ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳೆ ಬಳಿ ₹ 28 ಕೋಟಿ ಮೌಲ್ಯದ ಡ್ರಗ್ಸ್ !

ಡಿಆರ್‌ಐ ಅಧಿಕಾರಿಗಳಿಂದ ‘ಶುದ್ಧ ಹೆರಾಯಿನ್’ ಜಪ್ತಿ
Last Updated 30 ಸೆಪ್ಟೆಂಬರ್ 2021, 16:18 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದ ಮಹಿಳಾ ಪ್ರಯಾಣಿಕರೊಬ್ಬರ ಬ್ಯಾಗ್‌ನಲ್ಲಿ ₹ 28 ಕೋಟಿ ಮೌಲ್ಯದ ಹೆರಾಯಿನ್ ಪತ್ತೆಯಾಗಿದ್ದು, ಅದನ್ನು ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.

‘ವಿಮಾನದಲ್ಲಿ ನಿಲ್ದಾಣಕ್ಕೆ ಬಂದಿಳಿದಿದ್ದ ಆಫ್ರಿಕಾ ಮಹಿಳೆಯೊಬ್ಬರನ್ನು ತಪಾಸಣೆಗೆ ಒಳಪಡಿಸಲಾಗಿತ್ತು. ಆಕೆಯ ಬಳಿ ₹ 4 ಕೆ.ಜಿ ಹೆರಾಯಿನ್ ಪತ್ತೆಯಾಗಿದೆ. ಎನ್‌ಡಿಪಿಎಸ್ ಕಾಯ್ದೆಯಡಿ ಆಕೆಯನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಆಕೆ ನ್ಯಾಯಾಂಗ ಬಂಧನದಲ್ಲಿದ್ದಾಳೆ’ ಎಂದು ಡಿಆರ್‌ಐ ಮೂಲಗಳು ಹೇಳಿವೆ.

‘ಶೇ 100ರಷ್ಟು ಶುದ್ಧ ಹೆರಾಯಿನ್ ಇದಾಗಿದೆ. ಇದನ್ನು ಬೆಂಗಳೂರಿಗೆ ತಂದು, ಬೇರೆ ಮಾದಕ ವಸ್ತುವಿನ ಜೊತೆ ಮಿಶ್ರಣ ಮಾಡಿ ಮಾರುವ ಯೋಚನೆ ಮಹಿಳೆಯದ್ದಾಗಿತ್ತು. ಈಕೆ ಜೊತೆಯಲ್ಲಿ ಮತ್ತಷ್ಟು ಮಂದಿ ಕೃತ್ಯದಲ್ಲಿ ಭಾಗಿಯಾಗಿರುವ ಶಂಕೆ ಇದೆ. ತನಿಖೆ ಮುಂದುವರಿದಿದೆ’ ಎಂದೂ ತಿಳಿಸಿವೆ.

‘ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಶುದ್ಧ ಹೆರಾಯಿನ್‌ ಕೆ.ಜಿ.ಗೆ ₹ 7 ಕೋಟಿ ಮೌಲ್ಯವಿದೆ. ಸದ್ಯ ಜಪ್ತಿ ಮಾಡಿರುವ 4 ಕೆ.ಜಿ ಹೆರಾಯಿನ್ ಬೆಲೆ ₹ 28 ಕೋಟಿ ಆಗುತ್ತದೆ’ ಎಂದೂ ಮೂಲಗಳು ಹೇಳಿವೆ.

ಹಲವು ಬಾರಿ ಸಾಗಣೆ ಶಂಕೆ: ‘ವಿಮಾನದಲ್ಲಿ ಬರುತ್ತಿದ್ದ ಆಫ್ರಿಕಾ ಮಹಿಳೆ ಬಳಿ ಹೆರಾಯಿನ್ ಇರುವ ಮಾಹಿತಿ ಭಾತ್ಮೀದಾರರೊಬ್ಬರಿಂದ ಗೊತ್ತಾಗಿತ್ತು. ಹೀಗಾಗಿ, ನಿಲ್ದಾಣದಲ್ಲಿ ಬೀಡು ಬಿಟ್ಟು ಮಹಿಳೆಗಾಗಿ ಕಾಯುತ್ತಿದ್ದೆವು’ ಎಂದು ಮೂಲಗಳು ತಿಳಿಸಿವೆ.

‘ಮಹಿಳೆ ಬರುತ್ತಿದ್ದಂತೆ ತಪಾಸಣೆ ನಡೆಸಲು ಮುಂದಾದೆವು. ಆಕೆಯ ಬ್ಯಾಗ್‌ ಪರಿಶೀಲಿಸಿದೆವು. ಬಟ್ಟೆಗಳ ಜೊತೆಯಲ್ಲೇ ಹೆರಾಯಿನ್ ಪೊಟ್ಟಣಗಳು ಇದ್ದವು’ ಎಂದೂ ಹೇಳಿವೆ.

‘ಮಹಿಳೆ ಹಾಗೂ ಆಕೆಯ ಸಹಚರರು, ವಿಮಾನ ಮೂಲಕ ಹಲವು ಬಾರಿ ಹೆರಾಯಿನ್ ಸಾಗಿಸಿರುವ ಅನುಮಾನವಿದೆ. ಆರೋಪಿ ನೀಡಿರುವ ಮಾಹಿತಿ ಆಧರಿಸಿ ತನಿಖೆ ಮುಂದುವರಿಸಲಾಗಿದ್ದು, ಮತ್ತಷ್ಟು ಮಂದಿಯನ್ನು ಸದ್ಯದಲ್ಲೇ ಬಂಧಿಸಲಾಗುವುದು’ ಎಂದೂ ಡಿಆರ್‌ಐ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT