ಶನಿವಾರ, ಆಗಸ್ಟ್ 13, 2022
24 °C
ರಾಜ್ಯದ ನಗರ, ಗ್ರಾಮೀಣ ಪ್ರದೇಶದಲ್ಲಿ ಇಂಗ್ಲಿಷ್ ಮಾಧ್ಯಮದ ಶಿಕ್ಷಣಕ್ಕೆ ಒತ್ತು

ಕನ್ನಡ ಮನೆಭಾಷೆ, ಇಂಗ್ಲಿಷ್‌ ಒಲವು: ಎನ್‌ಎಸ್‌ಒ ವರದಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ರಾಜ್ಯದಲ್ಲಿ ಕನ್ನಡ ಮಾತೃಭಾಷೆಯ ಕುಟುಂಬಗಳ ವಿದ್ಯಾರ್ಥಿಗಳಲ್ಲಿ ಕನ್ನಡವನ್ನು ಶಾಲಾ ಶಿಕ್ಷಣದ ಮಾಧ್ಯಮವಾಗಿ ಬಳಸುವವರ ಪ್ರಮಾಣ ಉತ್ತಮವಾಗಿಯೇ ಇದೆ. ಇಂಗ್ಲಿಷ್ ಮಾಧ್ಯಮದಲ್ಲಿ ಶಿಕ್ಷಣ ಪಡೆಯುವವರ ಪ್ರಮಾಣ ಎರಡನೇ ಸ್ಥಾನದಲ್ಲಿದೆ. ನಗರ ಪ್ರದೇಶಗಳಿಗೆ ಹೋಲಿಸಿದರೆ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪಡೆಯುವವರ ಪ್ರಮಾಣ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚು. ಆದರೆ, ಈಚಿನ ವರ್ಷಗಳಲ್ಲಿ ಗ್ರಾಮೀಣ ಪ್ರದೇಶದಲ್ಲೂ ಇಂಗ್ಲಿಷ್‌ ಮಾಧ್ಯಮ ಶಿಕ್ಷಣದತ್ತ ಒಲವು ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ ಎಂದು ‘ಶಿಕ್ಷಣಕ್ಕಾಗಿ ಭಾರತೀಯ ಕುಟುಂಬಗಳ ವೆಚ್ಚ 2017–2018’ ವರದಿಯು ಹೇಳುತ್ತದೆ. ರಾಷ್ಟ್ರೀಯ ಸಾಂಖ್ಯಿಕ ಸಂಘಟನೆ (ಎನ್‌ಎಸ್‌ಒ) ಈ ವರದಿಯನ್ನು ಸಿದ್ಧಪಡಿಸಿದೆ.

ರಾಜ್ಯದ ಗ್ರಾಮೀಣ ಪ್ರದೇಶದ ಕನ್ನಡ ಕುಟುಂಬಗಳ ಶೇ 77.6ರಷ್ಟು ವಿದ್ಯಾರ್ಥಿಗಳು ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪಡೆಯುತ್ತಿ
ದ್ದಾರೆ. ನಗರ ಪ್ರದೇಶದಲ್ಲಿ ಈ ಪ್ರಮಾಣ ಶೇ 37.3ರಷ್ಟು ಇದೆ. ಗ್ರಾಮೀಣ ಪ್ರದೇಶದಲ್ಲಿ ಇಂಗ್ಲಿಷ್ ಮಾಧ್ಯಮ ಶಿಕ್ಷಣ ಲಭ್ಯತೆ ಕಡಿಮೆ ಇರುವ ಕಾರಣ ಮತ್ತು ಇಂಗ್ಲಿಷ್ ಮಾಧ್ಯಮ ದಲ್ಲಿ ಶಿಕ್ಷಣ ದುಬಾರಿಯಾಗಿರುವ ಕಾರಣ ಜನರು ಕನ್ನಡ ಮಾಧ್ಯಮ ಶಿಕ್ಷಣವನ್ನು ಪಡೆಯುತ್ತಿದ್ದಾರೆ ಎಂದು ವರದಿಯಲ್ಲಿ ವಿಶ್ಲೇಷಿಸಲಾಗಿದೆ.

ಗ್ರಾಮೀಣ ಪ್ರದೇಶ: ಗ್ರಾಮೀಣ ಪ್ರದೇಶದ ಕನ್ನಡ ಮನೆಭಾಷೆಯ ಕುಟುಂಬಗಳು ಇಂಗ್ಲಿಷ್ ಮಾಧ್ಯಮದ ಶಿಕ್ಷಣದತ್ತ ವಾಲುತ್ತಿ
ರುವುದನ್ನು ವರದಿಯಲ್ಲಿ ಗುರುತಿಸಲಾಗಿದೆ. ಪೂರ್ವ ಪ್ರಾಥಮಿಕ ಹಂತದಲ್ಲಿ ಇಂಗ್ಲಿಷ್ ಮಾಧ್ಯಮದ ಶಿಕ್ಷಣ ಪಡೆಯುತ್ತಿರುವವರ ಪ್ರಮಾಣ ಹೆಚ್ಚು. ಆದರೆ, ಪ್ರಾಥಮಿಕ ಶಿಕ್ಷಣ, ಮಾಧ್ಯಮಿಕ ಶಿಕ್ಷಣ ಮತ್ತು ಪ್ರೌಢ ಶಿಕ್ಷಣಕ್ಕೆ ಹೋದಂತೆ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪಡೆಯುತ್ತಿರುವವರ ಪ್ರಮಾಣ ಏರುತ್ತಾ ಹೋಗಿದೆ. ಇಂಗ್ಲಿಷ್ ಮಾಧ್ಯಮದ ಶಿಕ್ಷಣ ಪಡೆಯುವವರ ಪ್ರಮಾಣ ಇಳಿಕೆಯಾಗಿದೆ. ರಾಜ್ಯದ ಗ್ರಾಮೀಣ ಪ್ರದೇಶದಲ್ಲಿ ಇಂಗ್ಲಿಷ್ ಮಾಧ್ಯಮದ ಬಗ್ಗೆ ಅತಿಯಾದ ಒಲವು ಇತ್ತೀಚಿನ ವರ್ಷಗಳಲ್ಲಿ ಆರಂಭವಾಗಿದೆ ಎಂಬುದನ್ನು ಈ ದತ್ತಾಂಶವು ಹೇಳುತ್ತದೆ. ಪೂರ್ವ ಪ್ರಾಥಮಿಕ ಹಂತದಲ್ಲಿ ಕನ್ನಡ ಮನೆಭಾಷೆ ಕುಟುಂಬದ ಶೇ 12.8ರಷ್ಟು ವಿದ್ಯಾರ್ಥಿಗಳು ಹಿಂದಿ ಮಾಧ್ಯಮದ ಶಿಕ್ಷಣ ಪಡೆಯುತ್ತಿದ್ದಾರೆ ಎಂದು ವರದಿಯಲ್ಲಿ ವಿಶ್ಲೇಷಿಸಲಾಗಿದೆ.

ನಗರ ಪ್ರದೇಶ: ನಗರದ ಪ್ರದೇಶದ ಕನ್ನಡ ಮನೆಭಾಷೆಯ ಕುಟುಂಬಗಳಲ್ಲಿ ಇಂಗ್ಲಿಷ್ ಮಾಧ್ಯಮ ಶಿಕ್ಷಣಕ್ಕೆ ಪ್ರಾಶಸ್ತ್ಯವಿದೆ. ಪೂರ್ವ ಪ್ರಾಥಮಿಕ ಹಂತದಲ್ಲಿ ಇಂಗ್ಲಿಷ್ ಮಾಧ್ಯಮದ ಶಿಕ್ಷಣ ಪಡೆಯುವವರ ಪ್ರಮಾಣ ಹೆಚ್ಚು. ಆದರೆ, ಪ್ರಾಥಮಿಕ ಶಿಕ್ಷಣ, ಮಾಧ್ಯಮಿಕ ಶಿಕ್ಷಣ ಮತ್ತು ಪ್ರೌಢ ಶಿಕ್ಷಣಕ್ಕೆ ಹೋದಂತೆ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪಡೆಯುತ್ತಿರುವವರ ಪ್ರಮಾಣ ಏರುತ್ತಾ ಹೋಗಿದೆ. ಇಂಗ್ಲಿಷ್ ಮಾಧ್ಯಮದ ಶಿಕ್ಷಣ ಪಡೆಯುವವರ ಪ್ರಮಾಣ ಕಡಿಮೆಯಾಗುತ್ತದೆ. ಆದರೂ ಒಟ್ಟಾರೆಯಾಗಿ ಕನ್ನಡ ಮಾಧ್ಯಮ ಶಿಕ್ಷಣ ಪಡೆಯುವವರ ಸಂಖ್ಯೆ ಕಡಿಮೆ ಇದೆ. ಈಚಿನ ವರ್ಷಗಳಲ್ಲಿ ಇಂಗ್ಲಿಷ್ ಮಾಧ್ಯಮದ ಶಿಕ್ಷಣದತ್ತ ಒಲವು ಹೆಚ್ಚುತ್ತಿದೆ ಎಂದು ವರದಿಯಲ್ಲಿ ವಿಶ್ಲೇಷಿಸಲಾಗಿದೆ.

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು