ಗುರುವಾರ , ಮೇ 26, 2022
23 °C
ರಾಜೀನಾಮೆಯಿಂದ ಬಿಜೆಪಿಗೆ ಯಾವುದೇ ಹಿನ್ನಡೆಯಾಗಲ್ಲ–ಬಿಎಸ್‌ವೈ

ಈಶ್ವರಪ್ಪ ಆರೋಪ ಮುಕ್ತರಾಗುತ್ತಾರೆ: ಬಿ.ಎಸ್‌.ಯಡಿಯೂರಪ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ‘ಯಾವುದೇ ತಪ್ಪು ಮಾಡದ ಕೆ.ಎಸ್‌. ಈಶ್ವರಪ್ಪ ವಿನಾ ಕಾರಣ ಸಂತೋಷ್‌ ಪಾಟೀಲ ಆತ್ಮ ಹತ್ಯೆ ಪ್ರಕರಣದಲ್ಲಿ ಸಿಲುಕಿಕೊಂಡಿ ದ್ದಾರೆ. ಅನಿವಾರ್ಯವಾಗಿ, ಸಚಿವ ಸಂಪುಟಕ್ಕೆ ರಾಜೀನಾಮೆ ಸಲ್ಲಿ ಸಲು ಮುಂದಾಗಿದ್ದಾರೆ. ಅವರು ಆರೋಪ ದಿಂದ ಮುಕ್ತರಾಗುತ್ತಾರೆ’ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು.

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಈಶ್ವರಪ್ಪ ಯಾರದೋ ಒತ್ತಾಯಕ್ಕಾಗಿ ರಾಜೀ ನಾಮೆ ನೀಡುವ ಪರಿಸ್ಥಿತಿ ಬಂದಿದೆ. ಮುಂದಿನ ದಿನಗಳಲ್ಲಿ ಪ್ರಕರಣ ಎದುರಿಸುತ್ತಾರೆ. ನಿರಪರಾಧಿಯಾಗಿ ಬಂದಾಗ ಮತ್ತೆ ಸಂಪುಟದಲ್ಲಿ ಸೇರಿಸಿಕೊಳ್ಳಲು ಯಾವುದೇ ಅಡ್ಡಿ ಇಲ್ಲ. ರಾಜೀನಾಮೆಯಿಂದ ಬಿಜೆಪಿಗೆ ಯಾವುದೇ ಹಿನ್ನಡೆಯಾಗಲ್ಲ. ದೇವರು ಅವರಿಗೆ ಒಳ್ಳೆಯದು ಮಾಡಲಿ’ ಎಂದು ಆಶಿಸಿದರು.

ಗೃಹ ಸಚಿವ ಆರಗ ಜ್ಞಾನೇಂದ್ರ ಮಾತನಾಡಿ, ‘ಈಶ್ವರಪ್ಪ ಅಪರಾಧ ಮಾಡದೇ ಇದ್ದರೂ ಅವರ ಮೇಲೆ ಆರೋಪ ಬಂದಿದೆ. ಸಚಿವ ಸ್ಥಾನದಲ್ಲಿ ದ್ದರೆ ತನಿಖೆಗೆ ತೊಂದರೆಯಾಗುತ್ತದೆ ಎಂಬ ಕಾರಣಕ್ಕೆ ರಾಜೀನಾಮೆ ನೀಡು ತ್ತಿದ್ದಾರೆ. ಈಗಾಗಲೇ ಸಂತೋಷ್ ಪ್ರಕರಣದಲ್ಲಿ ಪೊಲೀಸರು
ಪಾರದರ್ಶಕ ವಾಗಿ ತನಿಖೆ ನಡೆಸಿದ್ದಾರೆ. ಸಂತೋಷ್ ಪಾಟೀಲ ಅವರದ್ದು ಯಾವುದೇ ಡೆತ್‌ನೋಟ್ ಇಲ್ಲ. ಅವರು ವಾಟ್ಸ್‌ಆ್ಯಪ್‌ ಸಂದೇಶ ಕಳಿಸಿದ್ದಾರಷ್ಟೇ. ಅದರ ಬಗ್ಗೆಯೂ ತನಿಖೆ ನಡೆಯುತ್ತಿದೆ. ಅವರೇ ಟೈಪ್ ಮಾಡಿದ್ದಾರೋ, ಬೇರೆಯವರು ಟೈಪ್ ಮಾಡಿದ್ದಾರೋ ಎಂಬುದು ತಿಳಿಯಬೇಕಿದೆ. ಎಲ್ಲಾ ಆಯಾಮಗಳಲ್ಲಿಯೂ ತನಿಖೆ ನಡೆಯುತ್ತಿದೆ. ಉಡುಪಿ ಎಸ್ಪಿ ನೇತೃತ್ವ ದಲ್ಲಿ ತನಿಖಾ ತಂಡ ರಚನೆಯಾಗಿದೆ. ಸದ್ಯದಲ್ಲೇ ವಿವರವಾದ ವರದಿ ಬರಲಿದೆ’ ಎಂದು ಅವರು
ಹೇಳಿದರು.

ಸಾವಿನ ಹಿಂದೆ ಕಾಂಗ್ರೆಸ್‌: ನಳಿನ್‌

ಮಂಗಳೂರು: ‘ಸಂತೋಷ್ ಪಾಟೀಲ ಆತ್ಮಹತ್ಯೆ ಪ್ರಕರಣದಲ್ಲಿ ಎಲ್ಲೂ ಡೆತ್ ನೋಟ್ ಸಿಕ್ಕಿಲ್ಲ. ವಾಟ್ಸ್‌ಆ್ಯಪ್‌ನಲ್ಲಷ್ಟೇ ಸಂದೇಶ ಹರಿದಾಡಿದೆ. ಸಂತೋಷ್ ಸಾವಿನ ಹಿಂದೆ ಕಾಂಗ್ರೆಸ್ ಇದೆ. ತನಿಖೆ ನಡೆಯುತ್ತಿದ್ದು, ಸತ್ಯಾಸತ್ಯತೆ ಬಯಲಾಗಲಿದೆ’ ಎಂದು ಸಂಸದ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್‌ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕಾಂಗ್ರೆಸ್ ಸರ್ಕಾರ ಇದ್ದಾಗ ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವರಾಗಿದ್ದ ಕೆ.ಜೆ. ಜಾರ್ಜ್ ಅವರನ್ನು ಏಕೆ ಬಂಧಿಸಲಿಲ್ಲ? ಸಿದ್ದರಾಮಯ್ಯ ಸರ್ಕಾರ ಇದ್ದಾಗ 24 ಮಂದಿ ಕಾರ್ಯಕರ್ತರ ಹತ್ಯೆಯಾಗಿತ್ತು. ಆ ವೇಳೆ ಸಿದ್ದರಾಮಯ್ಯ ಅವರನ್ನು ಜೈಲಿಗೆ ಕಳುಹಿಸಬೇಕಾಗಿತ್ತು’ ಎಂದರು.

‘ಹಗರಣವೊಂದರಲ್ಲಿ ಜಾಮೀನು ಪಡೆದಿರುವ ಕಾಂಗ್ರೆಸ್‌ನ ರಾಜ್ಯ ಘಟಕದ ಅಧ್ಯಕ್ಷರೂ ಜೈಲಿನಲ್ಲಿ ಇರಬೇಕಾಗಿತ್ತು. ಯುವ ಕಾಂಗ್ರೆಸ್ ರಾಜ್ಯ ಘಟಕದ ಅಧ್ಯಕ್ಷರ ಮೇಲೆ ಹತ್ತು ಪ್ರಕರಣಗಳಿದ್ದು, ಅವರನ್ನೂ ಜೈಲಿಗೆ ಹಾಕಬೇಕು. ಕಾಂಗ್ರೆಸ್‌ನವರು ಜೈಲಿನ ಹೊರಗೆ ಅಲ್ಲ, ಒಳಗಡೆ ಹೋರಾಟ ಮಾಡಬೇಕು’ ಎಂದು ಲೇವಡಿ ಮಾಡಿದರು.

‘ಕೆಪಿಸಿಸಿ ಮುಖಂಡರ ಕೈವಾಡ’

ಹುಬ್ಬಳ್ಳಿ: ‘ಕೆ.ಎಸ್. ಈಶ್ವರಪ್ಪ ಅವರ ಮೇಲಿನ ಆರೋಪದಲ್ಲಿ‌ ಯಾವುದೇ ಹುರುಳಿಲ್ಲ. ಇದೆಲ್ಲವೂ ಕಾಂಗ್ರೆಸ್ ಷಡ್ಯಂತ್ರ’ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ ಸಿಂಗ್ ಆರೋಪಿಸಿದರು.

ಶುಕ್ರವಾರ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಈ ಪ್ರಕರಣದ ಹಿಂದೆ ಕೆಪಿಸಿಸಿ ಮುಖಂಡರೊಬ್ಬರು ಇದ್ದಾರೆ. ಪ್ರಕರಣದ ತನಿಖೆ ನಡೆಯುತ್ತಿದ್ದು, ಸತ್ಯ ಹೊರ ಬೀಳಲಿದೆ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು