ಶುಕ್ರವಾರ, ಫೆಬ್ರವರಿ 26, 2021
19 °C
ಜ. 1ರಿಂದ ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿ ತರಗತಿ ಆರಂಭ

ಶಾಲೆ– ಕಾಲೇಜುಗಳಲ್ಲಿ ಸಿದ್ಧತೆ ಪರಿಶೀಲಿಸಿದ ಶಿಕ್ಷಣ ಸಚಿವ ಸುರೇಶ್ ಕುಮಾರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ತರಗತಿ ಜ. 1ರಿಂದ ಆರಂಭವಾಗುತ್ತಿರುವುದರಿಂದ ಶಾಲಾ ಕಾಲೇಜುಗಳಲ್ಲಿನ ಪೂರ್ವ ಸಿದ್ಧತೆಯನ್ನು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಪರಿಶೀಲಿಸಿದರು.

ನಗರದ ವಿವಿಧ ಸರ್ಕಾರಿ ಹಾಗೂ ಖಾಸಗಿ ಪದವಿಪೂರ್ವ ಕಾಲೇಜು ಮತ್ತು ಸರ್ಕಾರಿ ಪ್ರೌಢಶಾಲೆಗಳಿಗೆ ಬುಧವಾರ ಭೇಟಿ ನೀಡಿದ ಸಚಿವರು, ಶಾಲೆಯಲ್ಲಿ ಹಾಜರಿದ್ದ ಮುಖ್ಯೋಪಾಧ್ಯಾಯರು, ಪ್ರಾಂಶುಪಾಲರು, ಉಪನ್ಯಾಸಕರು, ಶಿಕ್ಷಕರ ಜತೆ ತರಗತಿಗಳನ್ನು ಆರಂಭಿಸುವಾಗ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳನ್ನು ವಿವರಿಸಿದರು. 

ಮೊದಲ ದಿನದ ಮೊದಲ ತರಗತಿ ಅವಧಿಯಲ್ಲಿ ಕೊರೊನಾ ಕುರಿತು ಮುನ್ನೆಚ್ಚರಿಕೆ ಕ್ರಮಗಳು, ಪಾಲಿಸಬೇಕಾದ ನಿಯಮಗಳು ಮತ್ತು ವಿಶೇಷವಾಗಿ ತರಗತಿ ಆರಂಭಿಸಿರುವ ಮಹತ್ವ ಮತ್ತುಈ ಪರೀಕ್ಷೆಗಳಲ್ಲಿ ಹೆಚ್ಚಿನ ಅಂಕಗಳೊಂ
ದಿಗೆ ಉತ್ತೀರ್ಣರಾಗಬೇಕಾದ ಬಗ್ಗೆ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಮೂಡಿಸಬೇಕು ಎಂದು ಸಚಿವರು ಸಲಹೆ ನೀಡಿದರು.

ಮಾಸ್ಕ್ ಧರಿಸುವುದು, ಕೈತೊಳೆಯಲು ಸ್ಯಾನಿಟೈಸರ್ ಅಥವಾ ಸಾಬೂನು ಬಳಸುವುದು, ಕೋವಿಡ್ ಪರೀಕ್ಷೆ ಫಲಿತಾಂಶದೊಂದಿಗೆ ಶಿಕ್ಷಕರು ಬರುವುದು, ಫೇಸ್ ಮಾಸ್ಕ್‌ ಮತ್ತು ಫೇಸ್ ಶೀಲ್ಡ್ ಧರಿಸುವುದು, ಮಕ್ಕಳ ಶಾರೀರಿಕ‌ ಅಂತರ ಗಮನ ಹರಿಸುವುದು ಆರೋಗ್ಯ, ರೋಗ ಲಕ್ಷಣಗಳ ಕುರಿತು ನಿಗಾ ವಹಿಸುವುದು, ತರಗತಿ ಕೊಠಡಿಯಲ್ಲಿ ಕಡಿಮೆ ಸಂಖ್ಯೆಯಲ್ಲಿ ಮಕ್ಕಳನ್ನು ಅಂತರದಲ್ಲಿ ಕೂರಿಸುವುದು ಸೇರಿದಂತೆ ಕೋವಿಡ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದರು.

ಶಾಲೆ ಮುಗಿದ ಬಳಿಕ ಶಾಲಾ ಆವರಣ, ತರಗತಿ ಕೊಠಡಿ ಮತ್ತು ಶೌಚಾಲಯಗಳನ್ನು ಸ್ವಚ್ಛಗೊಳಿಸಬೇಕು. ನಿಗದಿಪಡಿಸುವ ಪಠ್ಯವನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಲು ಶಿಕ್ಷಕರು ಕ್ರಮ ವಹಿಸಬೇಕು. ಕಳೆದ ವರ್ಷದ ಬಸ್ ಪಾಸುಗಳನ್ನೇ ಬಳಸಲು ಅವಕಾಶವಿರುವುದರಿಂದ ತೊಂದರೆ ಆಗುವುದಿಲ್ಲ ಎಂಬುದನ್ನು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಬೇಕು ಎಂದರು.

ಜ. 4ರಿಂದ ‘ಸಂವೇದಾ ಪಾಠ’ ಮರು ಪ್ರಸಾರ: ‘ಕೋವಿಡ್ ಸೋಂಕು ಕಾರಣ ಶಾಲೆಗಳಲ್ಲಿ ತರಗತಿಗಳು ಆರಂಭ ಆಗದೇ ಇರುವುದರಿಂದ ದೂರದರ್ಶನ ಚಂದನ ವಾಹಿನಿಯಲ್ಲಿ 8, 9 ಮತ್ತು 10ನೇ ತರಗತಿಯ ಸಂವೇದಾ ಪಾಠಗಳನ್ನು ಜ. 4ರಿಂದ ಮರು ಪ್ರಸಾರ ಮಾಡಲಾಗುವುದು’ ಎಂದು ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ.

‘ಕಳೆದ ಜುಲೈ 20ರಿಂದ ಪ್ರಸಾರವಾದ ಪಾಠಗಳು 2021ರ ಜ. 1ಕ್ಕೆ ಪೂರ್ಣಗೊಳ್ಳಲಿವೆ. ಜ. 1ರಿಂದ 10ನೇ ತರಗತಿಗೆ ಶಾಲಾ ತರಗತಿಗಳು ಮತ್ತು 6ರಿಂದ 9ನೇ ತರಗತಿಗಳಿಗೆ ವಿದ್ಯಾಗಮ ತರಗತಿಗಳು ಕೂಡಾ ಆರಂಭವಾಗುತ್ತಿವೆ’ ಎಂದರು. ‘ಚಂದನ ವಾಹಿನಿಯಲ್ಲಿ ಪಾಠಗಳು ಪ್ರಸಾರವಾಗುತ್ತಿರುವುದರಿಂದ ಉತ್ತೇಜಿತಗೊಂಡು ಜಿಯೋ ವಾಹಿನಿಯವರು 5ರಿಂದ 10ನೇ ತರಗತಿಯ ವಿಡಿಯೊ ಪಾಠಗಳನ್ನು ಉಚಿತವಾಗಿ ಪ್ರಸಾರ ಮಾಡಲು ಮುಂದೆ ಬಂದಿದ್ದಾರೆ’ ಎಂದು ಸಚಿವರು ತಿಳಿಸಿದ್ದಾರೆ. ‘1ರಿಂದ 4ನೇ ತರಗತಿಯ ವಿದ್ಯಾರ್ಥಿಗಳ ಕಲಿಕಾ ಹಿತದೃಷ್ಟಿಯಿಂದ ರೇಡಿಯೊ ಪಾಠಗಳನ್ನು ಸಿದ್ಧಪಡಿಸಲಾಗುತ್ತಿದ್ದು, ಜನವರಿ ಎರಡನೇ ವಾರದಿಂದ ಆಕಾಶವಾಣಿಯ 13 ಕೇಂದ್ರಗಳ ಮೂಲಕ ಪ್ರಸಾರ ಮಾಡಲಾಗುವುದು’ ಎಂದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು