ಸೋಮವಾರ, ಏಪ್ರಿಲ್ 12, 2021
25 °C
ಇನ್‌ಸ್ಪೆಕ್ಟರ್‌ ವಿಕ್ಟರ್‌ ಸೈಮನ್‌ ಕಾರಿನಲ್ಲಿ ದೂರಿನ ಕರಡು, ನಗದು ಪತ್ತೆ

ಬಿಎಂಟಿಎಫ್‌ ಹೆಸರಿನಲ್ಲಿ ಬಿಲ್ಡರ್‌ಗಳ ಸುಲಿಗೆ?

ವಿ.ಎಸ್‌. ಸುಬ್ರಹ್ಮಣ್ಯ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಬಂಧಿಸಿರುವ ಬೆಂಗಳೂರು ಮಹಾನಗರ ಕಾರ್ಯಪಡೆ (ಬಿಎಂಟಿಎಫ್‌) ಪೊಲೀಸ್ ಇನ್‌ಸ್ಪೆಕ್ಟರ್‌ ವಿಕ್ಟರ್‌ ಸೈಮನ್‌ ಕಾರಿನಲ್ಲಿ ನಗರದ ಪ್ರಮುಖ ಬಿಲ್ಡರ್‌ಗಳ ವಿರುದ್ಧದ ದೂರಿನ ಪ್ರತಿಗಳು ಮತ್ತು ₹ 2.5 ಲಕ್ಷ ನಗದು ಪತ್ತೆಯಾಗಿದೆ. ಬಿಎಂಟಿಎಫ್‌ ಮೂಲಕವೇ ಬಿಲ್ಡರ್‌ಗಳ ಸುಲಿಗೆ ನಡೆಯುತ್ತಿರುವ ಶಂಕೆ ಮೇಲೆ ಎಸಿಬಿ ತನಿಖೆ ಮುಂದುವರಿಸಿದೆ.

ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಆರೋಪದ ಮೇಲೆ ವಿಕ್ಟರ್‌ ಸೇರಿದಂತೆ ಒಂಬತ್ತು ಸರ್ಕಾರಿ ಅಧಿಕಾರಿಗಳ ಮೇಲೆ ಮಂಗಳವಾರ ಎಸಿಬಿ ದಾಳಿ ನಡೆಸಿತ್ತು. ಶೋಧದ ವೇಳೆ ವಿಕ್ಟರ್‌ ಕಾರಿನಲ್ಲಿ ಬಿಲ್ಡರ್‌ಗಳ ವಿರುದ್ಧ ಬಿಎಂಟಿಎಫ್‌ ಹೆಸರಿಗೆ ಸಲ್ಲಿಕೆಯಾಗಿದ್ದ ಏಳು ದೂರಿನ ಪ್ರತಿಗಳು ಪತ್ತೆಯಾಗಿವೆ. ದೂರಿನಲ್ಲಿ ಹೆಸರಿಸಿರುವ ಬಿಲ್ಡರ್‌ಗಳು, ದೂರುದಾರರು ಎಂದು ಉಲ್ಲೇಖಿಸಿರುವ ವ್ಯಕ್ತಿಗಳ ಹೆಸರುಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಎಸಿಬಿಯ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ಇದನ್ನೂ ಓದಿ... ಅಕ್ರಮ ಆಸ್ತಿ ಪ್ರಕರಣ ತನಿಖೆಗೆ ಅಸಹಕಾರ: ಇನ್‌ಸ್ಪೆಕ್ಟರ್‌ ವಿಕ್ಟರ್‌ ಸೈಮನ್‌ ಬಂಧನ

ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳು, ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕು ಹಾಗೂ ಬೆಂಗಳೂರು– ಮೈಸೂರು ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್‌ (ಬಿಎಂಐಸಿ) ಯೋಜನಾ ಪ್ರದೇಶದಲ್ಲಿರುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ), ಬಿಬಿಎಂಪಿ, ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ ಆಸ್ತಿಗಳು, ಬೆಂಗಳೂರು ಮಹಾನಗರ ಪ್ರದೇಶದ ಕೆರೆಗಳು, ಕೊಳೆಗೇರಿ ಅಭಿವೃದ್ಧಿ ಮಂಡಳಿ ಮತ್ತು ಬೆಂಗಳೂರು ಜಲಮಂಡಳಿಗೆ ಸೇರಿದ ಸರ್ಕಾರಿ ಜಮೀನುಗಳನ್ನು ಸಂರಕ್ಷಿಸುವ ಜವಾಬ್ಧಾರಿಯನ್ನು ಬಿಎಂಟಿಎಫ್‌ ಹೊಂದಿದೆ.

‘ಸರ್ಕಾರಿ ಜಮೀನುಗಳನ್ನು ಒತ್ತುವರಿ ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಬಿಲ್ಡರ್‌ಗಳ ವಿರುದ್ಧ ಸಿದ್ಧಪಡಿಸಿರುವ ದೂರಿನ ಪ್ರತಿಗಳು ವಿಕ್ಟರ್‌ ಸೈಮನ್‌ ಕಾರಿನಲ್ಲಿದ್ದವು. ಆ ದೂರುಗಳನ್ನು ತೋರಿಸಿ, ಬಿಲ್ಡರ್‌ಗಳನ್ನು ಬೆದರಿಸಿ ಹಣ ವಸೂಲಿ ಮಾಡುತ್ತಿರುವ ಶಂಕೆ ಇದೆ. ಈ ದೂರುಗಳು ಅಧಿಕೃತವಾಗಿ ಬಿಎಂಟಿಎಫ್‌ನಲ್ಲಿ ದಾಖಲಾಗಿದ್ದವೇ ಎಂಬುದನ್ನು ಪರಿಶೀಲಿಸಲು ನಿರ್ಧರಿಸಲಾಗಿದೆ. ಕಾರಿನಲ್ಲಿ ದೊರೆತ ಹಣದ ಮೂಲದ ಬಗ್ಗೆಯೂ ಇನ್‌ಸ್ಪೆಕ್ಟರ್‌ ಯಾವುದೇ ಮಾಹಿತಿ ನೀಡುತ್ತಿಲ್ಲ’ ಎಂದು ಎಸಿಬಿ ಮೂಲಗಳು ಹೇಳಿವೆ.

ಮನೆ ನಿರ್ಮಾಣಕ್ಕೆ ₹ 5.5 ಕೋಟಿ: ವಿಕ್ಟರ್‌ ಮನೆ ನಿರ್ಮಾಣಕ್ಕೆ ₹ 5.5 ಕೋಟಿ ಮೊತ್ತದ ವಿವಿಧ ಸಾಮಗ್ರಿಗಳನ್ನು ಖರೀದಿ ಮಾಡಿರುವುದಕ್ಕೆ ಸಂಬಂಧಿಸಿದ ದಾಖಲೆಗಳು ಎಸಿಬಿ ಶೋಧದ ವೇಳೆ ಪತ್ತೆಯಾಗಿವೆ. ಈ ಕುರಿತು ಪ್ರಶ್ನಿಸಿದಾಗ ಆರೋಪಿ ಅಧಿಕಾರಿ ಹೆಚ್ಚಿನ ಮಾಹಿತಿ ನೀಡಿಲ್ಲ. ಮೌಲ್ಯಮಾಪಕರ ಮೂಲಕ ಕಟ್ಟಡದ ಮೌಲ್ಯಮಾಪನ ನಡೆಸಲು ತನಿಖಾ ತಂಡ ಸಿದ್ಧತೆ ನಡೆಸಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಮುಂದುವರಿದ ಅಸಹಕಾರ: ತನಿಖೆಗೆ ಅಸಹಕಾರ ತೋರಿದ ಕಾರಣದಿಂದ ವಿಕ್ಟರ್‌ ಅವರನ್ನು ಬುಧವಾರ ಬೆಳಿಗ್ಗೆ ಎಸಿಬಿ ಅಧಿಕಾರಿಗಳು ಬಂಧಿಸಿದ್ದರು. ಪ್ರಕರಣದ ತನಿಖಾಧಿಕಾರಿಯಾಗಿರುವ ಡಿವೈಎಸ್‌ಪಿ ವಜೀರ್‌ ಅಲಿ ಖಾನ್‌ ನೇತೃತ್ವದ ತಂಡ ವಿಚಾರಣೆ ನಡೆಸುತ್ತಿದೆ. ಆದರೆ, ಬಂಧನದ ಬಳಿಕವೂ ಇನ್‌ಸ್ಪೆಕ್ಟರ್‌ ತನಿಖೆಗೆ ಸಹಕಾರ ನೀಡುತ್ತಿಲ್ಲ ಎಂದು ಎಸಿಬಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ಐ.ಟಿ, ಇ.ಡಿಗೂ ಮಾಹಿತಿ ರವಾನೆ
ಮಂಗಳವಾರ ಒಂಬತ್ತು ಅಧಿಕಾರಿಗಳ ಮೇಲೆ ಎಸಿಬಿ ದಾಳಿ ನಡೆದಿತ್ತು. ಈ ಪೈಕಿ ಮೈಸೂರಿನ ನಗರ ಮತ್ತು ಗ್ರಾಮಾಂತರ ಯೋಜನೆ ಉಪ ನಿರ್ದೇಶಕ ಸುಬ್ರಮಣ್ಯ ಕೆ. ವಡ್ಡರ್‌ ಮತ್ತು  ಮೈಸೂರು ದಕ್ಷಿಣ ಪ್ರಾದೇಶಿಕ ಸಾರಿಗೆ ಆಯುಕ್ತರ ಕಚೇರಿಯ ಪ್ರಥಮ ದರ್ಜೆ ಸಹಾಯಕ ಚನ್ನವೀರಪ್ಪ ಹೊರತಾಗಿ ಏಳು ಆರೋಪಿಗಳ ಬಳಿ ₹ 1 ಕೋಟಿಗಿಂತ ಹೆಚ್ಚಿನ ಅಕ್ರಮ ಆಸ್ತಿ ಪತ್ತೆಯಾಗಿದೆ. ಈ ಎಲ್ಲರ ವಿವರಗಳನ್ನೂ ಆದಾಯ ತೆರಿಗೆ ಇಲಾಖೆ ಮತ್ತು ಜಾರಿ ನಿರ್ದೇಶನಾಲಯದ ಜತೆ ಹಂಚಿಕೊಳ್ಳಲು ಎಸಿಬಿ ನಿರ್ಧರಿಸಿದೆ. ಸಂಸ್ಥೆಯ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ ಸೀಮಂತ್‌ ಕುಮಾರ್‌ ಸಿಂಗ್‌ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು