ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾರಾಯಣ ಗುರು ನಿಗಮ: ಭರವಸೆ

Last Updated 5 ಜನವರಿ 2023, 18:40 IST
ಅಕ್ಷರ ಗಾತ್ರ

ಬೆಂಗಳೂರು: ಮುಂಬರುವ ಬಜೆಟ್‌ ಅಧಿವೇಶನದಲ್ಲಿ ನಾರಾಯಣ ಗುರು ಅಭಿವೃದ್ಧಿ ನಿಗಮ ಸ್ಥಾಪನೆಯ ಘೋಷಣೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದ್ದಾರೆ ಎಂದು ಕರ್ನಾಟಕ ಪ್ರದೇಶ ಆರ್ಯ ಈಡಿಗರ ಸಂಘ ತಿಳಿಸಿದೆ.

ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಎಂ.ತಿಮ್ಮೇಗೌಡ, ‘ಹಿಂದುಳಿದ ವರ್ಗಗಳ 2ಎ ‍ಪ್ರವರ್ಗಕ್ಕೆ ಸೇರಿದ ಈಡಿಗ ಸಮುದಾಯಕ್ಕೆ ನಾರಾಯಣ ಗುರು ಅಭಿವೃದ್ಧಿ ಕೋಶದ ಬದಲಾಗಿ ನಾರಾಯಣ ಗುರು ಅಭಿವೃದ್ಧಿ ನಿಗಮ ಸ್ಥಾಪಿಸಿ ₹500 ಕೋಟಿ ಅನುದಾನವನ್ನು ಮೀಸಲಿಡಬೇಕು’ ಎಂದು ಒತ್ತಾಯಿಸಿದರು.

‘2ಎ ಪ್ರವರ್ಗದಲ್ಲಿರುವ ಈಡಿಗ ಸಮುದಾಯವು 25 ಉಪ ಜಾತಿಗಳನ್ನು ಒಳಗೊಂಡಿದ್ದು, 50 ಲಕ್ಷ ಜನಸಂಖ್ಯೆಯನ್ನು ಹೊಂದಿದೆ. ಇವು ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಅತ್ಯಂತ ಹಿಂದುಳಿದಿರುವ ಕುಲ ಕಸುಬು ಆಧರಿಸಿದ ಜಾತಿಗಳಾಗಿವೆ. ಪ್ರವರ್ಗ 2ಎ ಮೀಸಲಾತಿ ಸೌಲಭ್ಯಕ್ಕೆ ಯಾವುದೇ ಧಕ್ಕೆಯಾಗಬಾರದು. ಹಿಂದುಳಿದ ವರ್ಗಗಳ ಆಯೋಗದ ಕಾಂತರಾಜ್‌ ವರದಿಯನ್ನು ಈ ಕೂಡಲೇ ಜಾರಿಗೊಳಿಸಬೇಕು. ಸರ್ಕಾರ ಸಿಗಂದೂರು ಕ್ಷೇತ್ರದಲ್ಲಿ ಹಸ್ತಕ್ಷೇಪ ಮಾಡಬಾರದು’ ಎಂದು ಆಗ್ರಹಿಸಿದರು.

ನಾರಾಯಣ ಗುರು ವಿಚಾರ ವೇದಿಕೆಯ ರಾಜ್ಯಾಧ್ಯಕ್ಷ ಸತ್ಯಜಿತ್‌ ಸುರತ್ಕಲ್ ಮಾತನಾಡಿ, ‘ರಾಜ್ಯದಲ್ಲಿರುವ ಬೇರೆ ಬೇರೆ ಸಮುದಾಯಗಳಿಗೆ ಪ್ರತ್ಯೇಕ ನಿಗಮಗಳಿದ್ದು, ನೂರಾರು ಕೋಟಿ ಅನುದಾನ ನೀಡಲಾಗಿದೆ. ಶಿವಮೊಗ್ಗದಲ್ಲಿ ನಡೆಯುವ ಸಮಾವೇಶದಲ್ಲಿ ಶಿವಮೊಗ್ಗದ ವಿಮಾನ ನಿಲ್ದಾಣಕ್ಕೆ ಎಸ್. ಬಂಗಾರಪ್ಪ ಅವರ ಹೆಸರಿಡಬೇಕು ಎಂದು ಆಗ್ರಹಿಸಲಾಗುವುದು’ ಎಂದರು.

‘ಪ್ರವರ್ಗ 2ಎ ನಲ್ಲಿರುವ ಶೇ 15ರಷ್ಟು ಮೀಸಲಾತಿಗೆ ಯಾವುದೇ ರೀತಿಯ ಧಕ್ಕೆಯಾಗಬಾರದು. ಬೇರೆ ಸಮುದಾಯಗಳಿಗೆ ಮೀಸಲಾತಿ ನೀಡುವುದಕ್ಕೆ ನಮ್ಮ ಅಭ್ಯಂತರವಿಲ್ಲ. ಸಮಾಜದಲ್ಲಿ ದಮನಕ್ಕೊಳಗಾದ ಸಮುದಾಯಗಳ ಅಭಿವೃದ್ಧಿಗೆ ಮೀಸಲಾತಿ ವ್ಯವಸ್ಥೆ ಜಾರಿಗೊಳಿಸಲಾಗಿತ್ತು. ಆದರೆ, ಇಂದು ದಮನಕ್ಕೆ ಕಾರಣವಾಗಿದ್ದ ಸಮುದಾಯಗಳೇ ಮೀಸಲಾತಿಗೆ ಬೇಡಿಕೆ ಇಡುತ್ತಿವೆ’ ಎಂದು ಬೇಸರ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT