ಶುಕ್ರವಾರ, ಜುಲೈ 30, 2021
27 °C
ಯಾವುದೇ ಜವಾಬ್ದಾರಿ ನಿರ್ವಹಿಸುವೆ

ಸಚಿವ ಸಂಪುಟದಿಂದ ಕೈಬಿಟ್ಟಿದ್ದಕ್ಕೆ ಬೇಸರವಿಲ್ಲ: ಸದಾನಂದಗೌಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ‘ಪ್ರಧಾನಿ ನರೇಂದ್ರ ಮೋದಿ ಸಂಪುಟದಿಂದ ನನ್ನನ್ನು ಕೈಬಿಟ್ಟಿರುವುದಕ್ಕೆ ಯಾವುದೇ ರೀತಿಯ ಬೇಸರ ಇಲ್ಲ’ ಎಂದು ಬೆಂಗಳೂರು ಉತ್ತರ ಕ್ಷೇತ್ರದ ಸಂಸದ ಡಿ.ವಿ. ಸದಾನಂದಗೌಡ ತಿಳಿಸಿದರು.

ಶುಕ್ರವಾರ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಅವರು, ‘ಪಕ್ಷವು ಏಳು ವರ್ಷಗಳ ಕಾಲ ಕೇಂದ್ರ ಸಚಿವ ಸ್ಥಾನದ ಅವಕಾಶ ನೀಡಿದೆ. ಯುವಕರಿಗೆ ಅವಕಾಶ ನೀಡಲೆಂದೇ ವರಿಷ್ಠರು ರಾಜೀನಾಮೆ ಪಡೆದಿರಬಹುದು’ ಎಂದರು.

‘ನನ್ನಿಂದ ಮಾತ್ರವಲ್ಲ, ಕೇಂದ್ರ ಸಚಿವ ಸಂಪುಟದಲ್ಲಿದ್ದ ಇತರ ಕೆಲವು ಹಿರಿಯರಿಂದಲೂ ಪ್ರಧಾನಿ ರಾಜೀನಾಮೆ ಪಡೆದಿದ್ದಾರೆ. ಪಕ್ಷದ ವರಿಷ್ಠರ ಈ ನಿರ್ಧಾರಕ್ಕೆ ಎಲ್ಲರೂ ಬದ್ಧರಾಗಿದ್ದೇವೆ’ ಎಂದು ಅವರು ಹೇಳಿದರು.

‘ಪಕ್ಷವು ನನಗೆ ರಾಜ್ಯ ಘಟಕದ ಅಧ್ಯಕ್ಷ, ಮುಖ್ಯಮಂತ್ರಿ, ವಿಪಕ್ಷ ನಾಯಕ, ಕೇಂದ್ರದ ಸಚಿವ ಸ್ಥಾನದ ಅವಕಾಶ ನೀಡಿದೆ. ಯಾವುದೇ ಒಬ್ಬ ವ್ಯಕ್ತಿ ಇದಕ್ಕಿಂತ ಹೆಚ್ಚಿನದನ್ನು ನಿರೀಕ್ಷಿಸುವುದೂ ತಪ್ಪು. ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ವಿಷಾದವಂತೂ ಇಲ್ಲ’ ಎಂದು ಅವರು ಸ್ಪಷ್ಟಪಡಿಸಿದರು.

‘ವರಿಷ್ಠರ ನಿರೀಕ್ಷೆಯಂತೆಯೇ ಕಾರ್ಯ ನಿರ್ವಹಿಸಿದ ತೃಪ್ತಿ, ಹೆಮ್ಮೆ ಇದೆ. ಕೋವಿಡ್‌ನಂತಹ ಸಂದಿಗ್ಧ ಸ್ಥಿತಿಯಲ್ಲಿ ಸಂಕಷ್ಟದಲ್ಲಿದ್ದ ಜನತೆಗೆ ನನಗೆ ಸಂಬಂಧಿಸಿದ ಸಚಿವಾಲಯದ ಮೂಲಕ ಅಗತ್ಯ ಔಷಧಿ ವಿತರಣೆಗೆ ಸತತ ಶ್ರಮ ವಹಿಸಿದ್ದು ಸ್ಮರಣೀಯ ಅನುಭವವಾಗಿದೆ. ನನ್ನನ್ನು ಕೈಬಿಟ್ಟು ಯುವಕರಿಗೆ ಅವಕಾಶ ನೀಡಿರುವುದು ಸಂತಸ ನೀಡಿದೆ’ ಎಂದು ಅವರು ಹೇಳಿದರು.

‘ರಾಜ್ಯ ಬಿಜೆಪಿಯಲ್ಲಿ ಯಾವುದಾದರೂ ಪ್ರಮುಖ ಹುದ್ದೆಯ ನಿರೀಕ್ಷೆಯಲ್ಲಿದ್ದೀರಾ’ ಎಂಬ ಪ್ರಶ್ನೆಗೆ ನಗುತ್ತಲೇ ಉತ್ತರಿಸಿದ ಅವರು, ‘ಅಂಥ ನಿರೀಕ್ಷೆಗಳೇನೂ ಇಲ್ಲ. ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಪಕ್ಷ ಸಂಘಟನೆಗಾಗಿ ಯಾವುದೇ ಜವಾಬ್ದಾರಿ ವಹಿಸಿದರೂ ನಿರ್ವಹಿಸಬಲ್ಲೆ’ ಎಂದು ವಿವರಿಸಿದರು.

ಕೇಂದ್ರ ಸಂಪುಟ ಪುನರ್‌ ರಚನೆಗೆ ಕೆಲವೇ ದಿನಗಳ ಮೊದಲು ಮಾನಹಾನಿಕರ ಸುದ್ದಿ ಪ್ರಸಾರ ಮಾಡದಂತೆ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಸದಾನಂದಗೌಡ, ‘ನಮ್ಮ ಸುತ್ತಲೇ ಇರುವ ಕೆಲವರು ಪಿತೂರಿ ನಡೆಸುವ ಮೂಲಕ ಮಾನಹಾನಿಗೆ ಯತ್ನಿಸಿದ್ದಾರೆ ಎಂಬುದು ತಿಳಿದುಬಂದಿದ್ದರಿಂದ ನ್ಯಾಯಾಲಯದ ಮೊರೆ ಹೋಗಬೇಕಾಯಿತು’ ಎಂದಷ್ಟೇ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು