ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಾಧ್ಯಾಪಕರ ನೇಮಕ ಪರೀಕ್ಷೆ ದೋಷಗಳದ್ದೇ ‘ವೈಭವ’

ಸಹಾಯಕ ಪ್ರಾಧ್ಯಾಪಕ ಹುದ್ದೆಗಳ ನೇಮಕಾತಿಗೆ ನಡೆದ ಪರೀಕ್ಷೆ: ಅಭ್ಯರ್ಥಿಗಳ ದೂರು
Last Updated 19 ಮಾರ್ಚ್ 2022, 20:10 IST
ಅಕ್ಷರ ಗಾತ್ರ

ಬೆಂಗಳೂರು: ಸರ್ಕಾರಿ ಪ್ರಥಮದರ್ಜೆ ಕಾಲೇಜುಗಳ ಸಹಾಯಕ ಪ್ರಾಧ್ಯಾಪಕ ಹುದ್ದೆಗಳ ನೇಮಕಾತಿಯ ಕನ್ನಡ ವಿಷಯದ ಪ್ರಶ್ನೆಪತ್ರಿಕೆಯಲ್ಲಿ ಕವಿ ಕೆ.ಎಸ್‌.ನರಸಿಂಹಸ್ವಾಮಿ ಅವರ ಹೆಸರನ್ನು ‘ನರಸಿಂಹವರ್ಮ’, ವಿಮರ್ಶಕ ಓ.ಎಲ್.ನಾಗಭೂಷಣಸ್ವಾಮಿ ಅವರ ‘ವಿಮರ್ಶೆಯ ಪರಿಭಾಷೆ’ ಪುಸ್ತಕವನ್ನು ‘ನರಿಭಾಷೆ’ ಎಂದು ಉಲ್ಲೇಖಿಸಿದ ಪ್ರಮಾದ ನಡೆದಿದೆ.

ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ)ಮಾರ್ಚ್‌ 12ರಿಂದ ಈ ಪರೀಕ್ಷೆ ನಡೆಸಿತ್ತು. ಕನ್ನಡವನ್ನೇ ಅಪಹಾಸ್ಯಕ್ಕೆ ಗುರಿ ಮಾಡುವಂತಹ ತಪ್ಪುಗಳು, ಲೇಖಕರ ಹೆಸರಿನ ತಿರುಚುವಿಕೆ ಹಾಗೂ ಕೆಲವು ಕವಿತೆಗಳ ಶೀರ್ಷಿಕೆಗಳನ್ನೇ ಬದಲಿಸಲಾಗಿದೆ. ಅಕ್ಷರದೋಷಗಳಂತೂಪ್ರಾಧಿಕಾರವನ್ನು ನಗೆಪಾಟಲಿಗೆ ದೂಡುವಂತಹ ಸ್ಥಿತಿಗೆ ತಂದೊಡ್ಡಿವೆ ಎಂದು ಅಭ್ಯರ್ಥಿಗಳು ಹಂಗಿಸಿದ್ದಾರೆ.

ಉದಾಹರಣೆಗೆ ‘ಎ4’ ಸರಣಿಯ ಪ್ರಶ್ನೆಪತ್ರಿಕೆಯಲ್ಲಿ ಎಚ್‌.ಎಲ್‌.ನಾಗೇಗೌಡರ ‘ಪದವವೆ ನಮ್ಮ ಎದೆಯಲ್ಲಿ’ ಕೃತಿ ಹೆಸರನ್ನು ‘ಪದವಿವೆ ನನ್ನ ಎದೆಯಲ್ಲಿ’ ಎಂದು ಮಾಡಲಾಗಿದೆ.

‘ಪ್ರಶ್ನೆ ಸಂಖ್ಯೆ 18ರಲ್ಲಿ ನೀಡಿರುವ ಆಯ್ಕೆಗಳಲ್ಲಿ ‘ವಿಮರ್ಶೆಯ ನರಿಭಾಷೆ’ ಎಂದಾಗಿದೆ. ‘ನರಿಭಾಷೆಯ ಶೀರ್ಷಿಕೆಯುಳ್ಳ ಪುಸ್ತಕವನ್ನು ಪರಿಚಯಿಸಿದ್ದಕ್ಕೆ ಪ್ರಾಧಿಕಾರಕ್ಕೆ ಧನ್ಯವಾದಗಳು’ ಎಂದುವ್ಯಂಗ್ಯವಾಡಿರುವ ಶಿವಮೊಗ್ಗ ಜಿಲ್ಲೆಯ ಸಿದ್ದಿಪುರದ ಡಾ. ಎಂ.ರವಿ,‘ಪ್ರಾಧಿಕಾರವು ಈ ವಿಷಯವನ್ನು ಗಂಭೀರವಾಗಿ ಪರಿಗಣಿ ಸಬೇಕು’ ಎಂದು ಒತ್ತಾಯಿಸಿದ್ದಾರೆ.

ದೆಹಲಿಯ ಜೆಎನ್‌ಯು ಕನ್ನಡ ವಿಭಾಗದ ನಿವೃತ್ತ ಪ್ರಾಧ್ಯಾಪಕ ಪುರುಷೋತ್ತಮ ಬಿಳಿಮಲೆ ಅವರು ತಮ್ಮ ಫೇಸ್‌ಬುಕ್‌ ಪುಟದಲ್ಲಿ ಪ್ರಶ್ನೆಪತ್ರಿಕೆಯಲ್ಲಿನ ತಪ್ಪುಗಳನ್ನು ಪ್ರಶ್ನಿಸಿದ್ದಾರೆ.

‘ವಿಮರ್ಶೆಯ ನರಿಭಾಷೆ ಅಂತ ಇದೆ. ಹೀಗೊಂದು ಪುಸ್ತಕ ಬಂದಿದೆಯಾ? (ಓಎಲ್ಎನ್ ಅವರ ವಿಮರ್ಶೆಯ ಪರಿಭಾಷೆ ನನ್ನಲ್ಲಿದೆ). ಹಾಗೆಯೇ ಇನ್ನೊಂದು ಪ್ರಶ್ನೆಯಲ್ಲಿ ಕೆ.ಎಸ್.ನರಸಿಂಹವರ್ಮ ಅಂತಿದೆ.‌ ಆದರೆ, ಇದು ಕೆ.ಎಸ್. ನರಸಿಂಹ ಸ್ವಾಮಿ ಆಗಬೇಕು ತಾನೇ? ಪರೀಕ್ಷೆ ನಡೆಸುವವರೇ ಹೀಗಾದರೆಉಳಿದವರ ಪಾಡೇನು’ ಎಂದು ಬರೆದಿದ್ದಾರೆ.

ದೋಷಗಳ ಸರಮಾಲೆ
*ಪ್ರಶ್ನೆ ಸಂಖ್ಯೆ 19ರಲ್ಲಿ ಕೆ.ವಿ.ತಿರುಮಲೇಶ ಅವರ ವಿಮರ್ಶಾ ಕೃತಿ ‘ಸಮ್ಮುಖ’, ‘ಸರ್ಮುಖ’ ಎಂದಾಗಿದೆ.
* ‘ಚಾವುಂಡರಾಯ ಪುರಾಣ’ವನ್ನು ಪ್ರಶ್ನೆ ಸಂಖ್ಯೆ 53ರಲ್ಲಿ ‘ಚಾಮುಂಡರಾಯ ಪುರಾಣ’ ಎಂದು ಉಲ್ಲೇಖಿಸಲಾಗಿದೆ.
* ಪ್ರಶ್ನೆ ಸಂಖ್ಯೆ 63ರಲ್ಲಿ ಕವಿ ಕೆ.ಎಸ್‌. ನಿಸಾರ್‌ ಅಹಮ್ಮದ್‌ ಹೆಸರನ್ನು ಕೆ.‌ಸ್‌.ನಿಸಾರ್‌ ಅಹಮ್ಮದ್‌ ಎಂದು ಬರೆಯಲಾಗಿದೆ.
* ಪ್ರಶ್ನೆ ಸಂಖ್ಯೆ 121ರಲ್ಲಿ ಜಾನಪದ ಸಂಶೋಧಕ ಜೀ.ಶಂ. ಪರಮಶಿವಯ್ಯನವರ ಹೆಸರು‘ಜೀ.ಕಂ. ಪರಮಶಿವಯ್ಯ’ ಎಂದಾಗಿದೆ.
* ಪ್ರಶ್ನೆ ಸಂಖ್ಯೆ 74ರಲ್ಲಿ ರಾಘವೇಂದ್ರ ಖಾಸನೀಸ ಬದಲು ನಾಘವೇಂದ್ರ ಖಾಸನೀಸ್‌ ಎಂದಾಗಿದೆ.

***

ಕನ್ನಡ ಹೊರತುಪಡಿಸಿ ಯಾವುದೇ ವಿಷಯಗಳ ಬಗ್ಗೆ ದೂರುಗಳು ಬಂದಿಲ್ಲ. ವ್ಯವಸ್ಥಿತವಾಗಿ ಪರೀಕ್ಷೆ ನಡೆಸಲಾಗಿದೆ. ಕನ್ನಡ ಪ್ರಶ್ನೆಪತ್ರಿಕೆ ಬಗ್ಗೆ ಪರಿಶೀಲಿಸಲಾಗುವುದು. ಯಾವ ಸರಣಿಯ ಪ್ರಶ್ನೆಪತ್ರಿಕೆಯಲ್ಲಿ ಎಷ್ಟು ಪ್ರಮಾಣದಲ್ಲಿ ದೋಷಗಳಿವೆ ಎನ್ನುವುದನ್ನು ಪರಿಶೀಲಿಸಲಾಗುವುದು.
-ಎಸ್‌. ರಮ್ಯಾ,ಕೆಇಎ ಕಾರ್ಯನಿರ್ವಾಹಕ ನಿರ್ದೇಶಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT