ಕೆಜಿಎಫ್ ಬಾಬು ಮನೆಯಲ್ಲಿ ಇ.ಡಿ ಶೋಧ

ಬೆಂಗಳೂರು: ಕಾಂಗ್ರೆಸ್ ಮುಖಂಡ ಹಾಗೂ ರಿಯಲ್ ಎಸ್ಟೇಟ್ ಉದ್ಯಮಿ ಯೂಸುಫ್ ಷರೀಫ್ ಅಲಿಯಾಸ್ ಕೆಜಿಎಫ್ ಬಾಬು ಮನೆ, ಕಚೇರಿಗಳು ಹಾಗೂ ನಿಕಟವರ್ತಿಗಳ ಮನೆಗಳ ಮೇಲೆ ಶನಿವಾರ ದಾಳಿಮಾಡಿರುವ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು, ಶೋಧ ನಡೆಸಿದ್ದಾರೆ.
ಯೂಸುಫ್ ಷರೀಫ್ 2021ರ ಡಿಸೆಂಬರ್ನಲ್ಲಿ ನಡೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಬೆಂಗಳೂರು ನಗರ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದರು. ಆಗ, ₹ 1,744 ಕೋಟಿ ಮೌಲ್ಯದ ಆಸ್ತಿ ಘೋಷಿಸಿಕೊಂಡಿದ್ದರು. ಅಲ್ಲದೇ ತಮ್ಮ ಬಳಿ ಹಲವು ಸಾವಿರ ಕೋಟಿ ರೂಪಾಯಿ ಮೌಲ್ಯದ ಆಸ್ತಿ ಇದೆ ಎಂಬ ಹೇಳಿಕೆಗಳನ್ನು ನೀಡಿದ್ದರು.
ವಸಂತನಗರದಲ್ಲಿರುವ ಷರೀಫ್ ಮನೆ ‘ರುಕ್ಸಾನಾ ಪ್ಯಾಲೇಸ್’, ಉಮ್ರಾ ಡೆವಲಪರ್ಸ್ ಸೇರಿದಂತೆ ಅವರ ಒಡೆತನದ ಎಂಟು ರಿಯಲ್ ಎಸ್ಟೇಟ್ ಕಂಪನಿಗಳ ಕಚೇರಿಗಳು, ಕಂಪನಿಗಳ ವಹಿವಾಟು ನಿರ್ವಹಿಸುತ್ತಿರುವ ಕೆಲವು ನಿಕಟವರ್ತಿಗಳ ಮನೆ, ಕಚೇರಿಗಳ ಮೇಲೆ ಇ.ಡಿ ಅಧಿಕಾರಿಗಳು ದಾಳಿಮಾಡಿದ್ದು, ಶೋಧ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.
ಹಿಂದೆಯೂ ಹಲವು ಬಾರಿ ಇವರ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ಮಾಡಿದ್ದರು. ತೆರಿಗೆ ವಂಚನೆ ಆರೋಪದಡಿ ವಿಚಾರಣೆಯೂ ನಡೆದಿತ್ತು. ವಿಧಾನ ಪರಿಷತ್ ಚುನಾವಣೆ ಬಳಿಕ ಒಮ್ಮೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಷರೀಫ್ ಮನೆಯಲ್ಲಿ ತಪಾಸಣೆ ನಡೆಸಿದ್ದರು. ಅದರ ಮುಂದುವರಿದ ಭಾಗವಾಗಿ ಜಾರಿ ನಿರ್ದೇಶನಾಲಯದಿಂದ ತನಿಖೆ ಆರಂಭಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ವಿಧಾನ ಪರಿಷತ್ ಚುನಾವಣೆಯಲ್ಲಿ ಸೋತ ಬಳಿಕ ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ತಮ್ಮ ಚಟುವಟಿಕೆ ವಿಸ್ತರಿಸುವ ಪ್ರಯತ್ನವನ್ನು ಷರೀಫ್ ಮುಂದುವರಿಸಿದ್ದರು. 2023ರ ವಿಧಾನಸಭಾ ಚುನಾವಣೆಯಲ್ಲಿ ಆ ಕ್ಷೇತ್ರದ ಟಿಕೆಟ್ ಪಡೆಯುವ ನಿರೀಕ್ಷೆ ಇಟ್ಟುಕೊಂಡಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.