ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂವಾದ: ಸರ್ಕಾರದ ಆಡಳಿತದಲ್ಲಿ ರಾಜ್ಯಪಾಲರ ನೇರ ಹಸ್ತಕ್ಷೇಪ ಎಷ್ಟು ಸರಿ?

ಇದು ಕೆಟ್ಟ ಪರಂಪರೆಗೆ ನಾಂದಿ: ಪ್ರೊ. ರವಿವರ್ಮ ಕುಮಾರ್, ಎಲ್‌. ಹನುಮಂತಯ್ಯ ಪ್ರತಿಪಾದನೆ
Last Updated 26 ಏಪ್ರಿಲ್ 2021, 19:10 IST
ಅಕ್ಷರ ಗಾತ್ರ

ಬೆಂಗಳೂರು: ‘ಸರ್ವಪಕ್ಷ ಸಭೆ ಕರೆಯುವ ಸಂವಿಧಾನಾತ್ಮಕ ಅಧಿಕಾರ ರಾಜ್ಯಪಾಲರಿಗೆ ಇಲ್ಲ. ರಾಜ್ಯಪಾಲರ ಈ ನಡೆ, ಒಕ್ಕೂಟ ವ್ಯವಸ್ಥೆಗೇ ಧಕ್ಕೆ’ ಎಂದು ರಾಜ್ಯ ಸರ್ಕಾರದ ಮಾಜಿ ಅಡ್ವೊಕೇಟ್‌ ಜನರಲ್‌ ಪ್ರೊ.ರವಿವರ್ಮ ಕುಮಾರ್ ಅಭಿಪ್ರಾಯಪಟ್ಟರೆ, ‘ಇದು ಕೆಟ್ಟ ಪರಂಪರೆಗೆ ನಾಂದಿ’ ಎನ್ನುತ್ತಾರೆ ರಾಜ್ಯಸಭೆ ಕಾಂಗ್ರೆಸ್‌ ಸದಸ್ಯ ಎಲ್‌. ಹನುಮಂತಯ್ಯ.

‘ಸರ್ಕಾರದ ಮುಖ್ಯಸ್ಥರಾಗಿ, ಮುಖ್ಯಮಂತ್ರಿ ಸಲಹೆಯಂತೆ ರಾಜ್ಯಪಾಲರು ಸಭೆ ಕರೆದಿದ್ದಾರೆ. ಎಲ್ಲರನ್ನೂ ಆಹ್ವಾನಿಸಿ ಸಮಾಲೋಚಿಸಿದ್ದಾರೆಯೇ ಹೊರತು, ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ. ಸಭೆ ಕರೆಯಬಾರದೆಂದು ಸಂವಿಧಾನ ಎಲ್ಲಿ ಹೇಳಿದೆ’ ಎನ್ನುವ ಪ್ರಶ್ನೆ ಬಿಜೆಪಿ ಪ್ರಧಾನ ಕಾರ್ಯದರ್ಶಿ, ವಿಧಾನಪರಿಷತ್ತಿನ ಸದಸ್ಯ ಎನ್‌. ರವಿಕುಮಾರ್‌ ಅವರದ್ದು.

‘ಸರ್ಕಾರದ ಆಡಳಿತದಲ್ಲಿ ರಾಜ್ಯಪಾಲರ ನೇರ ಹಸ್ತಕ್ಷೇಪ ಎಷ್ಟು ಸರಿ?’ ವಿಷಯದ ಕುರಿತು ‘ಪ್ರಜಾವಾಣಿ’ಯ ಫೇಸ್‌ಬುಕ್‌ ನೇರ ಸಂವಾದದಲ್ಲಿ ಭಾಗವಹಿಸಿ ಈ ಮೂವರೂ ತಮ್ಮ ನಿಲುವುಗಳನ್ನು ಪ್ರತಿಪಾದಿಸಿದರು.

***

ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರದ ರಾಯಭಾರಿಯಾಗಿ ರಾಜ್ಯಪಾಲರು ಕೆಲಸ ಮಾಡುತ್ತಾರೆ. ಅವರಿಗೆ ಸಚಿವ ಸಂಪುಟ ಸಲಹೆ ಕೊಡಬೇಕೇ ಹೊರತು, ಸಚಿವ ಸಂಪುಟಕ್ಕೆ ಅವರು ಸಲಹೆ ಕೊಡಬಾರದು. ಸಂವಿಧಾನದಲ್ಲಿ ರಾಜ್ಯಪಾಲರಿಗೆ ಸ್ವಂತ ವಿವೇಚನಾ ಅಧಿಕಾರ ಇಲ್ಲ. ಚುನಾವಣಾ ಇಲ್ಲದೆ, ನೇರ ನೇಮಕವಾಗುವ ರಾಜ್ಯಪಾಲರ ಕಾರ್ಯವ್ಯಾಪ್ತಿ ಬಗ್ಗೆ ಸಂವಿಧಾನದಲ್ಲಿ ಸ್ಪಷ್ಟವಾಗಿದೆ. ಈ ಬಗ್ಗೆ ನ್ಯಾಯಾಲಯಗಳಲ್ಲಿಯೂ ಹಲವು ಬಾರಿ ಚರ್ಚೆ ನಡೆದಿದೆ. ಸ್ವಂತ ವಿವೇಚನೆಯಿಂದ ಅಧಿಕಾರ ಚಲಾಯಿಸಲು ರಾಜ್ಯಪಾಲರಿಗೆ ಅವಕಾಶ ಇಲ್ಲ. ಹಣಕಾಸಿಗೆ ಸಂಬಂಧಿಸಿದ್ದು ಹೊರತುಪಡಿಸಿ, ಸಂಪುಟ ಸಭೆ ತೀರ್ಮಾನ ಸಂವಿಧಾನಕ್ಕೆ ವಿರುದ್ಧವಾಗಿದ್ದರೆ ಅದನ್ನು ಸರ್ಕಾರಕ್ಕೆ ವಾಪಸು ಕಳುಹಿಸಬಹುದು.

ಜೊತೆಗೆ, ರಾಜ್ಯದಲ್ಲಿ ಸನ್ನಿವೇಶ ಬಿಗಡಾಯಿಸಿದರೆ, ಸಾಂವಿಧಾನಿಕ ಬಿಕ್ಕಟ್ಟು ಉಲ್ಬಣಗೊಂಡರೆ ಮುಖ್ಯಮಂತ್ರಿಯಿಂದ ವರದಿ ತರಿಸಿಕೊಳ್ಳಬಹುದು. ಸಚಿವರೊಬ್ಬರು ತೀರ್ಮಾನ ತೆಗೆದುಕೊಂಡು ಒಪ್ಪಿಗೆಗೆ ಕಳುಹಿಸಿದಾಗ, ‘ಒಬ್ಬರೇ ತೀರ್ಮಾನ ತೆಗೆದುಕೊಳ್ಳುವುದು ಉಚಿತವಲ್ಲ, ಸಂಪುಟ ಸಭೆಯಲ್ಲಿ ತೀರ್ಮಾನಿಸಿ’ ಎಂದು ಕಡತ ವಾಪಸ್‌ ಕಳುಹಿಸಬಹುದು. ಹೀಗೆ ರಾಜ್ಯಪಾಲರ ಕಾರ್ಯಕ್ಷೇತ್ರ ಸಂವಿಧಾನದಡಿ ಸೀಮಿತ. ಮುಖ್ಯಮಂತ್ರಿ ಆಸ್ಪತ್ರೆಯಲ್ಲಿದ್ದರೂ, ವಿದೇಶದಲ್ಲಿದ್ದರೂ, ಎಲ್ಲೇ ಇದ್ದರೂ ಮುಖ್ಯಮಂತ್ರಿಯಾಗಿಯೇ ಇರುತ್ತಾರೆ. ರಾಜ್ಯಪಾಲರು ಆ ಜಾಗಕ್ಕೆ ಬರಲು ಅವಕಾಶ ಇಲ್ಲ. ಇತ್ತೀಚೆಗೆ ರಾಜ್ಯಪಾಲರ ಹುದ್ದೆ ಒಕ್ಕೂಟ ವ್ಯವಸ್ಥೆಗೆ ಮಾರಕವಾಗುತ್ತಿದೆ. ರಾಜ್ಯಪಾಲರು ಕೇಂದ್ರದ ಏಜೆಂಟ್‌ ಆಗುತ್ತಿದ್ದಾರೆ. ಕೇಂದ್ರ ಸರ್ಕಾರ ರಾಜ್ಯಪಾಲರ ಕಚೇರಿಯನ್ನು ಬಳಕೆ ಮಾಡುತ್ತಿದೆ. ಇದು ಸರಿಯಲ್ಲ. ರಾಜ್ಯಸರ್ಕಾರದ ನಿತ್ಯದ ಆಡಳಿತದಲ್ಲಿ ರಾಜ್ಯಪಾಲರು ಹಸ್ತಕ್ಷೇಪ ಮಾಡುವುದು ಪ್ರಜಾತಂತ್ರಕ್ಕೆ ಮಾರಕ, ಸಂವಿಧಾನಕ್ಕೆ ಅಪಚಾರ.
-ಪ್ರೊ. ರವಿವರ್ಮ ಕುಮಾರ್, ಮಾಜಿ ಅಡ್ವೊಕೇಟ್‌ ಜನರಲ್‌

***

ರಾಜ್ಯಪಾಲರು ಸಂವಿಧಾನದಡಿಯಲ್ಲಿ ಕಾರ್ಯಾಂಗ, ನ್ಯಾಯಾಂಗ, ಶಾಸಕಾಂಗವನ್ನು ನಿಯಂತ್ರಿಸುವ ಮುಖ್ಯಸ್ಥರು. ಉಸ್ತುವಾರಿ ಮಾಡುವವರು. ಆದರೆ, ಅವರಿಗೆ ಸ್ವತಂತ್ರವಾದ ವಿವೇಚನಾಧಿಕಾರ ಇಲ್ಲ. ಚುನಾಯಿತ ಸರ್ಕಾರ, ಮುಖ್ಯಮಂತ್ರಿ, ಸಚಿವ ಸಂಪುಟ ಇದ್ದಾಗ ರಾಜ್ಯದ ಆಡಳಿತದಲ್ಲಿ ಅಧಿ ಕಾರ ಚಲಾಯಿಸಲು ರಾಜ್ಯಪಾಲರಿಗೆ ಅವಕಾಶ ಇಲ್ಲ ಎನ್ನುವ ಅಂಶ ಸುಪ್ರೀಂ ಕೋರ್ಟ್‌ನ ಹಲವು ತೀರ್ಪುಗಳಲ್ಲಿ ಉಲ್ಲೇಖವಾಗಿದೆ. ಹೀಗಾಗಿ, ಅವರು ಸರ್ವಪಕ್ಷ ಸಬೆ ಕರೆದಿರುವುದು ಅಸಂವಿಧಾನಿಕ ನಡೆ. ಕೆಟ್ಟ ಪರಂಪರೆ. ಬೇರೆ ರಾಜ್ಯಗಳಿಗೂ ಮಾದರಿಯಾಗುತ್ತದೆ. ರಾಜ್ಯಪಾಲರು ಸಂವಿಧಾನದ ಅಧಿಕಾರಕ್ಕೆ ಪ್ರವೇಶಿಸಿರುವ ಸೂಚನೆಯಿದು. ಸಚಿವ ಸಂಪುಟದ ಅಧಿಕಾರವನ್ನು ರಾಜ್ಯಪಾಲರು ತೆಗೆದುಕೊಳ್ಳಲು ಅವಕಾಶ ಇಲ್ಲ.

ಸರ್ಕಾರ ಸಕ್ರಿಯವಾಗಿ ಕೆಲಸ ಮಾಡುತ್ತಿಲ್ಲ ಎಂದೆನಿಸಿದರೆ ಮುಖ್ಯಮಂತ್ರಿ ಮೂಲಕ ವರದಿ ತರಿಸಿಕೊಳ್ಳಬುದು. ಜನರ ಸಮಸ್ಯೆಗಳು ಸಮರ್ಪಕವಾಗಿ ನಿರ್ವಹಣೆ ಆಗದೇ ಇದ್ದಾಗ ಸಭೆ ಕರೆಯುವಂತೆ ಸರ್ಕಾರಕ್ಕೆ ಸಲಹೆ ನೀಡಬಹುದೇ ಹೊರತು, ಅವರೇ ಸಭೆ ಕರೆಯುವ ವಿವೇಚನಾಧಿಕಾರ ಇಲ್ಲ. ಮುಖ್ಯಮಂತ್ರಿಯನ್ನು ಕಡೆಗಣಿಸಿ ರಾಜ್ಯಪಾಲರು ವರ್ತಿಸಿದ ಅನುಮಾನವಿದೆ. ಕೇಂದ್ರದಲ್ಲಿ ತಮ್ಮದೇ ಸರ್ಕಾರ ಇದ್ದಾಗ ರಾಜ್ಯಪಾಲರ ವರ್ತನೆ ರಾಜಕೀಯ ನಡೆಯಂತೆ ಕಾಣುತ್ತದೆ. ಕೇಂದ್ರ ಮತ್ತು ರಾಜ್ಯದಲ್ಲಿ ಬೇರೆ ಬೇರೆ ಸರ್ಕಾರ ಇರುತ್ತಿದ್ದರೆ ಇದಕ್ಕೆ ಅವಕಾಶ ಆಗುತ್ತಿರಲಿಲ್ಲ. ಸಂವಿಧಾನ ಮೀರಿ ಅವರು ವಿವೇಚನಾಧಿಕಾರದಿಂದ ವರ್ತಿಸುವುದು ಸರಿಯಲ್ಲ. ರಾಜ್ಯಪಾಲರದ್ದು ಸರ್ಕಾರದ ಅಧಿಕಾರ ಕೈಗೆತ್ತಿಕೊಳ್ಳುವ ರಾಜಕೀಯ ನಡೆ. ಇದು ಕೆಟ್ಟ ಪರಂಪರೆಗೆ ನಾಂದಿ.
-ಎಲ್‌. ಹನುಮಂತಯ್ಯ, ರಾಜ್ಯಸಭೆ ಕಾಂಗ್ರೆಸ್‌ ಸದಸ್ಯ

‘ಸಮಾಲೋಚನೆ ನಡೆಸಿದರೇ ಹೊರತು,ತೀರ್ಮಾನ ತೆಗೆದುಕೊಂಡಿಲ್ಲ’
ರಾಜ್ಯಪಾಲರು ಸಭೆ ಕರೆದಿರುವುದೇ ತಪ್ಪು ಎನ್ನುವುದಕ್ಕಿಂತ ಯಾವ ಸಂದರ್ಭದಲ್ಲಿ, ಯಾವ ಉದ್ದೇಶದಿಂದ ಈ ಸಭೆ ಕರೆದರು ಎನ್ನುವುದೂ ಮುಖ್ಯ. ಕೊರೊನಾ ಸೋಂಕು ತಗಲಿ ಮುಖ್ಯಮಂತ್ರಿ ಆಸ್ಪತ್ರೆಯಲ್ಲಿ ಇದ್ದುದರಿಂದ ಅವರ ವಿನಂತಿಯಂತೆ ರಾಜ್ಯಪಾಲರು ಸಭೆ ನಡೆಸಿದರು. ಸಮಾಲೋಚನೆ ನಡೆಸಿದರೇ ಹೊರತು, ಯಾವುದೇ ತೀರ್ಮಾನಗಳನ್ನು ತೆಗೆದುಕೊಂಡಿಲ್ಲ. ಹೀಗಿರುವಾಗಿ, ಕೆಟ್ಟ ಪರಂಪರೆ ಹೇಗಾಗುತ್ತದೆ. ಅವರು ಪ್ರತಿಜ್ಞೆ ತೆಗೆದುಕೊಳ್ಳುವಾಗಲೇ ರಾಜ್ಯದ ಹಿತದೃಷ್ಟಿಯಿಂದ ತೀರ್ಮಾನಗಳನ್ನು ತೆಗೆದುಕೊಳ್ಳುವ ಅಧಿಕಾರ ನೀಡಲಾಗಿದೆ. ಅವರು ಸರ್ವಪಕ್ಷ ಸಭೆ ಕರೆಯಬಾರದು ಎಂದು ಸಂವಿಧಾನದಲ್ಲಿ ಎಲ್ಲಿದೆ.

ಸರ್ಕಾರ ಯಾವುದೇ ತೀರ್ಮಾನಗಳನ್ನು ತೆಗೆದುಕೊಂಡರೂ ಅಂತಿಮವಾಗಿ ರಾಜ್ಯಪಾಲರಿಗೇ ಹೋಗಬೇಕು. ಅವರೇ ಕಾರ್ಯಾಂಗದ ಮುಖ್ಯಸ್ಥ, ಅವರಿಗೆ ವಿವೇಚನಾ ಅಧಿಕಾರವಿದೆ. ಮೂವರು ಉಪ ಮುಖ್ಯಮಂತ್ರಿಗಳಿದ್ದಾಗ ಗೊಂದಲಕ್ಕೆ ಅವಕಾಶ ಆಗದಂತೆ ಸಂಪುಟ ಸದಸ್ಯರೆಲ್ಲರ ಒಮ್ಮತದ ತೀರ್ಮಾನದಂತೆ, ಕೋವಿಡ್‌ ಪರಿಸ್ಥಿತಿ ನಿಭಾಯಿಸಲು ಏನು ಮಾಡಬಹುದು ಎಂದು ರಾಜ್ಯಪಾಲರು ಸಮಾಲೋಚನೆ ನಡೆಸಿದ್ದಾರೆ. ಉದ್ದೇಶ ಈಡೇರುವುದು ಮುಖ್ಯವಾಗಬೇಕೇ ಹೊರತು, ಇದರಲ್ಲಿ ರಾಜಕೀಯ ಮಾಡಬಾರದು. ಕೋವಿಡ್‌ ಪರಿಸ್ಥಿತಿಯನ್ನು ಸರ್ಕಾರ ಸಮರ್ಥವಾಗಿ ನಿಭಾಯಿಸುತ್ತಿದೆ. ಹಿಂದೆ ಆಡಳಿತ ನಡೆಸಿದ ಸರ್ಕಾರಗಳು ಆರೋಗ್ಯ ವಲಯದಲ್ಲಿ ಮೂಲಸೌಲಭ್ಯ ಅಭಿವೃದ್ಧಿಗೆ ಒತ್ತು ನೀಡದಿರುವುದೇ ಇವತ್ತಿನ ಹೀನಾಯ ಸ್ಥಿತಿಗೆ ಕಾರಣ.
-ಎನ್‌. ರವಿಕುಮಾರ್‌,ಬಿಜೆಪಿ ಪ್ರಧಾನ ಕಾರ್ಯದರ್ಶಿ

ಪೂರ್ಣ ಸಂವಾದ ವೀಕ್ಷಿಸಿ–

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT