ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸವಾಲಿನ ಮಧ್ಯೆ ಚುನಾವಣೆಗೆ ಸಿದ್ಧತೆ: ಇವಿಎಂ ಗುಂಡಿ ಒತ್ತಲು ರಬ್ಬರ್ ಕವಚ!

ಕೊರೊನಾ ಸೋಂಕು ಹರಡದಂತೆ ಕಟ್ಟುನಿಟ್ಟಿನ ಕ್ರಮ
Last Updated 15 ಅಕ್ಟೋಬರ್ 2020, 19:58 IST
ಅಕ್ಷರ ಗಾತ್ರ

ಬೆಂಗಳೂರು: ಈ ಬಾರಿ ಶಿರಾ, ಆರ್‌.ಆರ್‌.ನಗರ ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನದ ವೇಳೆ ಮತದಾರರಿಗೆ ವಿಶಿಷ್ಟ ಅನುಭವ ಆಗಲಿದೆ. ಸ್ಯಾನಿಟೈಸ್‌ ಮತ್ತು ಥರ್ಮಲ್‌ ಸ್ಕ್ಯಾನಿಂಗ್‌ ಬಳಿಕ ಕೈ ಬೆರಳಿಗೆ ಪುಟ್ಟ ರಬ್ಬರ್‌ ಕವಚ ನೀಡಲಾಗುತ್ತದೆ. ಅದನ್ನು ತೋರು ಬೆರಳಿಗೆ ಧರಿಸಿಯೇ ಇವಿಎಂ ಗುಂಡಿ ಒತ್ತಬೇಕು!

ಕೊರೊನಾ ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ನಡೆಯುತ್ತಿರುವ ಮೊದಲ ಚುನಾವಣೆ ಆಗಿರುವುದರಿಂದ ಚುನಾವಣಾ ಆಯೋಗಕ್ಕೆ ಸಿದ್ಧತೆಯೂ ಸವಾಲಿನದಾಗಿದೆ. ಇದಕ್ಕಾಗಿ ವಿಶೇಷ ತಯಾರಿ ನಡೆಸಿಕೊಳ್ಳುತ್ತಿದೆ.

ನೂರಾರು ಮತದಾರರು ಬಂದು ಇವಿಎಂ ಗುಂಡಿ ಒತ್ತುವುದರಿಂದ ವೈರಾಣುಗಳು ಅಂಟಿಕೊಳ್ಳುವ ಸಾಧ್ಯತೆ ಇರುತ್ತದೆ. ಅದನ್ನು ತಪ್ಪಿಸಲು ರಬ್ಬರ್‌ ಕವಚ ನೀಡಲಾಗುತ್ತದೆ. ಇದರಿಂದ ವೈರಾಣು ಹರಡುವುದನ್ನು ತಪ್ಪಿಸಬಹುದು ಎನ್ನುತ್ತಾರೆ ಚುನಾವಣಾ ಆಯೋಗದ ಹಿರಿಯ ಅಧಿಕಾರಿಗಳು.

ವಿಧಾನಪರಿಷತ್‌ ಚುನಾವಣೆಯಲ್ಲಿ ಕಾಗದದ ಮತಪತ್ರ ಬಳಸುವುದರಿಂದ, ಅಲ್ಲಿ ಒಂದು ಬಾರಿ ಬಳಸಿ ಬಿಸಾಕಬಹುದಾದ ಕಡಿಮೆ ಬೆಲೆಯ ಪೆನ್‌ಗಳನ್ನು ಬಳಸಲಿದೆ. ಇದರಿಂದ ಮತದಾರರು ವೈರಾಣುವಿನ ನೇರ ಸಂಪರ್ಕದಿಂದ ತಪ್ಪಿಸಿಕೊಳ್ಳಬಹುದು.

ಜನರ ಸಾಂದ್ರತೆ ಇದ್ದಲ್ಲಿ ಕೊರೊನಾ ವೈರಾಣು ಹರಡುವುದು ಹೆಚ್ಚು. ಇವೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ಮತದಾನ ಕೇಂದ್ರಗಳಲ್ಲಿ ಕೆಲವು ಮಾರ್ಪಾಡುಗಳನ್ನೂ ಮಾಡಿಕೊಳ್ಳಲಾಗುತ್ತಿದೆ. ಪ್ರತಿಯೊಂದು ಮತಗಟ್ಟೆಯಲ್ಲಿ ಸ್ಯಾನಿಟೈಸರ್‌, ಥರ್ಮಲ್‌ ಸ್ಕ್ಯಾನರ್‌ ಬಳಸಲಾಗುತ್ತದೆ. ಇದಕ್ಕಾಗಿ ಗಾಳಿ– ಬೆಳಕು ಇರುವ ವಿಶಾಲ ಕೊಠಡಿಗಳನ್ನೇ ಬಳಸಲು ಚುನಾವಣಾ ಆಯೋಗ ನಿರ್ಧರಿಸಿದೆ. ಇದರಿಂದ ಅಂತರ ಕಾಯ್ದುಕೊಳ್ಳಲೂ ಸಾಧ್ಯ.

ಈ ಹಿಂದೆ ಪ್ರತಿ ಬೂತ್‌ನಲ್ಲಿ 1,500 ಮತದಾರರಿಗೆ ಮತದಾನಕ್ಕೆ ಅವಕಾಶ ಇರುತ್ತಿತ್ತು. ಈ ಚುನಾವಣೆಯಲ್ಲಿ ಆ ಸಂಖ್ಯೆಯನ್ನು 1,000 ಕ್ಕೆ ಇಳಿಸಲಾಗಿದೆ. ಮತದಾನದ ಕೊನೆಯ ಒಂದು ಗಂಟೆಯಲ್ಲಿ ಕೋವಿಡ್‌ ಪಾಸಿಟಿವ್‌ ಮತ್ತು ಶಂಕಿತರ ಮತದಾನಕ್ಕೆ ಅವಕಾಶ ನೀಡಲಾಗುವುದು. ಥರ್ಮಲ್‌ ಸ್ಕ್ಯಾನ್‌ ಮಾಡಿದಾಗ ವ್ಯಕ್ತಿಯ ದೇಹದಲ್ಲಿ ತಾಪಮಾನ ಹೆಚ್ಚಾಗಿದ್ದರೆ, ಟೋಕನ್‌ ನೀಡಿ ಕೊನೆಯ ಒಂದು ಗಂಟೆಯ ಅವಧಿಯಲ್ಲಿ ಮತದಾನಕ್ಕೆ ಅವಕಾಶ ನೀಡಲಾಗುವುದು. ಇವೆಲ್ಲವನ್ನು ಸಮರ್ಪಕವಾಗಿ ನಿರ್ವಹಿಸಲು ಚುನಾವಣಾ ಆಯೋಗ ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಜತೆ ಸಮನ್ವಯ ನಿರ್ವಹಿಸಲು ಒಬ್ಬ ನೋಡಲ್‌ ಅಧಿಕಾರಿಯನ್ನೂ ನೇಮಿಸಲಾಗುತ್ತದೆ.

ಅಂಗವಿಕಲರು, 80 ವರ್ಷ ಮೀರಿದವರು ಮತ್ತು ಕೊರೊನಾ ಪಾಸಿಟಿವ್‌‌ ಆಗಿ ಚಿಕಿತ್ಸೆ ಪಡೆಯುತ್ತಿರುವವರಿಗೆ ಅಂಚೆ ಮತದಾನಕ್ಕೂ ಅವಕಾಶ ನೀಡಲಾಗಿದೆ. ಇವರು ಫಾರಂ 12 ಡಿ ಮೂಲಕ ಆರೋಗ್ಯ ಇಲಾಖೆಯ ಅಧಿಕಾರಿಗಳಿಂದ ಪ್ರಮಾಣ ಪತ್ರ ಪಡೆದು ಅರ್ಜಿ ಸಲ್ಲಿಸಬೇಕು.

ತಾರಾ ಪ್ರಚಾರಕರ ಸಂಖ್ಯೆಯನ್ನು ರಾಷ್ಟ್ರೀಯ ಪಕ್ಷಗಳಿಗೆ 30ಕ್ಕೆ ಹಾಗೂ ಸಣ್ಣ ಪಕ್ಷಗಳಿಗೆ 15ಕ್ಕೆ ಸೀಮಿತಗೊಳಿಸಲಾಗಿದೆ ಎಂದು ಆಯೋಗ ಹೇಳಿದೆ.

ನೌಕರರು, ಕಾರ್ಮಿಕರಿಗೆ ರಜೆ

ನ.3 ರಂದು ಆರ್‌.ಆರ್‌.ನಗರ ಮತ್ತು ಶಿರಾ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಕಾರಣ ಈ ಕ್ಷೇತ್ರಗಳ ವ್ಯಾಪ್ತಿಯಲ್ಲಿರುವ ರಾಜ್ಯ ಸರ್ಕಾರಿ ಕಚೇರಿಗಳು, ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಿಗೆ ಸಾರ್ವತ್ರಿಕ ರಜೆ ಘೋಷಿಸಲಾಗಿದೆ. ವ್ಯಾವಹಾರಿಕ ಸಂಸ್ಥೆಗಳು, ಕೈಗಾರಿಕೆಗಳು ಮತ್ತು ಇನ್ನಿತರ ಸಂಸ್ಥೆಗಳಲ್ಲಿ ಕಾಯಂ, ಗುತ್ತಿಗೆ ಅಥವಾ ದಿನಗೂಲಿ ಆಧಾರದಲ್ಲಿ ಕೆಲಸ ಮಾಡುವ ಕಾರ್ಮಿಕರು ಮತ್ತು ಸಿಬ್ಬಂದಿಗೆ ವೇತನ ಸಹಿತ ರಜೆ ನೀಡಬೇಕು ಎಂದು ಆದೇಶ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT