ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜ.11ರಿಂದ ಆಕಾಶವಾಣಿ‌ಯಲ್ಲಿ ‘ಕಲಿಯುತ್ತಾ ನಲಿಯೋಣ’: ಸಚಿವ ಸುರೇಶ್‌ಕುಮಾರ್

Last Updated 9 ಜನವರಿ 2021, 8:30 IST
ಅಕ್ಷರ ಗಾತ್ರ

ಬೆಂಗಳೂರು: ‘ಆಕಾಶವಾಣಿ ಮೂಲಕ ಜ. 11ರಿಂದ ‘ಕಲಿಯುತ್ತಾ ನಲಿಯೋಣ’ ಎಂಬ ಹೊಸ ಕಾರ್ಯಕ್ರಮವನ್ನು ಶಿಕ್ಷಣ ಇಲಾಖೆ ಆರಂಭಿಸುತ್ತಿದೆ‌’ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್‌. ಸುರೇಶ್ ಕುಮಾರ್‌ ತಿಳಿಸಿದ್ದಾರೆ.

‘ಒಂದನೇ ತರಗತಿಯಿಂದ ನಾಲ್ಕನೇ ತರಗತಿಯವರೆಗೆ ಇರುವ ಮಕ್ಕಳಿಗಾಗಿ ಇರುವ ‘ನಲಿಕಲಿ’ ಮತ್ತು ‘ಕಲಿನಲಿ’ ಕಾರ್ಯಕ್ರಮಗಳನ್ನು ಜ. 11ರಿಂದ ಏಪ್ರಿಲ್ 5ರವರೆಗೆ ಆಕಾಶವಾಣಿ ಪ್ರಸಾರ ಮಾಡಲಿದೆ.

‘ಪ್ರತಿ ವಾರ ಸೋಮವಾರದಿಂದ ಶುಕ್ರವಾರದವರೆಗೂ ನಿತ್ಯ ಬೆಳಿಗ್ಗೆ 10 ಗಂಟೆಯಿಂದ 10.15 ರವರೆಗೆ ಒಂದು ಮತ್ತು ಎರಡನೇ ತರಗತಿಗಳಿಗಾಗಿ ಹಾಗೂ 10:15 ರಿಂದ 10.30 ಗಂಟೆಯವರೆಗೂ 3 ಮತ್ತು 4ನೇ ತರಗತಿಗಳಿಗಾಗಿ ಹಾಡು, ಕಥೆ, ನಾಟಕ, ಸಂಭಾಷಣೆ, ಒಗಟು, ಮತ್ತು ವಿವಿಧ ಆಸಕ್ತಿಕರ ಕಾರ್ಯಕ್ರಮಗಳ ಮೂಲಕ ಆಯಾ ತರಗತಿಗಳ ಮಕ್ಕಳ ಕಲಿಕೆ ಮುಂದುವರಿಯುವಂತೆ ಮಾಡಲು ಶಿಕ್ಷಣ‌ ಇಲಾಖೆ ಈ ಕಾರ್ಯಕ್ರಮ ಹಮ್ಮಿಕೊಂಡಿದೆ’ ಎಂದು ಸಚಿವರು ವಿವರಿಸಿದ್ದಾರೆ.

‘ಈ ಕಾರ್ಯಕ್ರಮಗಳ ಮೂಲಕ ನಲಿ–ಕಲಿಯ ಆಶಯಗಳಾದ ಆಲಿಸುವಿಕೆ, ವಸ್ತು ಗುರುತಿಸುವಿಕೆ, ಸ್ವ ಕಲಿಕೆ, ಸಂತಸದಾಯಕ ಕಲಿಕೆ, ಶಬ್ದ ಪರಿಚಯ... ಹೀಗೆ ಶಬ್ದಗಳ ಏರಿಳಿತದ ಮೂಲಕ ವಿಷಯಗಳನ್ನು ವಿನೂತನ ಮಾದರಿಯಲ್ಲಿ ತಿಳಿಸಲಾಗುತ್ತದೆ. ಒಂದರಿಂದ ನಾಲ್ಕನೇ ತರಗತಿಯವರೆಗೆ ಓದುತ್ತಿರುವ ಮಕ್ಕಳ ಎಲ್ಲಾ ಪೋಷಕರಿಗೆ ಈ ಕಾರ್ಯಕ್ರಮವನ್ನು ಮಕ್ಕಳೊಂದಿಗೆ ಆಲಿಸಬೇಕು’ ಎಂದು ಅವರು ಮನವಿ ಮಾಡಿದ್ದಾರೆ.

‘ಅಲ್ಲಿ ಪ್ರಸಾರಗೊಳ್ಳುವ ಹಾಡು, ಕಥೆ ಇತ್ಯಾದಿಗಳನ್ನು ಮಕ್ಕಳಿಗೆ ಮತ್ತೊಮ್ಮೆ ಹೇಳುವುದರ ಮೂಲಕ ಹೇಳಿಸುವ ಮೂಲಕ ಮಕ್ಕಳಿಗೆ ನಲಿಯುವುದರ ಜೊತೆಗೆ ಕಲಿಯುವುದನ್ನು ಅಭ್ಯಾಸ ಮಾಡಿಸಿ’ ಎಂದು ಪೋಷಕರಲ್ಲಿ ವಿನಂತಿಸಿದರು.

ಮಕ್ಕಳು ಹೇಳಿದ ಕತೆಗಳೂ ಪ್ರಸಾರ: ‘ಮಕ್ಕಳಿಂದ ಯಾವುದಾದರೂ ಕತೆ ಹಾಡು ಒಗಟು ಹೇಳಬಹುದಾದರೆ ವಾಟ್ಸ್‌ ಆ್ಯಪ್‌ ನಂಬರ್ 9449417612 ಗೆ ಕಳಿಸಿದರೆ ಅದನ್ನು ಪ್ರಸಾರ ಮಾಡಲಾಗುವುದು. ಈ ಕಾರ್ಯಕ್ರಮ ರಾಜ್ಯದ 13 ಆಕಾಶವಾಣಿ ಕೇಂದ್ರಗಳಿಂದ ಪ್ರಸಾರವಾಗುತ್ತದೆ. ಮತ್ತು ಈ ಕಾರ್ಯಕ್ರಮಗಳು ಯೂಟ್ಯೂಬ್‌ನಲ್ಲಿ ಕೂಡಾ ಲಭ್ಯವಿರುತ್ತವೆ. ಈ ಎಳೆ ಕಂದಗಳ ಮನಸ್ಸುಗಳನ್ನು ವಿಕಸನಗೊಳಿಸುವ ಉದ್ದೇಶದಿಂದ ಆರಂಭಿಸಲಾಗುತ್ತಿರುವ ಈ ಕಾರ್ಯಕ್ರಮಕ್ಕೆ ತಮ್ಮೆಲ್ಲರ ಪ್ರೋತ್ಸಾಹವಿರಲಿ’ ಎಂದು ಸಚಿವರು ಪೋಷಕರಲ್ಲಿ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT