ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣೆ ವ್ಯವಸ್ಥೆ ಸುಧಾರಣೆ: ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ

Last Updated 4 ಮಾರ್ಚ್ 2021, 19:31 IST
ಅಕ್ಷರ ಗಾತ್ರ

ಬೆಂಗಳೂರು: ಬಹು ಪಕ್ಷ ವ್ಯವಸ್ಥೆ, ಮೈತ್ರಿ ಸರ್ಕಾರಗಳು, ಮಧ್ಯಂತರ ಚುನಾವಣೆಗಳ ಈ ಕಾಲದಲ್ಲಿ ಚುನಾವಣೆಯಲ್ಲಿ ಏಕರೂಪತೆ ತರುವುದು ದೊಡ್ಡ ಸವಾಲು. ಈ ಸವಾಲು ಹಾಗೂ ಸಮಸ್ಯೆಗಳ ನಡುವೆ ಚುನಾವಣೆ ವ್ಯವಸ್ಥೆ ಸುಧಾರಣೆಗೆ ವ್ಯಾಪಕ ಚರ್ಚೆಯಾಗಬೇಕು ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಪ್ರತಿಪಾದಿಸಿದರು.

ವಿಧಾನಸಭೆಯಲ್ಲಿ ಗುರುವಾರ ನಡೆದ ‘ಒಂದು ರಾಷ್ಟ್ರ– ಒಂದು ಚುನಾವಣೆ’ ವಿಶೇಷ ಚರ್ಚೆ ಆರಂಭಿಸುವ ಮುನ್ನ ಅವರು ಪ್ರಾಸ್ತಾವಿಕ ಮಾತುಗಳನ್ನು ಆಡಿದರು.

ಲೋಕಸಭೆ ಹಾಗೂ ವಿಧಾನಸಭೆಗೆ ಏಕಕಾಲದಲ್ಲಿ ಚುನಾವಣೆ ನಡೆಸಿ ಒಂದು ರಾಷ್ಟ್ರ ಒಂದೇ ಚುನಾವಣೆ ಮಾಡಬಹುದು. ಈ ಪ್ರಕ್ರಿಯೆಯಲ್ಲಿ ಸಂವಿಧಾನಬದ್ಧವಾದ ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ಹೊರತುಪಡಿಸಲೇಬೇಕು ಎಂದರು.

ಏಕಕಾಲಕ್ಕೆ ಚುನಾವಣೆ ನಡೆಸಿದರೆ ಮಾನವ ಶ್ರಮ, ಸಮಯ ಹಾಗೂ ಭಾರಿ ಮೊತ್ತದ ಹಣ ಉಳಿತಾಯವಾಗುತ್ತದೆ. ಮೂಲಸೌಕರ್ಯ, ಸಿಬ್ಬಂದಿ, ರಕ್ಷಣಾ ವೆಚ್ಚ, ಮತ ಎಣಿಕೆ– ಎಲ್ಲದರಲ್ಲೂ ದೇಶದ ಆರ್ಥಿಕತೆಯ ಹೊರೆ ಕಡಿತಗೊಳ್ಳುತ್ತದೆ. ಈಚಿನ ವರ್ಷಗಳಲ್ಲಿ ಶೇಕಡವಾರು ಮತದಾನ ತೀವ್ರವಾಗಿ ಕುಸಿತ ಕಂಡುಬಂದಿರುವ ಕಾರಣ ಕಡ್ಡಾಯ ಮತದಾನ ಜಾರಿ ಮಾಡಬೇಕು ಎಂದು ಸಲಹೆ ನೀಡಿದರು.

ಏಕಕಾಲಕ್ಕೆ ಚುನಾವಣಾ ನೀತಿ ಸಾಕಾರಗೊಳ್ಳಲು ಸಂವಿಧಾನದ ಐದು ವಿಧಿಗಳಿಗೆ ತಿದ್ದುಪಡಿ ಮಾಡುವುದು ಅಗತ್ಯ. ಸಂಸತ್ತಿನ ಸದನಗಳ ಅವಧಿ ವಿಸ್ತರಿಸುವ ಇಲ್ಲವೇ ಕಡಿತಗೊಳಿಸುವ ವಿಧಿ 83 (2), ರಾಷ್ಟ್ರಪತಿಯವರಿಂದ ಲೋಕಸಭೆ ವಿಸರ್ಜನೆ ಮಾಡುವ ವಿಧಿ 85 (2) (ಬಿ), ರಾಜ್ಯ ವಿಧಾನಸಭೆಗಳ ಅವಧಿ ವಿಸ್ತರಿಸುವ ಅಥವಾ ಕಡಿತಗೊಳಿಸುವ ವಿಧಿ 172 (1), ರಾಜ್ಯಸಭೆ ವಿಸರ್ಜನೆಯ ವಿಧಿ 174 (2) (ಬಿ) ಹಾಗೂ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ವಿಧಿಸುವ ವಿಧಿ 356ಕ್ಕೆ ತಿದ್ದುಪಡಿ ತರಬೇಕು ಎಂದು ಅವರು ಅಭಿಪ್ರಾಯ‍ಪಟ್ಟರು.

1951ರ ಜನಪ್ರತಿನಿಧಿ ಕಾಯ್ದೆಗೆ ಆಮೂಲಾಗ್ರ ಬದಲಾವಣೆ ತರಬೇಕು. ಚುನಾವಣೆಯ ವಿಧಿ ವಿಧಾನಗಳು, ಅಪರಾಧ ಹಿನ್ನೆಲೆಯುಳ್ಳವರು ಸ್ಪರ್ಧಿಸುವುದನ್ನು ತಡೆಯುವುದು ಸೇರಿದಂತೆ ಹಲವು ಅಂಶಗಳಿಗೆ ತಿದ್ದುಪಡಿ ತರಬೇಕು ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT