ಭಾನುವಾರ, ಜೂನ್ 13, 2021
20 °C
ಆನ್‌ಲೈನ್‌ ಮೂಲಕ ಕಟ್ಟಡ ಉದ್ಘಾಟಿಸಿದ ರಕ್ಷಣಾ ಸಚಿವ ರಾಜನಾಥ್‌ಸಿಂಗ್

ನಾಯಕನಹಟ್ಟಿ: ಕೌಶಲಾಭಿವೃದ್ಧಿ ತರಬೇತಿ ಕೇಂದ್ರ ಸ್ಥಾಪನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನಾಯಕನಹಟ್ಟಿ: ವಿಜ್ಞಾನ ಹಾಗೂ ಗಣಿತ ಬೋಧನೆ ಸುಧಾರಣೆಯ ಜತೆಗೆ ಯುವಜನತೆಯಲ್ಲಿ ಕೌಶಲಗಳನ್ನು ಅಭಿವೃದ್ಧಿಪಡಿಸುವ ಉದ್ದೇಶದಿಂದ ಭಾರತೀಯ ವಿಜ್ಞಾನ ಸಂಸ್ಥೆಯು (ಐಐಎಸ್‌ಸಿ) ಚಳ್ಳಕೆರೆ ತಾಲ್ಲೂಕಿನ ಕುದಾಪುರದಲ್ಲಿ ಕೌಶಲಾಭಿವೃದ್ಧಿ ಕೇಂದ್ರಕ್ಕಾಗಿ ಐಕಾನಿಕ್ ಕಟ್ಟಡವನ್ನು ನಿರ್ಮಿಸಿದೆ. ರಕ್ಷಣಾ ಸಚಿವ ರಾಜನಾಥ್‌ಸಿಂಗ್ ಅವರು ಗುರುವಾರ ದೆಹಲಿಯಿಂದಲೇ ಆನ್‌ಲೈನ್‌ ಮೂಲಕ ಸಾಂಕೇತಿಕವಾಗಿ ಕಟ್ಟಡ ಉದ್ಘಾಟಿಸಿದರು.

1,500 ಎಕರೆ ವಿಸ್ತೀರ್ಣದ ಕ್ಯಾಂಪಸ್‌ನಲ್ಲಿ 2,400 ಚದರ ಅಡಿಯ ಸುಸಜ್ಜಿತ ಐಕಾನಿಕ್ ಕಟ್ಟಡದಲ್ಲಿ ಅಂತರ ರಾಷ್ಟ್ರೀಯ ಮಾನದಂಡ ಆಧರಿಸಿ 6 ಸುಸಜ್ಜಿತ ತರಗತಿ ಕೊಠಡಿಗಳು, ಗಣಿತ, ರಸಾಯನ ವಿಜ್ಞಾನ, ಭೌತವಿಜ್ಞಾನ, ಜೀವವಿಜ್ಞಾನಕ್ಕೆ 4 ಪ್ರತ್ಯೇಕ ಪ್ರಯೋಗಾಲಯ, ಏರೊನಾಟಿಕ್ಸ್, ಮೆಕ್ಯಾನಿಕಲ್, ಕಂಪ್ಯೂಟರ್‌ ಸೈನ್ಸ್, ಎಲೆಕ್ಟ್ರಾನಿಕ್ಸ್ ಆ್ಯಂಡ್‌ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ವರ್ಕ್‌ಶಾಪ್ ವ್ಯವಸ್ಥೆ ಇದೆ.ಅಂತರರಾಷ್ಟ್ರೀಯ ಸೆಮಿನಾರ್‌ಗಳ ಆಯೋಜನೆ ನಡೆಸಲು 250 ಆಸನಗಳ ಸಭಾಂಗಣ, ಇ-ಗ್ರಂಥಾಲಯ ಇಲ್ಲಿದೆ.

200 ಜನ ಕುಳಿತುಕೊಳ್ಳುವ ಡೈನಿಂಗ್‌ ಹಾಲ್, ಕೌಶಲ ತರಬೇತಿ ಪಡೆಯುವ ಕಲಿಕಾರ್ಥಿಗಳ ವಸತಿಗೆ 200 ಸ್ತ್ರೀ ಮತ್ತು ಪುರುಷರಿಗೆ ಪ್ರತ್ಯೇಕ ಹಾಸ್ಟೆಲ್ ವ್ಯವಸ್ಥೆ, ಅತಿ ವೇಗದ ವೈಫೈ ನೆಟ್‌ವರ್ಕ್ ಸಂಪರ್ಕದೊಂದಿಗೆ ಅಂತರರಾಷ್ಟ್ರೀಯ ಮಟ್ಟದ ಕಲಿಕಾ ಸೌಲಭ್ಯಗಳು ಇಲ್ಲಿವೆ.

ಎಲ್ಲ ರಾಜ್ಯಗಳ ಪ್ರೌಢಶಾಲೆ, ಪದವಿಪೂರ್ವ ಶಿಕ್ಷಣ, ಬಿ.ಎಸ್ಸಿ, ಎಂ.ಎಸ್ಸಿ, ನವೋದಯ ಶಾಲೆ ಹಾಗೂ ಕೇಂದ್ರೀಯ ವಿದ್ಯಾಲಯದ ಶಿಕ್ಷಕರು ಮತ್ತು ಪ್ರಾಧ್ಯಾಪಕರಿಗೆ ವಿಜ್ಞಾನ ವಿಷಯಗಳ ಬಗ್ಗೆ ತರಬೇತಿ ನೀಡಲು ಇಲ್ಲಿ ಉದ್ದೇಶಿಸಲಾಗಿದೆ.

ಸ್ಕಿಲ್ ಇಂಡಿಯಾ ಪರಿಕಲ್ಪನೆಯ ಅಡಿಯಲ್ಲಿ ಈ ಕಟ್ಟಡ ನಿರ್ಮಾಣವಾಗಿದ್ದು, ಹಿಂದೂಸ್ಥಾನ್ ಏರೋನ್ಯಾಟಿಕ್ಸ್ ಲಿಮಿಟೆಡ್ (ಎಚ್‌ಎಎಲ್) ಸಾಮಾಜಿಕ ಹೊಣೆ ಗಾರಿಕೆ ನಿಧಿಯಿಂದ ₹ 52 ಕೋಟಿ, ಐಐಎಸ್‌ಸಿಯಿಂದ ₹ 30 ಕೋಟಿ ಅನುದಾನ ನೀಡಲಾಗಿದೆ.

ಕೇಂದ್ರೀಯ ಲೋಕೋಪಯೋಗಿ ಇಲಾಖೆಯು ತನ್ನ 166ನೇ ಸಂಸ್ಥಾಪನಾ ದಿನದ ನಿಮಿತ್ತ ಇಲ್ಲಿನ ಕೌಶಲಾಭಿವೃದ್ಧಿ ತರಬೇತಿ ಕೇಂದ್ರ ಕಟ್ಟಡಕ್ಕೆ ರಾಷ್ಟ್ರಮಟ್ಟದ ದ್ವಿತೀಯ ಉತ್ತಮ ವಿನ್ಯಾಸ ಹೊಂದಿರುವ ಕಟ್ಟಡ ಎಂದು ಘೋಷಿಸಿ ಪ್ರಶಸ್ತಿ ನೀಡಿದೆ.

*
ವಿವಿಧ ರಾಜ್ಯಗಳ ಶಿಕ್ಷಕರು, ಪ್ರಾಧ್ಯಾಪಕರು, ಸಂಶೋಧಕರು, ವಿದ್ಯಾರ್ಥಿಗಳಿಗೆ ವಿಜ್ಞಾನ ತರಬೇತಿ ನೀಡುವುದು, ಕೌಶಲ ಕಲಿಸುವುದು ನಮ್ಮ ಗುರಿ.
-ಪ್ರೊ.ಬಿ.ಎನ್.ರಘುನಂದನ್, ಕುದಾಪುರ ಐಐಎಸ್‌ಸಿ ಮುಖ್ಯಸ್ಥ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು