ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣಾ ವ್ಯವಸ್ಥೆ ಸುಧಾರಣೆಗೆ ಸ್ಪೀಕರ್ ಕಾಗೇರಿ ಕೊಟ್ಟರು 22 ಸಲಹೆಗಳು

‘ಕ್ರಿಮಿನಲ್‌ ಆರೋಪ ಸಾಬೀತಾದರೆ ಅನರ್ಹತೆಗೆ ಇರಲಿ ಅವಕಾಶ’
Last Updated 28 ಮಾರ್ಚ್ 2022, 16:02 IST
ಅಕ್ಷರ ಗಾತ್ರ

ಬೆಂಗಳೂರು: ‘ಚುನಾವಣಾ ವ್ಯವಸ್ಥೆಯಲ್ಲಿ ಸುಧಾರಣೆಗಳ ಅಗತ್ಯತೆ’ ಕುರಿತು ವಿಧಾನಸಭೆಯಲ್ಲಿ ಎರಡು ದಿನಗಳ ವಿಶೇಷ ಚರ್ಚೆಗೆ ಚಾಲನೆ ನೀಡಿರುವ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, 22 ಅಂಶಗಳನ್ನು ಒಳಗೊಂಡ ಸಲಹೆಗಳನ್ನು ಮುಂದಿಟ್ಟಿದ್ದಾರೆ.

ಎರಡು ದಿನಗಳ ಚರ್ಚೆಗೆ ಪ್ರಾಸ್ತಾವಿಕ ನುಡಿಯ ಮೂಲಕ ಕಾಗೇರಿ ತಮ್ಮ ಅಭಿಪ್ರಾಯ ಮಂಡಿಸಿದರು. ‘ವಿವಿಧ ಕಾರಣಗಳಿಂದ ಚುನಾವಣೆಯ ನೈತಿಕ ಮಟ್ಟ ಕುಸಿದಿರುವುದನ್ನು ರಾಜಕಾರಣಿಗಳು, ನ್ಯಾಯಾಧೀಶರು, ಚಿಂತಕರು, ಪತ್ರಕರ್ತರು ಮತ್ತು ಶ್ರೀಸಾಮಾನ್ಯರು ಒಪ್ಪಿಕೊಂಡಿದ್ದಾರೆ. ಚುನಾವಣೆಗಳನ್ನು ಪರಿಶುದ್ಧ, ನ್ಯಾಯಸಮ್ಮತ, ಸರ್ವ ಸಮ್ಮತವಾಗಿ ನಡೆಸಲು ಮತ್ತು ಭ್ರಷ್ಟಾಚಾರ ಮುಕ್ತಗೊಳಿಸಲು ಕಾನೂನು ತಿದ್ದುಪಡಿ ಮತ್ತು ಸಾಂಸ್ಥಿಕ ಸುಧಾರಣೆ ಅಗತ್ಯ’ ಎಂದು ಪ್ರತಿಪಾದಿಸಿದರು.

ಪ್ರಮುಖ ಸಲಹೆಗಳು

* ಒಂದು ರಾಷ್ಟ್ರ ಒಂದು ಚುನಾವಣೆ ಮೂಲಕ ಚುನಾವಣಾ ವೆಚ್ಚ ಕಡಿತಗೊಳಿಸಬೇಕು.

* ಪ್ರತಿ ಮತದಾರನೂ ಚುನಾವಣೆಯಲ್ಲಿ ಕಡ್ಡಾಯ ಮತ ಚಲಾಯಿಸಬೇಕು. ಮತದಾನದಲ್ಲಿ ಭಾಗಿಯಾಗದ ಮತದಾರನಿಗೆ ಸೌಲಭ್ಯಗಳನ್ನು ಕಡಿತಗೊಳಿಸಬೇಕು.

* ಚುನಾವಣೆಗಳಲ್ಲಿ ದುಂದು ವೆಚ್ಚಕ್ಕೆ ಕಡಿವಾಣ ಹಾಕಬೇಕು. ಪ್ರಚಾರ ಪ್ರಕ್ರಿಯೆಯನ್ನು ರಾಷ್ಟ್ರೀಕರಣಗೊಳಿಸಿ, ಅದರ ವೆಚ್ಚ ಇಳಿಸಿ, ಆ ವೆಚ್ಚವನ್ನು ಸರ್ಕಾರ ಅಥವಾ ಚುನಾವಣಾ ಆಯೋಗವೇ ಭರಿಸಬೇಕು.

* ಶುದ್ಧ ಚಾರಿತ್ರ್ಯ ಇರುವ ಮತ್ತು ಕ್ರಿಮಿನಲ್‌ ಹಿನ್ನೆಲೆ ಇಲ್ಲದ ಸಾಮಾಜಿಕ ಕಾಳಜಿ ಹೊಂದಿರುವ ಅಭ್ಯರ್ಥಿಗಳನ್ನು ಆಯ್ಕೆ ಮಾಡುವಲ್ಲಿ ರಾಜಕೀಯ ಪಕ್ಷಗಳು ಕಟ್ಟುನಿಟ್ಟಾದ ಸ್ವಯಂ ಶಿಸ್ತಿನ ಮಾನದಂಡಗಳನ್ನು ಅಳವಡಿಸಿಕೊಳ್ಳಬೇಕು.

* ಎಲ್ಲ ಪಕ್ಷಗಳ ಅಭ್ಯರ್ಥಿಗಳಿಗೆ ಪ್ರಚಾರ ಮಾಡಲು ಸಾರ್ವಜನಿಕ ಸಭೆಗಳನ್ನು ವಿವಿಧ ಸ್ಥಳಗಳಲ್ಲಿ ಏರ್ಪಡಿಸಬೇಕು. ಮಾಧ್ಯಮಗಳಲ್ಲಿ ಸಮಾನ ಅವಕಾಶ ನೀಡಬೇಕು. ವಿವಿಧ ಮಾಧ್ಯಮಗಳಲ್ಲಿ ಪ್ರತಿ ಅಭ್ಯರ್ಥಿಗೂ ಪ್ರಚಾರಕ್ಕಾಗಿ ಸಮಾನ ಸ್ಥಳ ಮತ್ತು ಕಾಲಾವಕಾಶಗಳನ್ನು ಮಾಡಿಕೊಡಬೇಕು.

*ಕ್ರಿಮಿನಲ್‌ ಆಪಾದನೆ ಹೊತ್ತು ಚುನಾವಣೆಗಳಲ್ಲಿ ಗೆದ್ದ ಶಾಸಕರ ಪ್ರಕರಣಗಳ ವಿಚಾರಣೆಗೆ ವಿಶೇಷ ಚುನಾವಣಾ ನ್ಯಾಯಾಲಯ ರಚನೆ ಮಾಡಬೇಕು. ಈ ನ್ಯಾಯಾಲಯ ಆರು ತಿಂಗಳಲ್ಲಿ ಪ್ರಕರಣ ಇತ್ಯರ್ಥಗೊಳಿಸಬೇಕು. ಆರೋಪ ಸಾಬೀತಾದರೆ ಶಿಕ್ಷೆಗೊಳಗಾದವರನ್ನು ಅನರ್ಹಗೊಳಿಸಿ ಅವರ ಸ್ಥಾನಕ್ಕೆ ಚುನಾವಣೆಯಲ್ಲಿ ಎರಡನೇ ಸ್ಥಾನದಲ್ಲಿದ್ದ ಅಭ್ಯರ್ಥಿಯನ್ನು ಅರ್ಹನೆಂದು ಘೋಷಿಸಬೇಕು.

* ಒಂದು ಮತ ಕ್ಷೇತ್ರದಲ್ಲಿ ಕನಿಷ್ಠ ಸಂಖ್ಯೆಯಲ್ಲಿ ಅಭ್ಯರ್ಥಿಗಳನ್ನು ಸ್ಪರ್ಧೆಗೆ ಇಳಿಸಲು ಶಾಸನ ರೂಪಿಸಬೇಕು.

*ಆಧಾರ್‌ ಸೇವಾ ಕೇಂದ್ರದ ಮಾದರಿಯಲ್ಲಿ ಮತದಾರರ ಗುರುತಿನ ಚೀಟಿ ವರ್ಷಪೂರ್ತಿ ನಿರಂತರವಾಗಿ ನೋಂದಣಿ ಮತ್ತು ವಿತರಣೆಗೆ ಪ್ರತ್ಯೇಕ ವೋಟರ್‌ ಐಡಿ ಸೇವಾ ಕೇಂದ್ರ ಸ್ಥಾಪನೆ ಮಾಡಬೇಕು.

*ನಿರಂತರವಾಗಿ ಎರಡು ಅಥವಾ ಮೂರು ಸಾರ್ವತ್ರಿಕ ಚುನಾವಣೆಗಳಲ್ಲಿ ಭಾಗವಹಿಸದೇ ಇರುವ ಮತ್ತು ನಿಗದಿತ ಸ್ಥಾನ ಗಳಿಸದ ರಾಜಕೀಯ ಪಕ್ಷಗಳನ್ನು ಅಮಾನ್ಯಗೊಳಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT