ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧಾರ್ಮಿಕ ಇಲಾಖೆಯಲ್ಲಿ ‘ಇ– ಆಫೀಸ್‌’ ವ್ಯವಸ್ಥೆ: ಬಿಎಸ್‌ವೈ

ಧಾರ್ಮಿಕ ಪರಿಷತ್‌ ಸದಸ್ಯರ ಪ್ರಶಿಕ್ಷಣ ಕಾರ್ಯಾಗಾರ
Last Updated 7 ಜನವರಿ 2021, 16:04 IST
ಅಕ್ಷರ ಗಾತ್ರ

ಬೆಂಗಳೂರು: ‘ಧಾರ್ಮಿಕ ದತ್ತಿ ಇಲಾಖೆಯಲ್ಲಿ ಪಾರದರ್ಶಕತೆ ತರಲು ಮತ್ತು ಕಡತಗಳು ತ್ವರಿತಗತಿಯಲ್ಲಿ ವಿಲೇವಾರಿಯಾಗಲು ಇ- ಆಫೀಸ್ ತಂತ್ರಾಂಶವನ್ನು ಗುರುವಾರದಿಂದ ಜಾರಿಗೆ ತರಲಾಗಿದೆ’ ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಹೇಳಿದರು.

ರಾಜ್ಯಮಟ್ಟದ ಜಿಲ್ಲಾ ಧಾರ್ಮಿಕ ಪರಿಷತ್‌ ಸದಸ್ಯರ ಪ್ರಶಿಕ್ಷಣ ಕಾರ್ಯಾಗಾರ ಗುರುವಾರ ಉದ್ಘಾಟಿಸಿ ಮತ್ತು ದೇವಸ್ಥಾನಗಳ ಪರಂಪರೆ ಪರಿಚಯಿಸುವ ‘ಗುಡಿ’ ಮಾಸ ಪತ್ರಿಕೆ ಬಿಡುಗಡೆ ಮಾಡಿ ಮಾತನಾಡಿದ ಅವರು, ‘ಪ್ರಮುಖ ದೇವಸ್ಥಾನದಲ್ಲಿ ಆದ್ಯತೆ ಮೇಲೆ ಪೂಜೆ, ಪ್ರತ್ಯೇಕ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಅಂಗವಿಕಲರಿಗೆ, ವಯೋವೃದ್ದರಿಗೂ ಅವಕಾಶ ಮಾಡಲಾಗುವುದು’ ಎಂದರು.

ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ‘ಗೋ ಹತ್ಯೆ ನಿಷೇಧ ಕಾಯ್ದೆ ಜಾರಿ ಮಾಡುವ ಮೂಲಕ ನಮ್ಮ ಭಾವನೆಗಳಿಗೆ ಯಡಿಯೂರಪ್ಪ ಸ್ಪಂದಿಸಿದ್ದಾರೆ.‌ ಮಹಾತ್ಮ ಗಾಂಧಿಯಿಂದ ಆರಂಭಿಸಿ, ರೈತರವರೆಗೂ ಎಲ್ಲರೂ ಗೋಹತ್ಯೆ ನಿಷೇಧ ಜಾರಿಯಾಗಬೇಕು ಎಂದು ಬಯಸಿದ್ದರು’ ಎಂದರು.

ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ, ‘ದೇವಾಲಯಗಳು ಸಮಾಜವನ್ನು ಒಗ್ಗೂಡಿಸುತ್ತವೆ. ಹೀಗಾಗಿ, ದೇವಸ್ಥಾನಗಳ ರಕ್ಷಣೆ ಸರ್ಕಾರದ ಮತ್ತು ನಮ್ಮೆಲ್ಲರ ಕರ್ತವ್ಯ’ ಎಂದ ಅವರು, ‘ಕೊರೊನಾ ಏನಾದರೂ ಸಂದೇಶ ಕೊಟ್ಟಿದ್ದರೆ, ಅದು ಮಡಿವಂತಿಕೆ ಪಾಲಿಸಬೇಕು ಎನ್ನುವುದು. ನಮ್ಮ ಪಾವಿತ್ರ್ಯತೆ, ದೇವಾಲಯವನ್ನು ಶುದ್ಧವಾಗಿ ಇಟ್ಟುಕೊಳ್ಳುವುದು ಬಹಳ ಅಗತ್ಯ’ ಎಂದರು.

ಆರ್ಟ್‌ ಆಫ್ ಲಿವಿಂಗ್‌ನ ಶ್ರೀ ರವಿಶಂಕರ್ ಗುರೂಜಿ, ‘ರಾಜಾಶ್ರಯ ಇದ್ದರೆ ಮಾತ್ರ ಧರ್ಮ ಉಳಿಯಲು ಸಾಧ್ಯ. ಇಲ್ಲದೇ ಇದ್ದರೆ ಧರ್ಮ ಉಳಿಯಲು ಸಾಧ್ಯವಿಲ್ಲ.ಕೊರೊನಾ ಬಂದ ಬಳಿಕ ಮಾನಸಿಕ ರೋಗ ಹೆಚ್ಚಾಗಿದೆ. ದೇವಾಲಯಗಳು ಮಾನಸಿಕ ರೋಗವನ್ನು ತಡೆಯುವಂಥ ಕಾರ್ಯವನ್ನು ಮಾಡುತ್ತಿವೆ’ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT