ದಿದೆ. ರಾಜ್ಯದಲ್ಲಿ 24 ವೃತ್ತಿ ನಾಟಕ ಕಂಪನಿಗಳಿವೆ. ಸರ್ಕಾರಕ್ಕೆ ಕಲಾವಿದರು ಹಾಗೂ ಕಲೆಯ ಬಗ್ಗೆ ಕಾಳಜಿ ಇದ್ದಲ್ಲಿ ಕೂಡಲೇ ಪ್ರತ್ಯೇಕ ಆದೇಶವನ್ನು ಹೊರಡಿಸಿ, ಪ್ರದರ್ಶನಕ್ಕೆ ಅನುವು ಮಾಡಿಕೊಳ್ಳಬೇಕು’ ಎಂದು ಕರ್ನಾಟಕ ರಾಜ್ಯ ವೃತ್ತಿ ರಂಗಭೂಮಿ ಮಾಲೀಕರ ಸಂಘದ ಪ್ರಧಾನ ಕಾರ್ಯದರ್ಶಿ ಚಿಂದೋಡಿ ಶಂಭುಲಿಂಗಪ್ಪ ಆಗ್ರಹಿಸಿದರು.

‘ಎಲ್ಲ ವೃತ್ತಿ ನಾಟಕ ಸಂಸ್ಥೆಗಳಿಗೆ ಪರವಾನಗಿ ಸಿಕ್ಕರೆ ಸಾಕಾಗಿದೆ. ಕೋವಿಡ್ ಕಾರಣ ವಿಧಿಸಿರುವ ನಿರ್ಬಂಧಗಳನ್ನು ಪಾಲಿಸಿ, ನಾಟಕ ಆರಂಭಿಸುತ್ತೇವೆ. ಟಿಕೆಟ್ ಮೂಲಕ ಬಂದ ಹಣದಲ್ಲಿ ಜೀವನ ಸಾಗಿಸುತ್ತೇವೆ’ ಎಂದು ವಿಶ್ವಜ್ಯೋತಿ ಪಂಚಾಕ್ಷರ ನಾಟ್ಯಸಂಘದ ಮಾಲೀಕ ರಾಜಣ್ಣ ಜೇವರ್ಗಿ ತಿಳಿಸಿದರು. 

ನಾಟಕ ಅಕಾಡೆಮಿಯ ಮಾಜಿ ಅಧ್ಯಕ್ಷ ಜೆ.ಲೋಕೇಶ್, ‘ನಾಟಕ ಪ್ರದರ್ಶನಗಳಿಗೆ ಅವಕಾಶ ನೀಡುವ ಸಂಬಂಧ ಅಧಿಕಾರಿಗಳಲ್ಲಿನ ಗೊಂದಲ ನಿವಾರಿಸಲು ಸರ್ಕಾರ ಮತ್ತೊಮ್ಮೆ ಸ್ಪಷ್ಟವಾಗಿ ಅಧಿಸೂಚನೆ ಹೊರಡಿಸಬೇಕು. ಕಾಯಕಲ್ಪ ಯೋಜನೆಯಡಿ ಪ್ರತಿ ವೃತ್ತಿ ಕಂಪನಿಗೆ ₹ 2 ಲಕ್ಷ ಘೋಷಿಸಬೇಕು’ ಎಂದರು.

***

ನಾಟಕ ಪ್ರದರ್ಶನಕ್ಕೆ ಏಕೆ ಅವಕಾಶ ನೀಡುತ್ತಿಲ್ಲ ಎಂಬ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದು, ಅನುಮತಿ ನೀಡುವ ಸಂಬಂಧ ಅಗತ್ಯ ಕ್ರಮಕೈಗೊಳ್ಳುತ್ತೇನೆ

-ಸಿ.ಟಿ. ರವಿ, ಕನ್ನಡ ಮತ್ತು ಸಂಸ್ಕೃತಿ ಸಚಿವ 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು