ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಕ್ಕಿಬಿದ್ದ ಸಂಪತ್‌ರಾಜ್; ಸಿಸಿಬಿ ಕಸ್ಟಡಿಗೆ

Last Updated 17 ನವೆಂಬರ್ 2020, 20:41 IST
ಅಕ್ಷರ ಗಾತ್ರ

ಬೆಂಗಳೂರು: ಶಾಸಕ ಅಖಂಡ ಶ್ರೀನಿವಾಸಮೂರ್ತಿ ಮನೆಗೆ ಬೆಂಕಿ ಹಚ್ಚಿಸಿದ್ದ ಪ್ರಕರಣದಲ್ಲಿ ಭಾಗಿಯಾದ ಆರೋಪ ಎದುರಿಸುತ್ತಿರುವ ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಮೇಯರ್ ಆರ್‌. ಸಂಪತ್‌ ರಾಜ್‌ ಅವರು ಸೋಮವಾರ ತಡ ರಾತ್ರಿ ತಮ್ಮ ಮನೆಯಲ್ಲೇ ಸಿಸಿಬಿ ಪೊಲಿಸರಿಗೆ ಸಿಕ್ಕಿಬಿದ್ದಿದ್ದಾರೆ.

ಕೊರೊನಾ ಸೋಂಕು ತಗುಲಿರುವುದಾಗಿ ಹೇಳಿ ಆಸ್ಪತ್ರೆಗೆ ದಾಖಲಾಗಿದ್ದ ಸಂಪತ್‌ರಾಜ್, ಆಸ್ಪತ್ರೆಯಿಂದ ಅಕ್ಟೋಬರ್ 30 ರಂದು ಬಿಡುಗಡೆ ಆಗಿ ಪರಾರಿಯಾಗಿದ್ದರು. ಅವರಿಗಾಗಿ ಸಿಸಿಬಿ ಪೊಲೀಸರ ಎಂಟು ತಂಡಗಳು ಹುಡುಕಾಟ ನಡೆಸುತ್ತಿದ್ದವು.

ಪ್ರಕರಣದ ಪ್ರಮುಖ ಆರೋಪಿ ಸಂಪತ್‌ರಾಜ್, ವಾಸಸ್ಥಳಗಳನ್ನು ಬದಲಾಯಿಸುತ್ತಾ ಓಡಾಡುತ್ತಿದ್ದರು. ಸೋಮವಾರ ಸಂಜೆ ಸ್ನೇಹಿತನ ಮನೆಗೆ ಭೇಟಿ ನೀಡಿದ್ದ ಅವರು, ಅಲ್ಲಿಂದ ತಮ್ಮ ಮನೆಗೆ ಬಂದಿದ್ದರು. ಆ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಹೋಗಿದ್ದ ಪೊಲೀಸರು, ಸಂಪತ್‌ರಾಜ್ ಅವರನ್ನು ಬಂಧಿಸಿ ಚಾಮರಾಜಪೇಟೆಯಲ್ಲಿರುವ ಸಿಸಿಬಿ ಕಚೇರಿಗೆ ಕರೆದೊಯ್ದಿದ್ದರು.

ಮಂಗಳವಾರ ಮಧ್ಯಾಹ್ನದವರೆಗೂ ಸಂಪತ್‌ರಾಜ್ ಅವರನ್ನು ವಿಚಾರಣೆಗೆ ಒಳಪಡಿಸಿದ ಪೊಲೀಸರು, ನಂತರ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ‘ಪ್ರಕರಣದಲ್ಲಿ ಸಂಪತ್‌ರಾಜ್ ಪ್ರಮುಖ ಆರೋಪಿ. ವಿಚಾರಣೆಗಾಗಿ ಕಸ್ಟಡಿಗೆ ನೀಡಿ’ ಎಂದು ಕೋರಿದರು. ಮನವಿ ಪುರಸ್ಕರಿಸಿದ ನ್ಯಾಯಾಲಯ, ಆರೋಪಿಯನ್ನು ಎರಡು ದಿನಗಳ ಕಾಲ ಸಿಸಿಬಿ ಕಸ್ಟಡಿಗೆ ನೀಡಿದೆ.

ಆಸ್ಪತ್ರೆಯಿಂದ ಪರಾರಿಯಾದ ಸಂದರ್ಭದಲ್ಲಿ ಸಂಪತ್‌ರಾಜ್ ಅವರಿಗೆ ನಾಗರಹೊಳೆಯಲ್ಲಿರುವ ಫಾರ್ಮ್‌ಹೌಸ್‌ನಲ್ಲಿ ಇರಲು ಜಾಗ ಕೊಟ್ಟಿದ್ದ ಆರೋಪದಡಿ ರಿಯಾಜುದ್ದೀನ್‌ ಎಂಬಾತನನ್ನೂ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ನೋಟಿಸ್‌ ನೀಡುತ್ತಿದ್ದಂತೆ ಆಸ್ಪತ್ರೆಗೆ ದಾಖಲು: ದೇವರಜೀವನಹಳ್ಳಿ (ಡಿ.ಜೆ. ಹಳ್ಳಿ) ಹಾಗೂ ಕಾಡುಗೊಂಡನಹಳ್ಳಿ (ಕೆ.ಜಿ. ಹಳ್ಳಿ) ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಗಲಭೆ ಸಂಬಂಧ ವಿಚಾರಣೆಗೆ ಬರುವಂತೆ ಸಿಸಿಬಿ ಪೊಲೀಸರು ಸಂಪತ್‌ರಾಜ್‌ ಅವರಿಗೆ ನೋಟಿಸ್ ನೀಡಿದ್ದರು.

ಅದಕ್ಕೆ ತಮ್ಮ ವಕೀಲರ ಮೂಲಕ ಪ್ರತಿಕ್ರಿಯಿಸಿದ್ದ ಸಂಪತ್‌ರಾಜ್, ‘ಕೊರೊನಾ ಸೋಂಕು ತಗುಲಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದೇನೆ’ ಎಂದಿದ್ದರು. ವಿಚಾರಣೆ ಕೈಬಿಟ್ಟಿದ್ದ ಪೊಲೀಸರು, ಸಂಪತ್‌ರಾಜ್ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದ ನಂತರ ತಿಳಿಸುವಂತೆ ಆಸ್ಪತ್ರೆಗೆ ಸೂಚನೆ ನೀಡಿದ್ದರು.

ಇದರ ನಡುವೆಯೇ ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದ ಸಂಪತ್‌ರಾಜ್ ತಲೆಮರೆಸಿಕೊಂಡಿದ್ದರು. ಪ್ರಕರಣದ ಬಗ್ಗೆ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದ ಸಿಸಿಬಿ ಪೊಲೀಸರು, ಸಂಪತ್ ರಾಜ್ ಅವರಿಗಾಗಿ ಹುಡುಕಾಟ ನಡೆಸುತ್ತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT