ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಮಾಡಿದ ಹಿರಿಯರಿಗೆ ಗೌರವ: ಸಚಿವ ಹಾಲಪ್ಪ

Last Updated 30 ಸೆಪ್ಟೆಂಬರ್ 2021, 17:11 IST
ಅಕ್ಷರ ಗಾತ್ರ

ಬೆಂಗಳೂರು: ‘ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಮಾಡಿರುವ ಹಿರಿಯರನ್ನು ವಿಶ್ವ ಹಿರಿಯ ನಾಗರಿಕರ ದಿನಾಚರಣೆಯಂದು ಗೌರವಿಸಲಾಗುವುದು’ ಎಂದು ಗಣಿ ಮತ್ತು ಭೂ ವಿಜ್ಞಾನ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಸಚಿವ ಹಾಲಪ್ಪ ಆಚಾರ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು, ‘ಸಾಧಕರಿಗೆ ₹ 1 ಲಕ್ಷ ನಗದು ಪುರಸ್ಕಾರ, ನೆನಪಿನ ಕಾಣಿಕೆ, ಪ್ರಮಾಣಪತ್ರ ನೀಡಿ ಗೌರವಿಸಲಾಗುವುದು’ ಎಂದರು.

‘ಎಲ್ಲ ವಯೋಮಾನದವರಿಗೆ ಡಿಜಿಟಲ್ ಸಮಾನತೆ’ ಎಂಬ ಘೋಷವಾಕ್ಯದೊಂದಿಗೆ ರವೀಂದ್ರ ಕಲಾಕ್ಷೇತ್ರದಲ್ಲಿ ಶುಕ್ರವಾರ (ಅ.1) ನಡೆಯಲಿರುವ ಕಾರ್ಯಕ್ರಮದಲ್ಲಿ ಹಿರಿಯರನ್ನು ಮುಖ್ಯಮಂತ್ರಿ ಸನ್ಮಾನಿಸಲಿದ್ದಾರೆ’ ಎಂದರು.

ವಿಶೇಷ ಸಾಧನೆ: ‘75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವದ ನೆನಪಿಗಾಗಿ ಈ ಬಾರಿ ರಾಜ್ಯದ 4 ಕಂದಾಯ ವಿಭಾಗಗಳಲ್ಲಿ ಒಬ್ಬರಂತೆ ನಾಲ್ವರು ವಿಶೇಷ ಸಾಧಕರನ್ನು ಸನ್ಮಾನಿಸಲಾಗುವುದು. ಬೆಂಗಳೂರು ವಿಭಾಗದಿಂದ ಕನ್ನಡ ಗಣಕ ಪರಿಷತ್ – ವಾಗಾಕ್ಷರ ತಂತ್ರಜ್ಞಾನ ಅಭಿವೃದ್ಧಿಗೆ ಸಹಕರಿಸಿದ ಜಿ.ಎನ್. ನರಸಿಂಹಮೂರ್ತಿ, ಮೈಸೂರು ವಿಭಾಗದಿಂದ ಹಾಸನದ ನೃತ್ಯ– ಸಂಗೀತ ಕಲಾವಿದೆ ಉಷಾ ದಾತಾರ, ಬೆಳಗಾವಿ ವಿಭಾಗದಿಂದ ಬಾಗಲಕೋಟೆ ಜಿಲ್ಲೆ ಜಮಖಂಡಿಯ ಪಶುಶುಶ್ರೂಷಕರಾದ ಡಾ. ಹನುಮಂತಪ್ಪ ಭೀಮಪ್ಪ ಗಲಗಲಿ ಹಾಗೂ ಕಲಬುರ್ಗಿ ವಿಭಾಗದಿಂದ ಕೊಪ್ಪಳ ಜಿಲ್ಲೆಯ ತೊಗಲುಗೊಂಬೆ ಕಲಾವಿದೆ ಭೀಮವ್ವ ದೊಡ್ಡಬಾಳಪ್ಪ ಶಿಳ್ಳೇಕ್ಯಾತರ ಅವರನ್ನು ಸಹ ಸನ್ಮಾನಿಸಲಾಗುವುದು’ ಎಂದರು.

‘ರಾಜ್ಯದಾದ್ಯಂತ ಹಿರಿಯರಿಗೆ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳನ್ನು ನಡೆಸಿ ಜಿಲ್ಲೆಯಲ್ಲಿ ವಿಜೇತರಾದವರನ್ನು ಆಯ್ಕೆ ಮಾಡಿ ಈ ಸಮಾರಂಭದಲ್ಲಿ ಹಿಂದೆ ಬಹುಮಾನ ವಿತರಿಸಲಾಗುತ್ತಿತ್ತು. ಆದರೆ, ಕೋವಿಡ್ ಕಾರಣ ಈ ವರ್ಷ ಜಿಲ್ಲಾ ಮಟ್ಟದಲ್ಲಿ ಬಹುಮಾನಗಳನ್ನು ವಿತರಿಸಲಾಗುತ್ತದೆ. ಬೆಂಗಳೂರು ನಗರ ಜಿಲ್ಲೆಯ ವಿಜೇತರಿಗೆ ಮಾತ್ರ ಈ ಕಾರ್ಯಕ್ರಮದಲ್ಲಿ ಬಹುಮಾನಗಳನ್ನು ವಿತರಿಸಲಾಗುವುದು’ ಎಂದರು.

‘ಕೋವಿಡ್ ಮಾರ್ಗಸೂಚಿ ಅನ್ವಯ ಕಾರ್ಯಕ್ರಮ ನಡೆಯಲಿದೆ. ಖುದ್ದಾಗಿ ಭಾಗವಹಿಸಲು ಸಾಧ್ಯವಾಗದವರು https://youtu.be/MohoAjzCoek ಲಿಂಕ್‍ನಲ್ಲಿ ವೀಕ್ಷಿಸಬಹುದು’ ಎಂದು ತಿಳಿಸಿದರು.

‘ಹಿರಿಯ ನಾಗರಿಕರ ಸಹಾಯವಾಣಿ’

‘ಕಾರ್ಯಕ್ರಮದಲ್ಲಿ ‘ರಾಷ್ಟ್ರೀಯ ಹಿರಿಯ ನಾಗರಿಕರ ಸಹಾಯವಾಣಿ’ಯನ್ನು (ಟೋಲ್ ಫ್ರೀ ಸಂಖ್ಯೆ– 14567) ಲೋಕಾರ್ಪಣೆ ಮಾಡಲಾಗುವುದು. ಹಿರಿಯ ನಾಗರಿಕರಿಗೆ ‘ಮನೆ ಆರೈಕೆ’ ಸೇವೆ (ಹೋಮ್‍ಕೇರ್ ಸರ್ವೀಸ್), ಆಸ್ಪತ್ರೆ ಮತ್ತು ಹಿರಿಯರ ಆರೈಕೆಯ ಸೌಲಭ್ಯ, ವೃದ್ಧಾಶ್ರಮ ಮತ್ತು ಕೋವಿಡ್ ಕುರಿತ ಮಾಹಿತಿ ಸೇರಿದಂತೆ ವಿವಿಧ ಮಾಹಿತಿ ಈ ಸಹಾಯವಾಣಿ ಮೂಲಕ ಲಭ್ಯವಾಗಲಿದೆ’ ಎಂದು ಹಾಲಪ್ಪ ಆಚಾರ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT