ಸೋಮವಾರ, ಜೂನ್ 21, 2021
20 °C
ಡಿ.ಜೆ.ಹಳ್ಳಿ ಗಲಭೆ: ಸಾಕ್ಷ್ಯ ಸಂಗ್ರಹಿಸಿ ವರದಿ ಪಡೆದ ಬಳಿಕ ಮುಂದಿನ ಕ್ರಮ, ಸಂಪುಟ ತೀರ್ಮಾನ

ಎಎಸ್‌ಡಿಪಿಐ, ಪಿಎಫ್‌ಐ ಕೈವಾಡಗಳನ್ನು ಸಮರ್ಥಿಸುವ ಸಾಕ್ಷ್ಯ ಇಲ್ಲ: ಮಾಧುಸ್ವಾಮಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು:‍ ‍‍‌‘ಡಿ.ಜೆ.ಹಳ್ಳಿ ಮತ್ತು ಕೆ.ಜಿ.ಹಳ್ಳಿಗಳಲ್ಲಿ ನಡೆದ ಗಲಭೆಯಲ್ಲಿ ಎಸ್‌ಡಿಪಿಐ ಮತ್ತು ಪಿಎಫ್‌ಐ ಸಂಘಟನೆಗಳ ಕೈವಾಡಗಳನ್ನು ಸಮರ್ಥಿಸುವ ಬಲವಾದ ಸಾಕ್ಷ್ಯಗಳು ಸದ್ಯಕ್ಕೆ ಸಿಗದ ಕಾರಣ ಅವುಗಳನ್ನು ನಿಷೇಧಿಸುವ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಯಾವುದೇ ತೀರ್ಮಾನ ಕೈಗೊಂಡಿಲ್ಲ’ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.

ಸಂಪುಟ ಸಭೆಯ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಈ ಸಂಘಟನೆಗಳನ್ನು ನಿಷೇಧಿಸಲು ಹೆಚ್ಚಿನ ಸಾಕ್ಷ್ಯ ಮತ್ತು ಮಾಹಿತಿಯನ್ನು ಸಂಗ್ರಹಿಸಿ ವರದಿ ನೀಡುವಂತೆ ಪೊಲೀಸ್‌ ಇಲಾಖೆಗೆ ಸೂಚಿಸಲಾಗಿದೆ. ವರದಿ ಆಧಾರದ ಮೇಲೆ ಮುಂದಿನ ಕ್ರಮ ಜರುಗಿಸಲಾಗುವುದು. ಗೃಹ ಇಲಾಖೆ ಮತ್ತು ಕಾನೂನು ಇಲಾಖೆಯ ಅಭಿಪ್ರಾಯಗಳನ್ನೂ ಪಡೆಯಲಾಗುವುದು’ ಎಂದು  ತಿಳಿಸಿದರು.

‘ಎಸ್‌ಡಿಪಿಐ ಒಂದು ಸಂಘಟನೆ ಮಾತ್ರವಲ್ಲ, ಅದು ರಾಜಕೀಯ ಪಕ್ಷವೂ ಆಗಿದೆ. ಆದ್ದರಿಂದ ಅದನ್ನು ನಿಷೇಧಿಸಲು ಕಾನೂನಿಗೆ ತಿದ್ದುಪಡಿ ಅಗತ್ಯ ಇದೆಯೇ ಎಂಬುದನ್ನು ಪರಿಶೀಲಿಸಲಾಗುವುದು. ಅಗತ್ಯವಿದ್ದರೆ ಕಾಯ್ದೆಗೆ ತಿದ್ದುಪಡಿ ಮಾಡಲಾಗುವುದು. ಗಲಭೆಗಳು, ಅಪರಾಧ ಚಟುವಟಿಕೆಗಳಲ್ಲಿ ಈ ಸಂಘಟನೆಗಳು ಭಾಗಿಯಾಗಿರುವುದು ಸಾಬೀತಾದರೆ ನಿಷೇಧ ಮಾಡಲು ಹಿಂಜರಿಯುವುದಿಲ್ಲ’ ಎಂದೂ ಅವರು ಹೇಳಿದರು. 

‘ಗಲಭೆಕೋರರಿಂದ ದಂಡ ವಸೂಲಿಗೆ ಸಭೆಯಲ್ಲಿ ಒಪ್ಪಿಗೆ ನೀಡಲಾಯಿತು. ಯಾವುದೇ ಗಲಭೆಗಳಲ್ಲಿ ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಹಾನಿ ಮಾಡಿದರೆ, ದಂಡ ವಸೂಲಿ ಮಾಡುವ ಬಗ್ಗೆ 1981 ರಲ್ಲಿಯೇ ಕಾಯ್ದೆಗೆ ತಿದ್ದುಪಡಿ ಮಾಡಲಾಗಿತ್ತು. ಡಿ.ಜೆ.ಹಳ್ಳಿ ಗಲಭೆಗೆ ಸಂಬಂಧಿಸಿದಂತೆ ಕ್ಲೇಮ್‌ ಕಮಿಷನರ್‌ ನೇಮಕ ಆದ ಬಳಿಕ, ಅವರಿಗೆ ರಾಜ್ಯದ 81 ರ ಕಾಯ್ದೆಯನ್ನು ಒದಗಿಸಲಾಗುವುದು. ಅಲ್ಲದೆ, ಉತ್ತರ ಪ್ರದೇಶ ರಾಜ್ಯವೂ ಕಾಯ್ದೆಯೊಂದನ್ನು ರೂಪಿಸಿದೆ. ಅದನ್ನೂ ಅಧ್ಯಯನ ನಡೆಸಿ ಅಗತ್ಯವಿದ್ದರೆ ನಮ್ಮ ಕಾಯ್ದೆಗೆ ತಿದ್ದುಪಡಿ ಮಾಡಲಾಗುವುದು’ ಎಂದು ಹೇಳಿದರು.

ಸಚಿವರ ಒತ್ತಡ: ‘ಎಸ್‌ಡಿಪಿಐ ಮತ್ತು ಪಿಎಫ್‌ಐ ನಿಷೇಧಿಸಲು ಸಚಿವ ಸಂಪುಟ ಸಭೆಯಲ್ಲಿ ಬಹುತೇಕ ಸಚಿವರು ಒತ್ತಡ ಹೇರಿದರು. ಡಿ.ಜೆ.ಹಳ್ಳಿ ಗಲಭೆ, ಶಾಸಕ ತನ್ವೀರ್ ಸೇಠ್ ಮೇಲೆ ಹಲ್ಲೆ, ಮಂಗಳೂರು ಗಲಭೆಯಲ್ಲಿ ಈ ಸಂಘಟನೆಗಳ ಕೈವಾಡ ಇರುವುದು ಮೇಲ್ನೋಟಕ್ಕೆ ಸಾಬೀತಾಗಿದೆ. ಆದ್ದರಿಂದ ನಿಷೇಧ ಮಾಡುವಂತೆ ಕೋರಿ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಬೇಕು ಎಂದು ಸಚಿವರಾದ ಕೆ.ಎಸ್‌.ಈಶ್ವರಪ್ಪ, ಸಿ.ಟಿ.ರವಿ, ಆರ್‌.ಅಶೋಕ ಒತ್ತಾಯಿಸಿದರು’ ಎಂದು ಮೂಲಗಳು ತಿಳಿಸಿವೆ.

ಸಂಪುಟ ಸಭೆಗೂ ಮುನ್ನ ಸುದ್ದಿಗಾರರ ಜತೆ ಮಾತನಾಡಿದ ಸಚಿವ ಸಿ.ಟಿ.ರವಿ, ‘ಗಲಭೆಗೆ ಸಂಬಂಧಿಸಿದಂತೆ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸುವ ಕಾರ್ಯ ಪ್ರಗತಿಯಲ್ಲಿದೆ. ಯಾವುದೇ ಒಂದು ಘಟನೆಯ ಆಧಾರದಲ್ಲಿ ನಿಷೇಧ ನಿರ್ಧಾರ ಮಾಡಲು ಸಾಧ್ಯವಿಲ್ಲ. ಆ ಸಂಘಟನೆಗಳ ಸಮಾಜಘಾತುಕ ಕಾರ್ಯಗಳ ಬಗ್ಗೆ ಸಾಕ್ಷ್ಯಗಳನ್ನು ಕಲೆ ಹಾಕುವ ಕೆಲಸ ನಡೆದಿದೆ’ ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು