ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಡವರ 3–ಎ ಮೀಸಲು ಸೌಲಭ್ಯ: ಅಡ್ಡಿ ನಿವಾರಿಸಿದ ಹೈಕೋರ್ಟ್‌

Last Updated 14 ಡಿಸೆಂಬರ್ 2021, 19:13 IST
ಅಕ್ಷರ ಗಾತ್ರ

ಬೆಂಗಳೂರು: ‘ಕೊಡವ‘ ಜನಾಂಗವನ್ನು ‘ಕೊಡವ’ರು ಎಂದು ಗುರುತಿಸದೆ ‘ಕೊಡಗ’ ಎಂಬ ತಪ್ಪು ಪದ ಬಳಸಿದ್ದ ಕಾರಣಕಾನೂನು ರೀತ್ಯಾ ದೊರಕಬೇಕಿದ್ದ ಮೀಸಲಾತಿಯ ಕೆಟಗರಿ 3–ಎ ಸೌಲಭ್ಯಗಳನ್ನು ಪಡೆಯಲು ಕೊಡವ ಸಮುದಾಯ ನಡೆಸುತ್ತಿದ್ದ ಕಾನೂನು ಸಮರಕ್ಕೆ ಹೈಕೋರ್ಟ್ ತೆರೆ ಎಳೆದಿದೆ.

ಈ ಸಂಬಂಧ ‘ಕೊಡವ ನ್ಯಾಷನಲ್‌ ಕೌನ್ಸಿಲ್‌’ ಪ್ರತಿನಿಧಿ ಎನ್‌.ಯು.ನಾಚಪ್ಪ ಸಲ್ಲಿಸಿದ್ದ ರಿಟ್‌ ಅರ್ಜಿಯನ್ನು ನ್ಯಾಯಮೂರ್ತಿ ಕೃಷ್ಣ ಎಸ್‌.ದೀಕ್ಷಿತ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಾನ್ಯ ಮಾಡಿದ್ದು, ಕೊಡವ ಪದಕ್ಕೆ ಎರಡು ದಶಕಗಳಿಂದ ಇದ್ದ ಅಡ್ಡಿಯನ್ನು ನಿವಾರಣೆ ಮಾಡಿದೆ.

‘ಅರ್ಜಿದಾರರ ಮನವಿಗೆ ಸಂಬಂಧಿಸಿದಂತೆ 2005ರಲ್ಲಿ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಸಿದ್ದಗಂಗಯ್ಯನವರ ಮಧ್ಯಂತರ ವರದಿ ಹಾಗೂ 2010ರಲ್ಲಿ ಡಾ.ಸಿ.ಎಸ್‌.ದ್ವಾರಕನಾಥ್‌ ಅವರ ವಿಶೇಷ ವರದಿ ಅನುಸಾರ ಹಿಂದುಳಿದ ಜಾತಿಗೆ ಸಂಬಂಧಿಸಿದಂತೆ ನೀಡಲಾದ ಶಿಫಾರಸಿನ ಅನ್ವಯ ಸರ್ಕಾರ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಮತ್ತು ತೆಗೆದುಕೊಂಡ ಕ್ರಮದ ಬಗ್ಗೆಹೈಕೋರ್ಟ್‌ ರಿಜಿಸ್ಟ್ರಾರ್‌ ಜನರಲ್‌ ಅವರಿಗೆ ವರದಿ ಮಾಡಬೇಕು. ಒಂದು ವೇಳೆ ತೀರ್ಪಿನ ಜಾರಿಗೆ ವಿಳಂಬ ಮಾಡಿದಲ್ಲಿ ಸಂಬಂಧಿಸಿದ ಅಧಿಕಾರಿ ವರ್ಗ ಭಾರಿ ಜುಲ್ಮಾನೆ ತೆರಲು ಸಿದ್ಧವಿರಬೇಕಾಗುತ್ತದೆ’ ಎಂದು ನ್ಯಾಯಪೀಠ ಖಡಕ್‌ ಎಚ್ಚರಿಕೆನೀಡಿದೆ.

‘ಆಯೋಗದ ಶಿಫಾರಸು ಸಕ್ಷಮ ಪ್ರಾಧಿಕಾರದಲ್ಲಿ ಅನುಮೋದನೆ ಆಗದೆ ಇರುವುದರಿಂದ ಶಿಫಾರಸು ಜಾರಿಗೆ ಮುಂದಾಗಿಲ್ಲ ಎಂಬ ಸರ್ಕಾರದ ಸಮರ್ಥನೆಅಧಿಕಾರಿಗಳ ಅಸೀಮ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ. ಕೊಡವರು ಕನ್ನಡ ನಾಡಿನ ಶೌರ್ಯವಂತ ಹಾಗೂ ವಿಶಿಷ್ಟ ಸಂಸ್ಕೃತಿಯುಳ್ಳ ಸಮುದಾಯದ ಪ್ರತೀಕ. ದೇಶದ ಸೇನೆ ಮತ್ತು ನಾಡಿನ ಸಂಸ್ಕೃತಿಗೆ ಇವರ ಕೊಡುಗೆ ಅಪಾರ. ಇದನ್ನು ಗುರುತಿಸುವಲ್ಲಿ ಜಡ್ಡುಗಟ್ಟಿದ ಅಧಿಕಾರ ವರ್ಗ ಎಡವಿದೆ’ ಎಂದು ನ್ಯಾಯಪೀಠವು ತನ್ನ ತೀರ್ಪಿನಲ್ಲಿ ಉಲ್ಲೇಖಿಸಿದೆ. ಅರ್ಜಿದಾರರ ಪರ ವಕೀಲ ಬಿ.ಎ.ಬೆಳ್ಳಿಯಪ್ಪ ವಾದ ಮಂಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT