ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಬಡ್ತಿಗಾಗಿ ನಕಲಿ ಪದವಿ ಕರಾಮತ್ತು

ಉನ್ನತ ಹುದ್ದೆಯ 140 ಅಧಿಕಾರಿಗಳ ಪ್ರಮಾಣಪತ್ರದ ನೈಜತೆ ಪರಿಶೀಲನೆ
Last Updated 14 ಸೆಪ್ಟೆಂಬರ್ 2022, 20:30 IST
ಅಕ್ಷರ ಗಾತ್ರ

ಬೆಂಗಳೂರು: ಹೊರ ರಾಜ್ಯಗಳಲ್ಲಿ ಅಸ್ವಿತ್ವದಲ್ಲಿಯೇ ಇಲ್ಲದ ಮತ್ತು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಹೆಸರಿನಲ್ಲಿ ‘ನಕಲಿ’ ಪದವಿ ಪ್ರಮಾಣಪತ್ರ ಸಲ್ಲಿಸಿ ಮುಂಬಡ್ತಿ ಪಡೆಯಲು ಯತ್ನಿಸಿದ ಎಂಟು ಮಂದಿ ವಿರುದ್ಧ ಕಾನೂನು ಕ್ರಮ ಕೈಗೊಂಡ ಬೆನ್ನಲ್ಲೆ, ಈಗಾಗಲೇ ಉನ್ನತ ಹುದ್ದೆಗೆ ಬಡ್ತಿ ಪಡೆದಿರುವ 140 ಅಧಿಕಾರಿಗಳ ಪದವಿ ಪ್ರಮಾಣಪತ್ರಗಳ ನೈಜತೆ ಪರಿಶೀಲಿಸಲು ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯ ಮುಂದಾಗಿದೆ.

ಸಹಾಯಕ ಸಾಂಖ್ಯಿಕ ಅಧಿಕಾರಿ ಮತ್ತು ಸಹಾಯಕ ನಿರ್ದೇಶಕ ಹುದ್ದೆಗಳಿಗೆ ಮುಂಬಡ್ತಿ ಪಡೆಯಲು ನಕಲಿ ಪದವಿ ಪ್ರಮಾಣಪತ್ರ ಸಲ್ಲಿಸಿರುವ ಬಗ್ಗೆ ನಿರ್ದೇಶನಾಲಯಕ್ಕೆ ಮತ್ತು ಸರ್ಕಾರಕ್ಕೆ ಹಲವು ದೂರುಗಳು ಬಂದಿವೆ. ಹೀಗಾಗಿ, ಈ ಹುದ್ದೆಗಳಿಗೆ ಬಡ್ತಿ ಪಡೆದವರ ಪದವಿ ಅಂಕಪಟ್ಟಿಗಳ ನೈಜತೆಪತ್ತೆ ಹಚ್ಚಲು ನಿರ್ದೇಶನಾಲಯ ನಿರ್ಧರಿಸಿದೆ.

ಈ ಬಗ್ಗೆ ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ವಿ. ರಶ್ಮಿ ಮಹೇಶ್‌ ಅವರಿಗೆ ಪತ್ರ ಬರೆದಿರುವ ಯೋಜನೆ ಮತ್ತು ಸಾಂಖ್ಯಿಕ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌, 140 ಸಿಬ್ಬಂದಿ ಪೈಕಿ, ಎಂಟು ಹೊರ ರಾಜ್ಯಗಳಲ್ಲಿರುವ 16 ವಿಶ್ವವಿದ್ಯಾಲಯಗಳು, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಿಂದ 18, ಕರ್ನಾಟಕ ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳಿಂದ 114 ಮಂದಿ ಪದವಿ ಪ್ರಮಾಣಪತ್ರ ಸಲ್ಲಿಸಿದ್ದು, ಅವುಗಳ ನೈಜತೆ ಬಗ್ಗೆ ಮಾಹಿತಿ ನೀಡುವಂತೆ ಕೋರಿದ್ದಾರೆ.

ಈ ವಿಶ್ವವಿದ್ಯಾಲಯಗಳಿಗೆ ಆಯಾ ರಾಜ್ಯಗಳು ಅನುಮತಿ ನೀಡುವ ವೇಳೆ ಹೊರ ರಾಜ್ಯಗಳಲ್ಲಿ ಕೇಂದ್ರಗಳನ್ನು ತೆರೆದು ಪದವಿ ಪರೀಕ್ಷೆ ನಡೆಸಲು ಅನುಮತಿ ನೀಡಲಾಗಿದೆಯೇ, ಈ ವಿಶ್ವವಿದ್ಯಾಲಯಗಳಿಗೆ ದೂರ ಶಿಕ್ಷಣ ಅಥವಾ ಅಂಚೆ ತೆರಪಿನ ಶಿಕ್ಷಣ ಮೂಲಕ ಪದವಿ ನೀಡಲು ಯುಜಿಸಿ ಅಥವಾ ರಾಜ್ಯ ಸರ್ಕಾರ ಅನುಮತಿ ನೀಡಿದೆಯೇ, ನೀಡಿದ್ದರೆ ವರ್ಷದ ಮಾಹಿತಿ ನೀಡಬೇಕು ಎಂದು ಪತ್ರದಲ್ಲಿ ಮನವಿ ಮಾಡಿದ್ದಾರೆ.

ಅಲ್ಲದೆ, ಆಯಾ ರಾಜ್ಯಗಳಲ್ಲಿ ಯಾವ, ಯಾವ ಭಾಷೆಯಲ್ಲಿ (ಪ್ರಥಮ ಭಾಷೆ, ದ್ವಿತೀಯ ಭಾಷೆ, ತೃತೀಯ ಭಾಷೆ) ಪರೀಕ್ಷೆ ಬರೆಯಲು ಅನುಮತಿ ನೀಡಲಾಗಿದೆ? ಯುಜಿಸಿ ಅಥವಾ ರಾಜ್ಯ ಸರ್ಕಾರ ವಿಶ್ವವಿದ್ಯಾಲಯಗಳನ್ನು ರದ್ದುಪಡಿಸಿದ್ದರೆ ಅದರ ವಿವರ ಮತ್ತು ಯಾವ ವರ್ಷ ರದ್ದು ಆಗಿದೆ ಎಂಬ ಮಾಹಿತಿ, ಈ ವಿ. ವಿಗಳಲ್ಲಿ ಸ್ನಾತಕೋತ್ತರ ಪದವಿಯಲ್ಲಿ ಅರ್ಥಶಾಸ್ತ್ರ, ಸಂಖ್ಯಾಶಾಸ್ತ್ರ, ಗಣಿತಶಾಸ್ತ್ರ ವಿಷಯಗಳಲ್ಲಿ ದೂರ ಶಿಕ್ಷಣ, ಅಂಚೆ ತೆರಪಿನ ಮೂಲಕ ಕಲಿಯಲು ಅವಕಾಶ ಇದೆಯೇ? ವಿಶೇಷವಾಗಿ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಪದವಿ ಪ್ರಥಮ ವರ್ಷ ಸಮಾಜವಿಜ್ಞಾನ ವಿಷಯವನ್ನು ಅಧ್ಯಯನ ಮಾಡಿ, ದ್ವಿತೀಯ ವರ್ಷದಲ್ಲಿ ಅರ್ಥಶಾಸ್ತ್ರದ ವಿಷಯ ಬದಲಾವಣೆ ಮಾಡಲು ಅವಕಾಶ ಇದೆಯೇ?’ ಎಂಬ ಬಗ್ಗೆಯೂ ಸ್ಪಷ್ಟಪಡಿಸುವಂತೆ ಕೋರಿದ್ದಾರೆ.

159 ಪದವಿಗಳಲ್ಲಿ 8 ನಕಲಿ!

ವೃಂದ ಮತ್ತು ನೇಮಕಾತಿ ನಿಯಮದ ಅನ್ವಯ 2010ನೇ ಸಾಲಿನಿಂದ ಮುಂಬಡ್ತಿ ಪಡೆಯಲು ಪದವಿ
ಕಡ್ಡಾಯಗೊಳಿಸಲಾಗಿದೆ. ಹೀಗಾಗಿ, ಮುಂಬಡ್ತಿ ನೀಡುವುದಕ್ಕೂ ಮೊದಲು ಮುಂಬಡ್ತಿಗೆ ಅರ್ಹರಾಗಿದ್ದ 159 ನೌಕರರ ಪದವಿ ಪ್ರಮಾಣಪತ್ರಗಳನ್ನು ನೈಜತೆಗೆ ಒಳಪಡಿಸಲಾಗಿದೆ. ಆಗ ಎಂಟು ಮಂದಿ ಸಲ್ಲಿಸಿದ್ದ ಪ್ರಮಾಣಪತ್ರ ನಕಲಿ ಎಂದು ಸಂಬಂಧಿಸಿದ ವಿಶ್ವವಿದ್ಯಾಲಯಗಳು ವರದಿ ನೀಡಿವೆ. ಈ ನೌಕರರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಇಲಾಖಾ ವಿಚಾರಣೆಯೂ ನಡೆಯುತ್ತಿದೆ. ಮುಂಬಡ್ತಿ ನೀಡುವ ವೇಳೆ ಪದವಿಯ ಮೂಲ ಪ್ರತಿ ಪಡೆಯದೆ ನಕಲು ಪ್ರತಿ ಪಡೆದು ಬಡ್ತಿ ನೀಡಲಾಗಿದ್ದು, ನೌಕರರ ಜೊತೆ ನಿರ್ದೇಶನಾಲಯದ ವಿಷಯ ನಿರ್ವಾಹಕರು ಮತ್ತು ಅಧೀಕ್ಷಕರು ಶಾಮೀಲಾಗಿರುವ ಅನುಮಾನವೂ ಇದೆ’ ಎಂದು ನಿರ್ದೇಶನಾಲಯದ ಅಧಿಕಾರಿಯೊಬ್ಬರು ತಿಳಿಸಿದರು.

***

ಮುಂಬಡ್ತಿ ನೀಡುವ ಮೊದಲು ಆಯಾ ವಿಶ್ವವಿದ್ಯಾಲಯಗಳಿಂದ ಮಾಹಿತಿ ಪಡೆಯಲು ಪತ್ರ ಬರೆಯಲಾಗಿದೆ. ವರದಿ ಬಂದ ನಂತರ ನಕಲಿ ಬಗ್ಗೆ ಸ್ಪಷ್ಟತೆ ಸಿಗಲಿದೆ.

– ಎನ್. ಮಾಧುರಾಮ್‌, ನಿರ್ದೇಶಕರು, ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯ

ಮುಂಬಡ್ತಿಗಾಗಿ ಪದವಿ– ಹೊರ ರಾಜ್ಯಗಳ 16 ವಿವಿಗಳು

ಗಾಂಧಿ, ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ ಮತ್ತು ಮ್ಯಾನೇಜ್‌ಮೆಂಟ್‌, ಆಂಧ್ರಪ್ರದೇಶ

ಡಾ. ಸಿ.ವಿ. ರಾಮನ್‌ ವಿವಿ, ಬಿಲಾಸ್‌ಪುರ, ಛತ್ತೀಸ್‌ಗಡ

ಅಲಗಪ್ಪ ವಿವಿ, ತಮಿಳುನಾಡು

ವಿನಾಯಕ ಮಿಷನ್ಸ್‌ ರಿಸರ್ಚ್‌ ಫೌಂಡೇಷನ್‌, ತಮಿಳುನಾಡು

ಮಧುರೈ ಕಾಮರಾಜ್‌ ವಿವಿ, ತಮಿಳುನಾಡು

ಸಾಮ್‌ ಹಿಗ್ಗಿನ್‌ಬಾಟಂ ಇನ್‌ಸ್ಟಿಟ್ಯೂಟ್‌ ಆಫ್ ಅಗ್ರಿಕಲ್ಚರ್‌ ಟೆಕ್ನಾಲಜಿ ಆ್ಯಂಡ್‌ ಸೈನ್ಸ್‌, ಅಲಹಾಬಾದ್‌, ಉತ್ತರಪ್ರದೇಶ

ಬುಂಧೇಲ್‌ ವಿವಿ, ಝಾನ್ಸಿ, ಉತ್ತರಪ್ರದೇಶ

ಸ್ವಾಮಿ ವಿವೇಕಾನಂದ ಸುಬ್ರಮತಿ ವಿವಿ, ಉತ್ತರಪ್ರದೇಶ

ಶೋಭಿತ್‌ ವಿವಿ, ಮೀರತ್‌, ಉತ್ತರಪ್ರದೇಶ‌

ರಬೀಂದ್ರನಾಥ್ ಠಾಗೋರ್‌ ವಿವಿ, ಭೋಪಾಲ್‌, ಮಧ್ಯಪ್ರದೇಶ

ಸಿಎಂಜೆ ವಿವಿ, ಮೇಘಾಲಯ,

ಸಂಗೈ ಇಂಟರ್‌ನ್ಯಾಷನಲ್‌ ವಿವಿ, ಮಣಿಪುರ

ದಿ ಗ್ಲೋಬಲ್‌ ಓಪನ್‌ ವಿವಿ, ನಾಗಾಲ್ಯಾಂಡ್,

ಜೆ.ಆರ್‌.ಎನ್‌. ರಾಜಸ್ಥಾನ್‌ ವಿದ್ಯಾಪೀಠ, ಉದಯಪುರ, ರಾಜಸ್ಥಾನ

ಕೇಂದ್ರೀಯ ವಿವಿ, ತಮಿಳುನಾಡು

ಈಸ್ಟರ್ನ್‌ ಇನ್‌ಸ್ಟಿಟ್ಯೂಟ್‌ ಫಾರ್‌ ಇಂಟೆಗ್ರೇಟೆಡ್‌ಲರ್ನಿಂಗ್‌ ಇನ್‌ ಮ್ಯಾನೇಜ್‌ಮೆಂಟ್‌ ವಿವಿ, ಸಿಕ್ಕಿಂ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT