ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಚಿವರ ಮನವೊಲಿಕೆ ವಿಫಲ: ವಿಧಾನಸೌಧದತ್ತ ಹೊರಟ ಪಂಚಮಸಾಲಿ ಜನಸ್ತೋಮ

Last Updated 21 ಫೆಬ್ರುವರಿ 2021, 9:32 IST
ಅಕ್ಷರ ಗಾತ್ರ

ಬೆಂಗಳೂರು: ಹಿಂದುಳಿದ ವರ್ಗಗಳ 2ಎ ಪ್ರವರ್ಗದಡಿ ಮೀಸಲಾತಿ ನೀಡುವ ಪ್ರಸ್ತಾವ ಪರಿಶೀಲನೆಯಲ್ಲಿ ಇರುವುದರಿಂದ ಹೋರಾಟ ಕೈಬಿಡಬೇಕೆಂಬ ಸಚಿವರ ಮನವಿಗೆ ಪಂಚಮಸಾಲಿ ಜನರು ಮಣಿದಿಲ್ಲ. ಅರಮನೆ ಮೈದಾನದಲ್ಲಿ ಸಮಾವೇಶ ಅಂತ್ಯಗೊಂಡಿದ್ದು, ಧರಣಿ ಆರಂಭಿಸುವುದಕ್ಕಾಗಿ ವಿಧಾನಸೌಧದತ್ತ ತೆರಳಲು ಸಿದ್ಧರಾಗುತ್ತಿದ್ದಾರೆ.

ತಾತ್ಕಾಲಿಕವಾಗಿ ಹೋರಾಟ ಕೈಬಿಡುವಂತೆ ಸಚಿವರಾದ ಸಿ.ಸಿ. ಪಾಟೀಲ ಮತ್ತು ಮುರುಗೇಶ ನಿರಾಣಿ ಮನವಿ ಮಾಡಿದರು. ಈ ಕುರಿತು ಜನರನ್ನು ಮನವೊಲಿಸಲು ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಮತ್ತು ವಚನಾನಂದ ಸ್ವಾಮೀಜಿ ಪ್ರಯತ್ನಿಸಿದರು. ಆದರೆ, ಜನರು ತೀವ್ರ ವಿರೋಧ ವ್ಯಕ್ತಪಡಿಸಿದರು.

ಸಮಾವೇಶದ ಸ್ವಾಗತ ಸಮಿತಿಯ ಅಧ್ಯಕ್ಷರೂ ಆಗಿರುವ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರ ಅಭಿಪ್ರಾಯವನ್ನು ಸ್ವಾಮೀಜಿ ಕೋರಿದರು.‌ ಹಿಂದಿನ ಯೋಜನೆಯಂತೆ ಹೋರಾಟ ಮುಂದುವರಿಸಲೇಬೇಕು ಎಂದು ಯತ್ನಾಳ ಪಟ್ಟು ಹಿಡಿದರು. ಹೋರಾಟ ಸಮಿತಿ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ್ ಕೂಡ ದನಿಗೂಡಿಸಿದರು.

'ವಿಧಾನಸೌಧದವರೆಗೂ ಪಾದಯಾತ್ರೆಯಲ್ಲಿ ತೆರಳೋಣ. ಅಲ್ಲಿ ಧರಣಿ ಆರಂಭಿಸೋಣ. ಮಾರ್ಚ್ 4ರವರೆಗೂ ಧರಣಿ ಮಾಡೋಣ. ಅಲ್ಲಿಯವರೆಗೂ 2ಎ ಮೀಸಲಾತಿ ನೀಡದಿದ್ದರೆ ಆಮರಣಾಂತ ಉಪವಾಸ ಆರಂಭಿಸುತ್ತೇನೆ' ಎಂದು ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಪ್ರಕಟಿಸಿದರು.

ವಿಶ್ರಾಂತಿಗಾಗಿ ಕೆಲಕಾಲ ಬಿಡುವು ನೀಡಲಾಗಿದೆ. ಬಳಿಕ ವಿಧಾನಸೌಧದತ್ತ ಪಾದಯಾತ್ರೆ ಹೊರಡಲು ಸಿದ್ಧತೆ ಮಾಡಲಾಗುತ್ತಿದೆ. ವಿಧಾನಸೌಧದತ್ತ ಯಾರೂ ಹೋಗದಂತೆ ತಡೆಯಲು ಪೊಲೀಸರು ಸನ್ನದ್ಧರಾಗುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT