ಮಂಗಳವಾರ, ಆಗಸ್ಟ್ 9, 2022
23 °C
ತುರ್ತು ಪರಿಸ್ಥಿತಿ 

ಕರಾಳ ಇತಿಹಾಸಕ್ಕೆ ಮುನ್ನುಡಿ ಬರೆದ ಕಾಂಗ್ರೆಸ್‌ಗೆ ಧಿಕ್ಕಾರವಿರಲಿ: ಬಿಜೆಪಿ ಕಿಡಿ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಬೆಂಗಳೂರು: ತುರ್ತು ಪರಿಸ್ಥಿತಿ ಘೋಷಿಸುವ ಮೂಲಕ ಕರಾಳ ಇತಿಹಾಸಕ್ಕೆ ಮುನ್ನುಡಿ ಬರೆದ ಕಾಂಗ್ರೆಸ್‌ಗೆ ಧಿಕ್ಕಾರವಿರಲಿ ಎಂದು ಬಿಜೆಪಿ ಕಿಡಿಕಾರಿದೆ. 

1975ರಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ತುರ್ತು ಪರಿಸ್ಥಿತಿ ಘೋಷಿಸಿದ್ದರು. ಈ ಕ್ರಮವನ್ನು ಖಂಡಿಸಿ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ‘ದೇಶದಲ್ಲಿ ಈಗ ಅಘೋಷಿತ ತುರ್ತು ಪರಿಸ್ಥಿತಿ ಇದೆ ಎಂದು ಹುಯಿಲೆಬ್ಬಿಸುವ ಕಾಂಗ್ರೆಸ್ಸಿಗರಿಗೆ ಘೋಷಿತ ತುರ್ತು ಪರಿಸ್ಥಿತಿಯ ಕರಾಳ ಅಧ್ಯಾಯ ಮರೆತು ಹೋಗಿದೆ. ಬ್ರಿಟಿಷ್ ಕಾಲದಲ್ಲಿ ನಡೆದ ದೌರ್ಜನ್ಯ ಮೀರಿಸುವ ರೀತಿ‌ ಇಂದಿರಾ ಗಾಂಧಿ ದೇಶವಾಸಿಗಳನ್ನು ಹಿಂಸಿಸಿದ್ದನ್ನು ಮರೆಯಲು ಹೇಗೆ ಸಾಧ್ಯ’ ಎಂದು ಪ್ರಶ್ನಿಸಿದೆ.

‘ಸಂವಿಧಾನದ ಬಗ್ಗೆ ಪುಂಖಾನುಪುಂಖವಾಗಿ ಮಾತನಾಡುವ ಸಿದ್ದರಾಮಯ್ಯ, ಡಿಕೆಶಿ, ಮಹಾದೇವಪ್ಪ ಮೊದಲಾದವರಿಗೆ ಸಂವಿಧಾನದ ಆಶಯಗಳಿಗೆ ಧಕ್ಕೆ ತಂದ ಮಹಾನ್ ಕುಟುಂಬ ಯಾವುದು ಎಂಬುದೇ ಗೊತ್ತಿಲ್ಲ. ಸತ್ಯವನ್ನು ಗ್ರಹಿಸದ ನಿಮ್ಮ ಏಕಮುಖ ರಸ್ತೆಯ ಪ್ರಯಾಣದ ಬಗ್ಗೆ ವಿಷಾದ ಮಾತ್ರ ವ್ಯಕ್ತಪಡಿಸಲು ಸಾಧ್ಯ!’ ಎಂದು ಟೀಕಿಸಿದೆ. 

ಓದಿ... ದ್ರೌಪದಿ ರಾಷ್ಟ್ರಪತಿಯಾದರೆ, ಪಾಂಡವರು ಯಾರು? -ಆರ್‌ಜಿವಿ ವಿರುದ್ಧ ಬಿಜೆಪಿ ದೂರು

‘ಸ್ವಾತಂತ್ರ್ಯಾನಂತರ ದೇಶದ ಪ್ರಜಾತಂತ್ರದ ಇತಿಹಾಸದಲ್ಲಿ ತುರ್ತು ಪರಿಸ್ಥಿತಿ ಕರಾಳ ಅಧ್ಯಾಯ. ತಮ್ಮ ಸ್ವಾರ್ಥಕ್ಕಾಗಿ ಈಡಿ ದೇಶವನ್ನೇ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಕತ್ತಲೆಯಲಿಟ್ಟರು. ಕಾಂಗ್ರೆಸ್‌ ನಾಯಕರು ನಕಲಿ ಗಾಂಧಿ ಕುಟುಂಬದ ಪಾದಪೂಜೆ ಮಾಡುವ ಮುನ್ನ ಇತಿಹಾಸದ ಪುಟಗಳನ್ನು ತಿರುವಿಹಾಕಲಿ’ ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ. 

‘ಸಂವಿಧಾನದಲ್ಲಿ ಉಲ್ಲೇಖವಾದ ವಿಚಾರಗಳನ್ನೇ ಗುರಾಣಿಯಾಗಿ ಬಳಸಿಕೊಂಡ ಇಂದಿರಾ ಗಾಂಧಿ ಅವರು ಸಂವಿಧಾನವನ್ನು ಕಾಲಡಿಗೆ ಹಾಕಿದ್ದರು. ಎಷ್ಟಾದರೂ ಸಂವಿಧಾನ ಶಿಲ್ಪಿಗೆ ಅವಮಾನ ಮಾಡಿದ ಅನುಭವ ಇತ್ತಲ್ಲವೇ’ ಎಂದು ಬಿಜೆಪಿ ಕಿಡಿಕಾರಿದೆ. 

‘ಮಜಾವಾದಿ ಸಿದ್ದರಾಮಯ್ಯ ಅವರೇ, ನೀವು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದೀರಾ?, ಎರಡನೇ ಸ್ವಾತಂತ್ರ್ಯ ಸಂಗ್ರಾಮ ಎಂದೇ ಪರಿಗಣಿಸಲ್ಪಟ್ಟ ತುರ್ತು ಪರಿಸ್ಥಿತಿ ವಿರೋಧಿ ಹೋರಾಟದಲ್ಲಾದರೂ ಭಾಗಿಯಾಗಿದ್ದಿರಾ? ಇಲ್ಲ, ಇಲ್ಲ, ಇಲ್ಲ. ನಿಮ್ಮದೇನಿದ್ದರೂ ಅಧಿಕಾರದ ಪಾಯಸ ಉಣ್ಣಲು ಹೋರಾಟವಷ್ಟೇ’ ಎಂದು ಬಿಜೆಪಿ ಆರೋಪಿಸಿದೆ.

21 ತಿಂಗಳ ತುರ್ತು ಪರಿಸ್ಥಿತಿ, ಲಕ್ಷಕ್ಕೂ ಅಧಿಕ ಜನರ ಬಂಧನ, ಜೈಲುವಾಸ ಹಾಗೂ 22ಕ್ಕೂ ಅಧಿಕ ಸಂಗ್ರಾಮಿಗಳ ಕಸ್ಟಡಿ ಸಾವು – ಇದು ನಕಲಿ ಗಾಂಧಿ ಕುಟುಂಬದ ವಿರುದ್ಧದ ಧ್ವನಿ ಹತ್ತಿಕ್ಕಲು ಮಾಡಿದ ಪ್ರಯತ್ನಗಳು. ತುರ್ತು ಪರಿಸ್ಥಿತಿಯಂಥ ಕರಾಳ ಇತಿಹಾಸಕ್ಕೆ ಮುನ್ನುಡಿ ಬರೆದ ಕಾಂಗ್ರೆಸ್‌ ಪಕ್ಷಕ್ಕೆ ಧಿಕ್ಕಾರವಿರಲಿ ಎಂದು ಬಿಜೆಪಿ ಗುಡುಗಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು