ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದಲ್ಲಿ ನಕಲಿ ರಸಗೊಬ್ಬರ ಪೂರೈಕೆ: ಡಿ.ಸಿ.ತಮ್ಮಣ್ಣ ಆರೋಪ

Last Updated 21 ಮಾರ್ಚ್ 2022, 19:58 IST
ಅಕ್ಷರ ಗಾತ್ರ

ಬೆಂಗಳೂರು: ‘ರಾಜ್ಯದಲ್ಲಿ ನಕಲಿ ರಸಗೊಬ್ಬರ ಪೂರೈಕೆ ದಂಧೆ ನಡೆಯುತ್ತಿದೆ. ಇದರಿಂದಾಗಿ ರೈತರು ಹೈರಾಣಾಗಿದ್ದು, ಬೀದಿಗೆ ಬೀಳುವ ಸ್ಥಿತಿ ಎದುರಿಸುತ್ತಿದ್ದಾರೆ’ ಎಂದು ಜೆಡಿಎಸ್‌ ಸದಸ್ಯ ಡಿ.ಸಿ.ತಮ್ಮಣ್ಣ ಅವರು ವಿಧಾನಸಭೆಯಲ್ಲಿ ಆರೋಪಿಸಿದರು.

ಇಲಾಖೆಗಳ ಅನುದಾನ ಬೇಡಿಕೆ ಮೇಲಿನ ಚರ್ಚೆಯಲ್ಲಿ ಸೋಮವಾರ ಮಾತನಾಡುವಾಗ ಅವರು ಈ ವಿಚಾರ ಪ್ರಸ್ತಾಪಿಸಿದರು. ಇದಕ್ಕೆ ದನಿಗೂಡಿಸಿದ ಜೆಡಿಎಸ್‌ ಸದಸ್ಯ ಕೆ.ಅನ್ನದಾನಿ, ‘ನಕಲಿ ರಸಗೊಬ್ಬರ ದಂಧೆ ಬೆಳಕಿಗೆ ಬಂದ ಬಳಿಕವೂ ಯಾರೊಬ್ಬರ ವಿರುದ್ಧವೂ ಕ್ರಮವಾಗಿಲ್ಲ. ಅನ್ನದಲ್ಲೇ ವಿಷ ಹಾಕುವ ಸ್ಥಿತಿ ನಿರ್ಮಾಣವಾಗಿದ್ದು ವಿಪರ್ಯಾಸ’ ಎಂದು ಬೇಸರ ವ್ಯಕ್ತಪಡಿಸಿದರು.

‘ಮಂಡ್ಯ ಜಿಲ್ಲೆಯ ನೀರಾವರಿಯ ಮುಖ್ಯ ನಾಲೆಗಳ ಆಧುನೀಕರಣಕ್ಕೆ ₹ 522 ಕೋಟಿಯ ಸಮಗ್ರ ಯೋಜನಾ ವರದಿ ಸಿದ್ಧಪಡಿಸಲಾಗಿತ್ತು. ಸಮ್ಮಿಶ್ರ ಸರ್ಕಾರದ ಬಜೆಟ್‌ನಲ್ಲಿ ಈ ಯೋಜನೆಗೆ ₹ 300 ಕೋಟಿ ಅನುದಾನವನ್ನೂ ಒದಗಿಸಲಾಗಿತ್ತು. ಕಾಮಗಾರಿಗೆ 2019 ರಲ್ಲೇ ಕಾರ್ಯಾದೇಶ ನೀಡಿದ್ದರೂ ಕೆಲಸ ಇನ್ನೂ ಶುರುವಾಗಿಲ್ಲ. ಈ ಕಾಮಗಾರಿ ನಡೆಸಲು ರೈತರು ಒಂದು ವರ್ಷದ ಮಟ್ಟಿಗೆ ಬೆಳೆ ಬೆಳೆಯುವುದನ್ನು ಸ್ಥಗಿತಗೊಳಿಸಬೇಕಾಗುತ್ತದೆ. ಅದಕ್ಕೆ ರೈತರು ಒಪ್ಪುವುದಿಲ್ಲ. ಈ ಯೋಜನೆಯ ಹಣವನ್ನು ಪಿಕ್‌ಅಪ್‌ ನಾಲೆಗಳ ಅಭಿವೃದ್ಧಿಗಾದರೂ ಬಳಸಲು ಅನುಮತಿ ನೀಡಬೇಕು’ ಎಂದು ಡಿ.ಸಿ.ತಮ್ಮಣ್ಣ ಕೋರಿದರು.

‘ರೈತರ ಕುಟುಂಬದ ವರಮಾನವು ಕೂಲಿ ಕಾರ್ಮಿಕರ ಕುಟುಂಬದ ವರಮಾನಕ್ಕಿಂತಲೂ ಕಡಿಮೆ ಇದೆ. ರೈತ ಕುಟುಂಬದ ಒಬ್ಬ ಸದಸ್ಯನಿಗೆ ನಿರುದ್ಯೋಗ ಭತ್ಯೆ ನೀಡಬೇಕು. ಕೃಷಿ ಪಂಪ್‌ಸೆಟ್‌ಗಳಿಗೆ ನಿತ್ಯ ಕನಿಷ್ಠ 15 ಗಂಟೆ ವಿದ್ಯುತ್‌ ಪೂರೈಸಬೇಕು. ಗದ್ದೆ ಬಯಲು ರಸ್ತೆ ಅಭಿವೃದ್ಧಿಗೆ ಸರ್ಕಾರ ಆದ್ಯತೆ ನೀಡಬೇಕು’ ಎಂದು ಅವರು ಒತ್ತಾಯಿಸಿದರು.

‘ಈಗಲೂ ಶೇ 25 ರಷ್ಟು ಗ್ರಾಮಗಳಿಗೂ ಶುದ್ಧ ಕುಡಿಯುವ ನೀರು ಪೂರೈಕೆ ವ್ಯವಸ್ಥೆ ಇಲ್ಲ. ಅಂತರ್ಜಲ ಕಲುಷಿತಗೊಂಡು ಕೊಳವೆ ಬಾವಿಗಳ ನೀರು ಲವಣಾಂಶಗಳಿಂದ ಕೂಡಿದೆ. ಕುಡಿಯಲು ಯೋಗ್ಯವಲ್ಲದ ನೀರನ್ನೇ ಬಳಸುವ ಸ್ಥಿತಿ ಅನೇಕ ಗ್ರಾಮಗಳಲ್ಲಿದೆ. ಈ ಕೊರತೆ ನೀಗಿಸಲೆಂದೇ ಸಮ್ಮಿಶ್ರ ಸರ್ಕಾರವು ಜಲಧಾರೆ ಕಾರ್ಯಕ್ರಮವನ್ನು ಆರಂಭಿಸಿತ್ತು. ಅದನ್ನು ಈಗಿನ ಸರ್ಕಾರ ಕೈಬಿಟ್ಟಿದೆ. ಕೇಂದ್ರದ ನೆರವಿನಿಂದ ಜಾರಿಗೊಳಿಸುತ್ತಿರುವ ಜಲಜೀವನ್‌ ಅಭಿಯಾನದಲ್ಲಿ ಹಳೆ ಕೊಳವೆಗಳನ್ನು ಕಿತ್ತು ಹೊಸ ಕೊಳವೆಗಳನ್ನು ಅಳವಡಿಸುವ ಕೆಲಸ ಮಾತ್ರ ಆಗುತ್ತಿದೆ’ ಎಂದು ಟೀಕಿಸಿದರು.

‘ಸೂಳೆಕೆರೆ ಹೆಸರು ಬದಲಿಸಿ’
ಹಿಂದಿನ ಕಾಲದಲ್ಲಿ ಕೆಲವರು ಪ್ರೇಯಸಿಯರ ನೆನಪಿಗಾಗಿ ಕಟ್ಟಿಸಿದ ಕೆರೆಗಳಿಗೆ ಸೂಳೆ ಕೆರೆ ಎಂದು ಹೆಸರಿಸಿದ್ದರು. ಗ್ರಾಮಗಳಿಗೆ ಜಾತಿ ಸೂಚಕ ಹೆಸರು ಇಡಬಾರದು ಎಂದು ಸದನದಲ್ಲಿ ಚರ್ಚೆ ನಡೆದಿದೆ. ಅಂತೆಯೇ ‘ಸೂಳೆ ಕೆರೆ’ ಎಂಬ ಹೆಸರುಗಳನ್ನೂ ಬದಲಾಯಿಸಬೇಕು. ಅವುಗಳನ್ನು ಅನ್ನಪೂರ್ಣೇಶ್ವರಿ ಕೆರೆ ಎಂದು ಕರೆಯಬಹುದು’ ಎಂದು ಡಿ.ಸಿ.ತಮ್ಮಣ್ಣ ಸಲಹೆ ನೀಡಿದರು.

‘ಕೃಷಿ ಚಿಕಿತ್ಸಾಲಯಕ್ಕೆ ಅನುಮತಿ ನೀಡಿ’
‘ಕೃಷಿ ವಿಶ್ವವಿದ್ಯಾಲಯಗಳು ಪದವೀಧರರನ್ನು ನಿರ್ಮಿಸುವ ಕಾರ್ಖಾನೆಗಳಂತಾಗಿವೆ. ಕೃಷಿ ಪದವೀಧರರೂ ಗದ್ದೆಗಿಳಿಯುತ್ತಿಲ್ಲ. ಅವರು ಕೃಷಿ ಚಿಕಿತ್ಸಾಲಯಗಳನ್ನು ನಡೆಸಲು ಸರ್ಕಾರ ಅನುಮತಿ ನೀಡಬೇಕು. ಇದರಿಂದ ಅವರ ಜೀವನೋಪಾಯಕ್ಕೆ ದಾರಿಯಾಗಲಿದೆ. ಅವರ ಜ್ಞಾನವು ಕೃಷಿಕರಿಗೆ ದೊರಕಲಿದೆ’ ಎಂದು ಡಿ.ಸಿ.ತಮ್ಮಣ್ಣ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT