ಶುಕ್ರವಾರ, ಮೇ 20, 2022
21 °C

ಆರ್ಥಿಕತೆ ಅಂದರೆ ದುಡ್ಡಲ್ಲ, ಜನರ ಅಭಿವೃದ್ಧಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಸಮಾಜ ಕಲ್ಯಾಣ ಇಲಾಖೆಗೆ ಅನುದಾನ ಹಂಚಿಕೆ ವೆಚ್ಚ ಅಲ್ಲ, ಬಂಡವಾಳ. ಆರ್ಥಿಕತೆ ಅಂದರೆ ದುಡ್ಡಲ್ಲ, ಜನರ ಅಭಿವೃದ್ಧಿ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ವೃತ್ತಿ ಸಾಮರ್ಥ್ಯ ಅಭಿವೃದ್ಧಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ‘ಆಡಳಿತದಲ್ಲಿ ಆಮೂಲಾಗ್ರ ಬದಲಾವಣೆ ತರುತ್ತಿದ್ದೇವೆ. ಕಾಲಮಿತಿಯಲ್ಲಿ, ತ್ವರಿತವಾಗಿ ಕೆಲಸ ಆಗಬೇಕು’ ಎಂದರು.

‘ನಾವು ಸಮಸ್ಯೆಗಳ ಬಗ್ಗೆ ಚರ್ಚೆ ಮಾಡುತ್ತೇವೆ. ಆ ಜನರು (ಪರಿಶಿಷ್ಟರು) ಸಮಸ್ಯೆಗಳ ಜೊತೆ ಜೀವನ ಮಾಡುತ್ತಾರೆ. ಐದು ನಿಮಿಷ ಹೆಚ್ಚು ಸಮಯ ಕೊಟ್ಟು, ಲಕ್ಷ್ಯ ಕೊಟ್ಟು ಅವರ ಕಷ್ಟಗಳನ್ನು ಕೇಳಿ. ಆ ಸಮುದಾಯವನ್ನು ಸ್ವಾವಲಂಬಿ ಮಾಡುವುದು ಮುಖ್ಯ. ಇದರಲ್ಲಿ ಯಾವುದೇ ರಾಜಿ, ಮುಲಾಜು ಇಲ್ಲ. ಅಧಿಕಾರವನ್ನು ಜನರ ಪರವಾಗಿ ಬಳಕೆ ಮಾಡಬೇಕು. ಈ ವ್ಯವಸ್ಥೆಯಲ್ಲಿ ಸರ್ಕಾರಿ ನೌಕರರಾಗಿ ಕೆಲಸ ಮಾಡುವುದು ಸುಲಭ ಅಲ್ಲ ಎನ್ನುವುದು ಗೊತ್ತಿದೆ. ಕೆಲಸ ಮಾಡುವ ಅಧಿಕಾರಿಗಳ ಸಂಪೂರ್ಣ ರಕ್ಷಣೆ ನಮ್ಮ ಜವಾಬ್ದಾರಿ’ ಎಂದರು.

‘ಪ್ರತಿಯೊಬ್ಬ ವ್ಯಕ್ತಿಯೂ ಸಾಧನೆ ಮಾಡುವ ಆಕಾಂಕ್ಷೆ ಹೊಂದಿದ್ದಾನೆ. ಸಾಧನೆಯಿಂದ ನಾವು ಪ್ರಸ್ತುತವಾಗಿ ಉಳಿಯುತ್ತೇವೆ. ನಮ್ಮನ್ನು ನಂಬಿದ ಜನಕ್ಕೆ ನ್ಯಾಯ ಒದಗಿಸಿದಂತೆಯೂ ಆಗುತ್ತದೆ. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಯೋಜನೆಗಳು ಸಲ್ಲಬೇಕು. ಸಾಮರ್ಥ್ಯದ ಜೊತೆಗೆ ಬದ್ಧತೆ ಇರಬೇಕು. ಕಷ್ಟದಲ್ಲಿ ಇರುವವರಿಗೆ, ತುಳಿತಕ್ಕೆ ಒಳಗಾದವರ ಬಗ್ಗೆ ಗಮನ ಹರಿಸಿದರೆ ಒಳ್ಳೆಯದಾಗಲಿದೆ. ಟೀಕೆ, ಟಿಪ್ಪಣಿ ಸ್ವಾಭಾವಿಕ. ಶ್ರೀರಾಮನಿಗೂ ಟೀಕೆ ಟಿಪ್ಪಣಿಗಳು ತಪ್ಪಲಿಲ್ಲ’ ಎಂದರು.

‘21ನೇ ಶತಮಾನ ಜ್ಞಾನವಂತರದ್ದು. ಬದಲಾವಣೆಯ ಕಾಲ ಬಂದಿದೆ. ಕ್ರಿಯೆಯಿಂದ, ನಮ್ಮ ಕೆಲಸದಿಂದ ಗುರಿ ತಲುಪಲು ಸಾಧ್ಯ. ನಿಮ್ಮೆಲ್ಲರ ಸಹಕಾರ ಇರಲಿ. ನಿಮ್ಮ ರಕ್ಷಣೆ ನಮ್ಮದು. ಬದಲಾವಣೆಯ ಹರಿಕಾರರಾಗಿ, ಬದಲಾವಣೆಯ ವಾಹಿನಿಗಳಾಗಿ ಮುಂದೆ ಹೋಗಿ’ ಎಂದು ಅಧಿಕಾರಿಗಳಿಗೆ ಮುಖ್ಯಮಂತ್ರಿ ಸಂದೇಶ ನೀಡಿದರು.

ಇದೇ ವೇಳೆ ಸಮಾಜ ಕಲ್ಯಾಣ ಇಲಾಖೆ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ‘ಕಲ್ಯಾಣ ಮಿತ್ರ’ ಏಕೀಕೃತ ಎಸ್‌ಸಿ, ಎಸ್‌ಟಿ 24x7 ಸಹಾಯವಾಣಿಯನ್ನು (9482300400) ಮುಖ್ಯಮಂತ್ರಿ ಲೋಕಾರ್ಪಣೆ ಮಾಡಿದರು.

ಸಭಾಪತಿ ಬಸವರಾಜ ಹೊರಟ್ಟಿ, ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಎನ್. ರವಿಕುಮಾರ್, ಎ. ನಾರಾಯಣಸ್ವಾಮಿ, ಅ. ದೇವೇಗೌಡ, ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಚ್. ನಾಗೇಶ, ರಾಮಣ್ಣ ಲಮಾಣಿ, ಮುಖ್ಯಮಂತ್ರಿಯ ಪ್ರಧಾನ ಕಾರ್ಯದರ್ಶಿ ಮಂಜುನಾಥ ಪ್ರಸಾದ್, ಸಮಾಜ ಕಲ್ಯಾಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಿ. ಕುಮಾರ ನಾಯಕ, ‌ಆಯುಕ್ತ ಕೆ. ರಾಕೇಶಕುಮಾರ, ನಿವೃತ್ತ ಐಎಎಸ್ ಅಧಿಕಾರಿ ಕೆ. ಶಿವರಾಮ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು