ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು: ರಿಕ್ಷಾದಲ್ಲಿ ಸ್ಫೋಟ- ಭಯೋತ್ಪಾದನೆ ಕೃತ್ಯ

ಸ್ಪೊಟದಿಂದ ಊದಿಕೊಂಡಿದೆ ಆರೋಪಿ ಮುಖ * ಆರೋಪಿ ಹೆಸರು ಖಚಿತಪಡಿಸದ ಪೊಲೀಸರು
Last Updated 20 ನವೆಂಬರ್ 2022, 19:44 IST
ಅಕ್ಷರ ಗಾತ್ರ

ಮಂಗಳೂರು: ‘ನಗರದ ಗರೋಡಿಯಲ್ಲಿ ಚಲಿಸುತ್ತಿದ್ದ ರಿಕ್ಷಾದಲ್ಲಿ ಶನಿವಾರ ಸಂಜೆ ಸಂಭವಿಸಿದ ಲಘು ಸ್ಫೋಟವು ಆಕಸ್ಮಿಕ ಘಟನೆಯಲ್ಲ. ಇದೊಂದು ಭಯೋತ್ಪಾದನೆ ಕೃತ್ಯ’ ಎಂದು ಪೊಲೀಸರು ತಿಳಿಸಿದ್ದಾರೆ.

ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯ ಬಳಿ ಇದ್ದ ಕುಕ್ಕರ್‌ ಬಾಂಬ್‌ ಸ್ಫೋಟಗೊಂಡಿದೆ. ಆದರೆ, ಆ ಪ್ರಯಾಣಿಕನ ಹೆಸರನ್ನು ಪೊಲೀಸರು ಇನ್ನೂ ಬಹಿರಂಗಪಡಿಸಿಲ್ಲ.

‘ಸ್ಫೋಟದಿಂದ ಆರೋಪಿಯ ಮುಖವೂ ಸುಟ್ಟು ಹೋಗಿದೆ. ಆತನಿಗೆ ಶೇ 45ರಷ್ಟು ಸುಟ್ಟಗಾಯಗಳಾಗಿವೆ. ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮುಖ ಊದಿಕೊಂಡಿರುವುದರಿಂದ ಆತ ಮಾತನಾಡುತ್ತಿಲ್ಲ. ಆತನನ್ನು ಬಲವಂತಪಡಿಸುವಂತೆಯೂ ಇಲ್ಲ. ಡಿಎನ್‌ಎ ಪರೀಕ್ಷೆಯಿಂದ ಅಥವಾ ಬಂಧುಗಳಿಂದ ಆರೋಪಿಯ ಗುರುತನನ್ನು ಖಚಿತಪಡಿಸಿಕೊಳ್ಳಬೇಕಿದೆ. ಆರೋಪಿಯ ಬಗ್ಗೆ ಸಿಕ್ಕಿರುವ ಸುಳಿವಿನ ಆಧಾರದಲ್ಲಿ ಬಂಧುಗಳನ್ನು ಕರೆಸುತ್ತಿದ್ದು, ಅವರು ಖಚಿತ ಪಡಿಸಿದ ಬಳಿಕವಷ್ಟೇ ಆರೋಪಿ ಯಾರು ಎಂಬುದನ್ನು ನಿಖರವಾಗಿ ಹೇಳಬಹುದು’ ಎಂದುಹೆಚ್ಚುವರಿ ಪೊಲೀಸ್‌ ನಿರ್ದೇಶಕ ಅಲೋಕ್‌ ಕುಮಾರ್‌ ಅವರು ಸುದ್ದಿಗಾರರಿಗೆ ಇಲ್ಲಿ ತಿಳಿಸಿದರು.

ಘಟನೆ ನಡೆದ ಸ್ಥಳಕ್ಕೆ ಭಾನುವಾರ ರಾತ್ರಿ ಭೇಟಿ ನೀಡಿದ ಅವರು ತನಿಖಾಧಿಕಾರಿಗಳಿಂದ ಹಾಗೂ ಪ್ರತ್ಯಕ್ಷದರ್ಶಿಗಳಿಂದ ಮಾಹಿತಿ ಕಲೆ ಹಾಕಿದರು. ಗಾಯಗೊಂಡಿರುವ ರಿಕ್ಷಾ ಚಾಲಕ ಉಜ್ಜೋಡಿಯ ಪುರುಷೋತ್ತಮ ಪೂಜಾರಿ ಅವರನ್ನು ಹಾಗೂ ಆರೋಪಿಯನ್ನು ಆಸ್ಪತ್ರೆಯಲ್ಲಿ ಭೇಟಿ ಮಾಡಿದರು.

‘ಘಟನೆ ಬಗ್ಗೆ ಚಾಲಕ ಪುರುಷೋತ್ತಮ ಪೂಜಾರಿ ಕೆಲ ಮಾಹಿತಿ ನೀಡಿದ್ದಾರೆ. ಪ್ರತ್ಯಕ್ಷ ದರ್ಶಿಗಳಿಂದಲೂ ಬಹಳಷ್ಟು ಮಾಹಿತಿ ಕಲೆ ಹಾಕಿದ್ದೇವೆ. ಆರೋಪಿಯು ರಿಕ್ಷಾ ಹತ್ತಿದ ಬಳಿಕ ಪಂಪ್‌ವೆಲ್‌ಗೆ ಹೋಗುವಂತೆ ಹೇಳಿದ್ದ. ಆತನ ಬಗ್ಗೆ ಬಹಳಷ್ಟು ಮಾಹಿತಿ ಕಲೆ ಹಾಕಿದ್ದೇವೆ. ಆತನ ಬಂಧುಗಳನ್ನೂ ಕರೆಸಿಕೊಳ್ಳುತ್ತಿದ್ದೇವೆ. ಅವರು ಖಚಿತಪಡಿಸಿದ ಬಳಿಕವಷ್ಟೇ ಆರೋಪಿಯ ಗುರುತನ್ನು ಬಹಿರಂಗಪಡಿಸಬಹುದು’ ಎಂದು ಎಡಿಜಿಪಿ ತಿಳಿಸಿದರು.

‘ಆರೋಪಿಗೆ ಯಾರ ಜೊತೆ ಸಂಪರ್ಕ ಇದೆ, ಅವನು ಇಲ್ಲಿಗೆ ಹೇಗೆ ಬಂದ, ಎಲ್ಲಿ ವಾಸ ಇದ್ದ, ಬಾಂಬ್‌ ಎಲ್ಲಿ ತಯಾರಿಸಲಾಗಿತ್ತು ಎಂಬುದನ್ನು ಪತ್ತೆ ಹಚ್ಚಲು ವಿಶೇಷ ತಂಡಗಳನ್ನು ರಚಿಸಲಾಗಿದೆ. ಇಲ್ಲಿ ಪ್ರಕರಣದ ತನಿಖೆಗೆ ಎಸಿಪಿ ಪರಮೇಶ್ವರ ಹೆಗಡೆ ಅವರನ್ನು ನೇಮಿಸಲಾಗಿದೆ. ಅವರ ನೇತೃತ್ವದ ತಂಡವು ಬಹಳಷ್ಟು ಮಾಹಿತಿ ಕಲೆಹಾಕಿದೆ. ಕೇಂದ್ರೀಯ ತನಿಖಾ ಏಜೆನ್ಸಿಗಳ ಜೊತೆಗೂ ಸಂಪರ್ಕದಲ್ಲಿದ್ದೇವೆ’ ಎಂದರು.

‘ಆರೋಪಿ ಜೊತೆ ನಂಟು ಇರುವ ಆಧಾರದಲ್ಲಿ ರಾಜ್ಯದಲ್ಲಿ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಕೃತ್ಯದಲ್ಲಿ ಅವರ ಪಾತ್ರ ಇದೆಯೇ ಪರಿಶೀಲಿಸುತ್ತಿದ್ದೇವೆ’ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಬಸ್‌ನಲ್ಲಿ ಬಂದಿದ್ದ ಆರೋಪಿ:

ಬಿ.ಸಿ. ರೋಡ್‌ ಕಡೆಯಿಂದ ಬಂದ ಬಸ್‌ನಲ್ಲಿ ಬಂದಿದ್ದ ಆರೋಪಿ, ಕಂಕನಾಡಿಯ ನಾಗುರಿ ಎಂಬಲ್ಲಿ ಇಳಿದಿದ್ದ. ಅಲ್ಲಿಂದ ರಿಕ್ಷಾದಲ್ಲಿ ಪ್ರಯಾಣಿಸಿದ್ದ. ರಿಕ್ಷಾದಲ್ಲಿ ಅರ್ಧ ಕಿ.ಮೀ ದೂರ ಸಾಗುವಷ್ಟರಲ್ಲೇ ಗರೊಡಿ ಬಳಿ ಆತನ ಬಳಿ ಇದ್ದ ಕುಕ್ಕರ್‌ ಬಾಂಬ್‌ ಸ್ಫೋಟಗೊಂಡಿತ್ತು ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಆಧಾರ್‌ ಕಾರ್ಡ್‌ ಸೃಷ್ಟಿಸಿದ ಗೊಂದಲ: ಆರೋಪಿ ಬಳಿ ಪತ್ತೆಯಾದ ಆಧಾರ್‌ ಕಾರ್ಡ್‌ನಿಂದಾಗಿ ಆತನ ಗುರುತಿನ ಬಗ್ಗೆ ಗೊಂದಲ ಉಂಟಾಗಿತ್ತು. ‘ಆರೋಪಿಯು ತನಿಖೆಯ ದಾರಿ ತಪ್ಪಿಸುವ ಉದ್ದೇಶದಿಂದ ಬೇರೆಯವರ ಆಧಾರ್‌ ಕಾರ್ಡ್ ಇಟ್ಟುಕೊಂಡಿರುವ ಸಾಧ್ಯತೆ ಇದೆ’ ಎಂದು ಅಲೋಕ್‌ ಕುಮಾರ್‌ ತಿಳಿಸಿದರು.

ರಾಜ್ಯದಲ್ಲಿ ಕಟ್ಟೆಚ್ಚರ: ಸಿ.ಎಂ ಸೂಚನೆ

ಬೆಂಗಳೂರು: ರಾಜ್ಯದ ಎಲ್ಲ ಸೂಕ್ಷ್ಮ ಪ್ರದೇಶಗಳಲ್ಲಿ ಕಟ್ಟೆಚ್ಚರ ವಹಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪೊಲೀಸ್‌ ಮಹಾನಿರ್ದೇಶಕ ಪ್ರವೀಣ್‌ ಸೂದ್‌ಗೆ ಸೂಚಿಸಿದ್ದಾರೆ.

ಮಂಗಳೂರಿನ ಸ್ಫೋಟ ಪ್ರಕರಣದ ಬಳಿಕ ಮುಖ್ಯಮಂತ್ರಿ ಅವರನ್ನು ಸೂದ್‌ ಭೇಟಿ ಮಾಡಿ ಪ್ರಕರಣದ ಮಾಹಿತಿ ನೀಡಿದರು.

‘ಕೊಡಗು, ಉತ್ತರ ಕನ್ನಡ, ಹುಬ್ಬಳ್ಳಿ, ಶಿವಮೊಗ್ಗ, ಮೈಸೂರು, ಬೆಳಗಾವಿ ಜಿಲ್ಲೆಯ ಸೂಕ್ಷ್ಮ ಹಾಗೂ ಅತಿಸೂಕ್ಷ್ಮ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಕಲ್ಪಿಸಬೇಕು. ಶಂಕಿತ ವ್ಯಕ್ತಿಗಳ ವಿಚಾರಣೆ ನಡೆಸಬೇಕು. ರಾಜ್ಯದ ಗಡಿಗಳಲ್ಲಿ ನಿಗಾವಹಿಸಬೇಕು’ ಎಂದು ಕಾನೂನು ಸುವ್ಯವಸ್ಥೆ ವಿಭಾಗ, ಆಂತರಿಕಾ ಭದ್ರತಾ ವಿಭಾಗಕ್ಕೆ ಮುಖ್ಯಮಂತ್ರಿ ಸೂಚಿಸಿದರು.

‘ರಾಜಧಾನಿಯಲ್ಲೂ ಭದ್ರತೆ ಹೆಚ್ಚಿಸಬೇಕು. ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಸೇರಿದಂತೆ ರಾಜ್ಯದ ಎಲ್ಲ ವಿಮಾನ ನಿಲ್ದಾಣಗಳಲ್ಲೂ ತೀವ್ರ ನಿಗಾ ವಹಿಸಬೇಕು. ಭದ್ರತೆಯಲ್ಲಿ ಲೋಪವಾದರೆ ಹಿರಿಯ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು’ ಎಂದು ಬೊಮ್ಮಾಯಿ ಎಚ್ಚರಿಕೆ ನೀಡಿದರು.

‘ವಿಧಾನಸಭೆ ಚುನಾವಣೆಗೆ ಕೆಲವೇ ತಿಂಗಳು ಬಾಕಿಯಿದ್ದು ದುಷ್ಕರ್ಮಿಗಳು ದುಷ್ಕೃತ್ಯ ಎಸಗುವ ಸಾಧ್ಯತೆ ಇರುತ್ತದೆ. ಅದಕ್ಕೆ ಅವಕಾಶ ನೀಡಬಾರದು’ ಎಂದೂ ಸೂಚಿಸಿದರು.

ಗೋಡೆ ಬರೆಹದ ಆರೋಪಿಗೂ ಕೃತ್ಯಕ್ಕೂ ನಂಟು?

ಮಂಗಳೂರು ನಗರದಲ್ಲಿ 2020ರ ನವೆಂಬರ್‌ನಲ್ಲಿ ಲಷ್ಕರ್‌ ಎ ತಯ್ಯಬಾ ಹಾಗೂ ತಾಲಿಬಾನ್‌ ಪರವಾಗಿ ಗೋಡೆ ಬರಹ ಪ್ರಕರಣದಲ್ಲಿ ಬಂಧಿತನಾಗಿದ್ದ ವ್ಯಕ್ತಿಯೇ ಈ ಕೃತ್ಯದ ಆರೋಪಿಯಾಗಿರಬಹುದು ಎಂಬ ಬಲವಾದ ಸಂಶಯ ಪೊಲೀಸರನ್ನು ಕಾಡುತ್ತಿದೆ.

‘ಗೋಡೆ ಬರಹ ಪ್ರಕರಣದಲ್ಲಿ ಅಬ್ದುಲ್‌ ಮತೀನ್‌, ಶಾರಿಕ್‌, ಮಾಜ್‌ ಮುನೀರ್‌ ಅಹಮದ್‌ ಎಂಬ ಮೂವರು ಆರೋಪಿಗಳಿದ್ದಾರೆ. ಸ್ಫೋಟಕ್ಕೆ ಸಂಚುರೂಪಿಸಿದ ಪ್ರಕರಣದಲ್ಲಿ ಮಾಜ್‌ ಮುನೀರ್‌ ಅಹಮದ್‌ನನ್ನು ಇತ್ತೀಚೆಗೆ ಶಿವಮೊಗ್ಗ ಪೊಲೀಸರು ಬಂಧಿಸಿದ್ದರು. ಆತನ ವಿರುದ್ಧ ಕಾನೂನುಬಾಹಿರ ಚಟುವಟಿಕೆ ತಡೆ ಕಾಯ್ದೆ (ಯುಎಪಿಎ) ಅಡಿ ಪ್ರಕರಣ ದಾಖಲಾಗಿದ್ದು ಬಂಧನದಲ್ಲಿದ್ದಾನೆ. ಅಬ್ದುಲ್‌ ಮತೀನ್‌ ಮೇಲೆ ಸುದ್ದಗುಂಟೆಪಾಳ್ಯದಲ್ಲಿ ತಮಿಳುನಾಡಿನಲ್ಲಿ ಪ್ರಕರಣ ದಾಖಲಾಗಿದೆ. ಇನ್ನೊಬ್ಬ ಆರೋಪಿಯು ಶಾರಿಕ್‌ ಹೌದೋ ಅಲ್ಲವೋ ಎಂಬುದನ್ನು ಆತನ ಬಂಧುಗಳು ಖಚಿತಪಡಿಸಿದ ಬಳಿಕವಷ್ಟೇ ಸ್ಪಷ್ಟವಾಗಿ ಹೇಳಬಹುದು’ ಎಂದು ಅಲೋಕ್‌ ಕುಮಾರ್‌ ತಿಳಿಸಿದರು.

ಮೈಸೂರಿನಲ್ಲಿ ಮನೆ ಬಾಡಿಗೆಗೆ ಪಡೆದಿದ್ದ ಶಂಕಿತ ಆರೋಪಿ

ಮೈಸೂರು:ಮಂಗಳೂರಿನಗರೋಡಿಯಲ್ಲಿ ಕುಕ್ಕರ್‌ ಬಾಂಬ್‌ ಸ್ಫೋಟ ಪ್ರಕರಣದ ಶಂಕಿತ ಆರೋಪಿಯು ಮೇಟಗಳ್ಳಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನೆಲೆಸಿದ್ದನು.

‘ಆರೋಪಿ ಲೋಕನಾಯಕ‌ ನಗರದ 10ನೇ ಕ್ರಾಸ್‌ನಲ್ಲಿ ಮನೆಯನ್ನು ಬಾಡಿಗೆಗೆ ಪಡೆದಿದ್ದ. ಆ ಮನೆ ಮೇಲೆ ದಾಳಿ ನಡೆಸಿ ಮಾಹಿತಿ ಕಲೆ ಹಾಕಲಾಗಿದೆ. ಆತ ಬಾಡಿಗೆಗಿದ್ದುದ್ದನ್ನು ಮನೆ ಮಾಲೀಕ ಮೋಹನ್‌ಕುಮಾರ್‌ ಖಚಿತಪಡಿಸಿದ್ದಾರೆ’ ಎಂದು ಪೊಲೀಸ್ ಅಧಿಕಾರಿ ಮಾಹಿತಿ‌ ನೀಡಿದರು.

ಆರೋಪಿಯು ಹುಬ್ಬಳ್ಳಿಯ ಮಾರುತಿ ಪುತ್ರ ಪ್ರೇಮರಾಜ ಎಂದು ವಿಳಾಸ ನೀಡಿದ್ದ ಎಂದು ಗೊತ್ತಾಗಿದೆ. ಕೊಠಡಿಯಲ್ಲಿ ತನಿಖಾ ತಂಡ ಪರಿಶೀಲಿಸಿದಾಗ, ಸರ್ಕಿಟ್ ಬೋರ್ಡ್, ಸ್ಮಾಲ್ ಬೋಲ್ಟ್, ಬ್ಯಾಟರಿ, ಮರದ ಪೌಡರ್, ಅಲ್ಯೂಮಿನಿಯಂ, ಮಲ್ಟಿಮೀಟರ್, ವೈರ್, ಪ್ರೆಷರ್ ಕುಕ್ಕರ್, ಮೊಬೈಲ್ ಫೋನ್, 2 ನಕಲಿ ಆಧಾರ್ ಕಾರ್ಡ್, ಒಂದು ನಕಲಿ ಪ್ಯಾನ್ ಕಾರ್ಡ್, ಡೆಬಿಟ್ ಕಾರ್ಡ್ ಸಿಕ್ಕಿವೆ. ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞರು, ಶ್ವಾನದಳದಿಂದಲೂ ಪರಿಶೀಲನೆ ನಡೆದಿದೆ ಎಂದು ಮೂಲಗಳು ಹೇಳಿವೆ.

ಆತ ಅಗ್ರಹಾರದಲ್ಲಿರುವ ಮೊಬೈಲ್ ಅಂಗಡಿಯಲ್ಲಿ ಕೆಲ ತಿಂಗಳವರೆಗೆ ಮೊಬೈಲ್ ಫೋನ್ ರಿಪೇರಿ ತರಬೇತಿ ಪಡೆದಿದ್ದ ಎನ್ನಲಾಗಿದ್ದು, ಅಲ್ಲಿಯೂ ಪೊಲೀಸರು ಪರಿಶೀಲನೆ ನಡೆಸಿದರು.

ಮಂಗಳೂರಿನಲ್ಲಿ ಸ್ಫೋಟಿಸಿದ ಕುಕ್ಕರ್ ಬಾಂಬ್ ಅನ್ನು ಮೈಸೂರಿನಿಂದ ಬಸ್‌ನಲ್ಲಿ ತೆಗೆದುಕೊಂಡು ಹೋಗಲಾಗಿತ್ತು ಎಂದು ತಿಳಿದುಬಂದಿದೆ.

ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ಅವರು ಆರೋಪಿಯ ಮನೆಗೆ ತೆರಳಿ ಪರಿಶೀಲನೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT