ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದಲ್ಲಿ ಬೆಂಬಲ ಯಾಚಿಸಿದ ದ್ರೌಪದಿ ಮುರ್ಮು

ಬಿಜೆಪಿ ಶಾಸಕರು, ಸಂಸದರ ಜತೆ ಸಭೆ * ರಾಷ್ಟ್ರಪತಿ ಚುನಾವಣೆಯಲ್ಲಿ ಮತ ನೀಡುವಂತೆ ಮನವಿ
Last Updated 10 ಜುಲೈ 2022, 17:41 IST
ಅಕ್ಷರ ಗಾತ್ರ

ಬೆಂಗಳೂರು: ರಾಷ್ಟ್ರಪತಿ ಆಯ್ಕೆಗೆ ನಡೆಯುತ್ತಿರುವ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟದ ಅಭ್ಯರ್ಥಿಯಾಗಿರುವ ದ್ರೌಪದಿ ಮುರ್ಮು ಅವರು ರಾಜ್ಯದ ಬಿಜೆಪಿ ಸಂಸದರು ಮತ್ತು ಶಾಸಕರನ್ನು ಭೇಟಿಮಾಡಿ ಬೆಂಬಲ ಯಾಚಿಸಿದರು. ಸಂಸದರು ಮತ್ತು ಶಾಸಕರ ಸಭೆಯಲ್ಲಿ ಭಾಗಿಯಾಗಿ, ತಮಗೆ ಮತ ನೀಡುವಂತೆ ಮನವಿ ಮಾಡಿದರು.

ವಿಶೇಷ ವಿಮಾನದಲ್ಲಿ ಎಚ್‌ಎಎಲ್‌ ವಿಮಾನ ನಿಲ್ದಾಣಕ್ಕೆ ಆಗಮಿಸಿದ ದ್ರೌಪದಿ ಮುರ್ಮು ಅವರನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಸ್ವಾಗತಿಸಿದರು. ಬಳಿಕ ಬಿಜೆಪಿ ಶಾಸಕ ಬಿ.ಎಸ್‌. ಯಡಿಯೂರಪ್ಪ, ಕೇಂದ್ರ ಸಚಿವರಾದ ಪ್ರಲ್ಹಾದ ಜೋಶಿ, ಕಿಶನ್‌ ರೆಡ್ಡಿ ಸೇರಿದಂತೆ ಪಕ್ಷದ ಹಲವು ನಾಯಕರ ಜತೆ ಸಮಾಲೋಚನೆ ನಡೆಸಿದರು.

ಸಭೆಯಲ್ಲಿ ಭಾಗಿ: ನಗರದ ಶಾಂಗ್ರಿಲಾ ಹೋಟೆಲ್‌ನಲ್ಲಿ ನಡೆದ ಬಿಜೆಪಿ ಸಂಸದರು ಮತ್ತು ಶಾಸಕರ ಸಭೆಯಲ್ಲಿ ಮುರ್ಮು ಪಾಲ್ಗೊಂಡರು. ಬಿಜೆಪಿ ರಾಜ್ಯ ಘಟಕದ ವತಿಯಿಂದ ಅವರಿಗೆ ಶಾಲು ಹೊದಿಸಿ, ಮೈಸೂರು ಪೇಟ ತೊಡಿಸಿ, ದೇವರ ವಿಗ್ರಹದ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.

ಈ ಸಭೆಯಲ್ಲಿ ಮಾತನಾಡಿದ ಅವರು, ‘ಕರ್ನಾಟಕ ಕಿತ್ತೂರು ರಾಣಿ ಚೆನ್ನಮ್ಮ ಮತ್ತು ಸಂಗೊಳ್ಳಿ ರಾಯಣ್ಣ ಅವರಂತಹ ಸ್ವಾತಂತ್ರ್ಯ ಸೇನಾನಿಗಳ ನೆಲ. ಸಮಾನತೆಗಾಗಿ ಬಸವಣ್ಣನವರು ಇಲ್ಲಿ ಹೋರಾಡಿದ್ದಾರೆ. ಸರ್‌.ಎಂ.ವಿಶ್ವೇಶ್ವರಯ್ಯ ಅವರಂತಹ ‘ವಿಶ್ವಶಿಲ್ಪಿ’ ಎಂಜಿನಿಯರ್‌ಗಳನ್ನೂ ಈ ನಾಡು ನಮಗೆ ನೀಡಿದೆ. ರಾಷ್ಟ್ರಪತಿ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟದ ಅಭ್ಯರ್ಥಿಯಾಗಿ ನಿಮ್ಮೆಲ್ಲರ ಬೆಂಬಲ ಯಾಚಿಸಲು ಇಲ್ಲಿಗೆ ಬಂದಿದ್ದೇನೆ’ ಎಂದರು.

‘ರಾಷ್ಟ್ರಕೂಟರು, ಕದಂಬರು, ಬಾದಾಮಿ ಚಾಲುಕ್ಯರು, ವಿಜಯನಗರ ಸಾಮ್ರಾಜ್ಯದ ಅರಸರು, ಮೈಸೂರು ಸಂಸ್ಥಾನದ ಮಹಾರಾಜರು ಸೇರಿದಂತೆ ಅನೇಕರು ಕರ್ನಾಟಕವನ್ನು ಆಳಿದ್ದಾರೆ. ಭಾರತ ದೊಡ್ಡ ದೇಶ. ನಮ್ಮ ಸಂವಿಧಾನ ವಿಶಿಷ್ಟವಾದುದು. ಒಡಿಶಾದ ಮಯೂರಗಂಜ್‌ ಜಿಲ್ಲೆಯಲ್ಲಿ ಹುಟ್ಟಿ, ಬೆಳೆದು ಶಿಕ್ಷಣ ಪಡೆದ ನಾನು ಶಿಕ್ಷಕಿಯಾಗಿದ್ದೆ. ಸಹಾಯಕ ಎಂಜಿನಿಯರ್‌ ಆಗಿಯೂ ಕೆಲಸ ಮಾಡಿದ್ದೆ. ನಂತರ ಶಾಸಕಿ, ಮಂತ್ರಿ, ರಾಜ್ಯಪಾಲೆಯಾಗುವ ಅವಕಾಶ ದೊರಕಿತ್ತು. ಈಗ ಎನ್‌ಡಿಎ ಮೈತ್ರಿಕೂಟ ನನ್ನನ್ನು ರಾಷ್ಟ್ರಪತಿ ಅಭ್ಯರ್ಥಿ ಮಾಡಿದೆ. ಎಲ್ಲರೂ ಮತ ನೀಡುವ ಮೂಲಕ ಗೆಲುವಿಗೆ ಸಹಕರಿಸಿ’ ಎಂದು ಮನವಿ ಮಾಡಿದರು.

ಬಸವರಾಜ ಬೊಮ್ಮಾಯಿ, ನಳಿನ್‌ ಕುಮಾರ್‌ ಕಟೀಲ್‌, ಪ್ರಲ್ಹಾದ ಜೋಶಿ, ಕಿಶನ್‌ ರೆಡ್ಡಿ, ಯಡಿಯೂರಪ್ಪ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ಶಾಸಕ ಜಗದೀಶ ಶೆಟ್ಟರ್‌, ಸಂಸದ ಡಿ.ವಿ. ಸದಾನಂದ ಗೌಡ ವೇದಿಕೆಯಲ್ಲಿದ್ದರು.

ಕನ್ನಡದಲ್ಲೇ ಮಾತು ಆರಂಭಿಸಿದ ದ್ರೌಪದಿ ಮುರ್ಮು

ರಾಷ್ಟ್ರಪತಿ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟದ ಅಭ್ಯರ್ಥಿಯಾಗಿರುವ ದ್ರೌಪದಿ ಮುರ್ಮು ಭಾನುವಾರ ನಡೆದ ಬಿಜೆಪಿ ಸಂಸದರು ಮತ್ತು ಶಾಸಕರ ಸಭೆಯಲ್ಲಿ ಕನ್ನಡದಲ್ಲೇ ಮಾತು ಆರಂಭಿಸಿದರು. ‘ಕರ್ನಾಟಕದ ಎಲ್ಲ ಸಂಸದರು ಮತ್ತು ಶಾಸಕರಿಗೆ ನಮಸ್ಕಾರ’ ಎಂದು ಮಾತು ಆರಂಭಿಸಿದಾಗ ಎಲ್ಲರೂ ಚಪ್ಪಾಳೆ ತಟ್ಟಿ ಸಂತಸ ವ್ಯಕ್ತಪಡಿಸಿದರು.

ಎಚ್‌.ಡಿ. ದೇವೇಗೌಡರ ನಿವಾಸಕ್ಕೆ ಭೇಟಿ

ರಾಜ್ಯಸಭಾ ಸದಸ್ಯರೂ ಆಗಿರುವ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡರ ನಿವಾಸಕ್ಕೆ ಭೇಟಿ ನೀಡಿದ ದ್ರೌಪದಿ ಮುರ್ಮು ಅವರು ರಾಷ್ಟ್ರಪತಿ ಚುನಾವಣೆಯಲ್ಲಿ ತಮ್ಮನ್ನು ಬೆಂಬಲಿಸುವಂತೆ ಮನವಿ ಮಾಡಿದರು.

ಬಸವರಾಜ ಬೊಮ್ಮಾಯಿ, ಪ್ರಲ್ಹಾದ ಜೋಶಿ, ಸಿ.ಟಿ.ರವಿ ಸೇರಿದಂತೆ ಬಿಜೆಪಿ ಪ್ರಮುಖರು ಜತೆಗಿದ್ದರು. ದೇವೇಗೌಡರ ಪತ್ನಿ ಚನ್ನಮ್ಮ, ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ, ಎಚ್‌.ಡಿ. ರೇವಣ್ಣ, ಎಚ್‌.ಕೆ. ಕುಮಾರಸ್ವಾಮಿ, ಡಿ.ಸಿ. ತಮ್ಮಣ್ಣ, ಜೆ.ಕೆ. ಕೃಷ್ಣಾ ರೆಡ್ಡಿ, ಎಚ್‌.ಸಿ. ಬಾಲಕೃಷ್ಣ, ಆರ್‌. ಮಂಜುನಾಥ್‌ ಸೇರಿದಂತೆ ಜೆಡಿಎಸ್‌ನ ಕೆಲವು ಶಾಸಕರು ಇದ್ದರು.

ದೇವೇಗೌಡರ ಕುಟುಂಬದ ಸದಸ್ಯರು ಮುರ್ಮು ಅವರನ್ನು ಸನ್ಮಾನಿಸಿದರು. ಎಲ್ಲ ನಾಯಕರು ಉಪಾಹಾರ ಸೇವನೆಯೊಂದಿಗೆ ಕೆಲಕಾಲ ಚರ್ಚೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT