ಬುಧವಾರ, ನವೆಂಬರ್ 25, 2020
21 °C
ಊರಿಗೆ ಆಧಾರವಾಗಿದ್ದ ಕೆರೆ ಕೆಸರು ಗದ್ದೆಯಾಯಿತು

ಕಲಬುರ್ಗಿ: ಪ್ರವಾಹದ ಬೆನ್ನಲ್ಲೇ ನೀರಿನ ವೇದನೆ!

ಜಗನ್ನಾಥ ಶೇರಿಕಾರ Updated:

ಅಕ್ಷರ ಗಾತ್ರ : | |

Prajavani

ಚಿಂಚೋಳಿ (ಕಲಬುರ್ಗಿ ಜಿಲ್ಲೆ): ತಾಲ್ಲೂಕಿನ ನಾಗಾಈದಲಾಯಿ ಕೆರೆ 28 ಹೆಕ್ಟೇರ್‌ ಪ್ರದೇಶದಲ್ಲಿ ಹರಡಿಕೊಂಡಿದ್ದು, ನೀರು ತುಂಬಿಕೊಂಡು ನಳನಳಿಸುತ್ತಿತ್ತು. ಈಚೆಗೆ ಸುರಿದ ಭಾರಿ ಮಳೆಯಿಂದ ತಡೆಗೋಡೆ ಕೊಚ್ಚಿಹೋಗಿ ಈಗ ಕೆರೆಯಲ್ಲಿಯ ನೀರೆಲ್ಲ ಖಾಲಿಯಾಗಿದೆ. ಊರಿಗೆ ಆಧಾರವಾಗಿದ್ದ ಕೆರೆ ಈಗ ಕೆಸರು ಗದ್ದೆಯಂತಾಗಿದೆ.

ತಾಲ್ಲೂಕಿನ ದೋಟಿಕೊಳ, ಹುಲ್ಸಗೂಡ, ಹೂಡದಳ್ಳಿ ಬೃಹತ್‌ ಕೆರೆಗಳೂ ಒಡೆದಿದ್ದು, ಎಲ್ಲ ನೀರು ಹರಿದು ಹೋಗಿದೆ. ಈ ಕೆರೆಗಳು ಸರಾಸರಿ ತಲಾ 350 ಎಕರೆ ಪ್ರದೇಶಕ್ಕೆ ನೀರಾವರಿಗೆ ಮೂಲವಾಗಿದ್ದವು. ಇತರೆ ಸಣ್ಣಪುಟ್ಟ ಕೆರೆಗಳಿಗೂ ಹಾನಿಯಾಗಿದೆ.

‘ನಾಗಾಈದಲಾಯಿ ಕೆರೆಯು ನಾಗಾಈದಲಾಯಿ ತಾಂಡಾ, ಕುಸ್ರಂಪಳ್ಳಿ, ಕುಸ್ರಂಪಳ್ಳಿ ತಾಂಡಾ ರೈತರ ಜಾನುವಾರುಗಳ ದಾಹ ನೀಗಿಸುತ್ತಿತ್ತು. ಈಗ ನೀರಿಲ್ಲದೇ ಮುಂದೇನು ಎಂಬ ಚಿಂತೆ ಕಾಡುತ್ತಿದೆ’ ಎನ್ನುತ್ತಾರೆ ಗ್ರಾಮಸ್ಥ ನೆಲ್ಲಿ ಮಲ್ಲಿಕಾರ್ಜುನ.

‘ಎರಡು ವರ್ಷಗಳ ಹಿಂದೆ ಮಳೆಯ ಅಭಾವದಿಂದ ಕೆರೆ ಒಣಗಿತ್ತು. ರೈತರೇ ಕೂಡಿ ಹೂಳು ತೆಗೆದಿದ್ದೆವು. ಈಗ ಆ ಕೆರೆ ಒಡೆದು ಖಾಲಿ ಆಗಿದೆ’’ ಎಂದು ಹೂಡದಳ್ಳಿಯ ಬಸವರಾಜ ಬಿರಾದಾರ ಹೇಳಿದರು.

‘ನಮ್ಮೂರಿನ ಕೆರೆ ನಿರ್ಮಿಸಿ 51 ವರ್ಷಗಳು ಗತಿಸಿವೆ. ಭಾರಿ ಪ್ರವಾಹದಿಂದ ಬಂಡ್‌ಗೆ ಹಾನಿಯಾಗಿದೆ’ ಎನ್ನುತ್ತಾರೆ ದೋಟಿಹಾಳದ ವಿಠಲರಾವ್‌ ಕುಲಕರ್ಣಿ. 

‘ಕೆರೆಗಳಿಗೆ ಉಂಟಾಗಿರುವ ಹಾನಿ ಸರಿಪಡಿಸಲು ಅಂದಾಜು ₹ 15 ಕೋಟಿ ಅನುದಾನದ ಅಗತ್ಯವಿದೆ’ ಎನ್ನುವುದು ಸಣ್ಣ ನೀರಾವರಿ ಇಲಾಖೆಯ ಉಪ ವಿಭಾಗದ ಎಇಇ ಶಿವಶರಣಪ್ಪ ಕೇಶ್ವಾರ್ ಅವರ ಹೇಳಿಕೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು