ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಕಲಿ ಪಹಣಿಗೆ ಭೂ ಪರಿಹಾರ: ‘ಲೋಕಾ’ ತನಿಖೆ: ಮಧ್ಯವರ್ತಿಗಳ ಜೊತೆ ಅಧಿಕಾರಿಗಳ ಶಾಮೀಲು

Last Updated 2 ಮಾರ್ಚ್ 2023, 4:56 IST
ಅಕ್ಷರ ಗಾತ್ರ

ಬೆಂಗಳೂರು: ಸರ್ಕಾರಿ ಜಾಗಕ್ಕೆ ನಕಲಿ ದಾಖಲೆ ಸೃಷ್ಟಿಸಿ, ಭೂ ಪರಿಹಾರ ನೀಡಿದ ಆರೋಪ‌ ಎದುರಿಸುತ್ತಿರುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಹೆಚ್ಚುವರಿ ಭೂಸ್ವಾಧೀನಾಧಿಕಾರಿಯಾಗಿದ್ದ ಡಾ. ಬಿ. ಸುಧಾ (ಕೆಎಎಸ್‌– ಕಿರಿಯ ಶ್ರೇಣಿ) ಮತ್ತು ಬೆಂಗಳೂರು ಉತ್ತರ ಮತ್ತು ಯಲಹಂಕ ತಾಲ್ಲೂಕು ವಿಶೇಷ ಜಿಲ್ಲಾಧಿಕಾರಿಯಾಗಿದ್ದ ಎಸ್‌.ಎನ್‌. ಗಂಗಾಧರಯ್ಯ (ಕೆಎಎಸ್‌– ನಿವೃತ್ತ) ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ತನಿಖೆ ನಡೆಸಲು ಲೋಕಾಯುಕ್ತಕ್ಕೆ ರಾಜ್ಯ ಸರ್ಕಾರ ಪೂರ್ವಾನುಮತಿ ನೀಡಿದೆ.

ಈ ಆರೋಪದ ತನಿಖೆ ನಡೆಸಿದ್ದ ಎಸಿಬಿ, ಇಬ್ಬರು ಅಧಿಕಾರಿಗಳು ಮಧ್ಯವರ್ತಿಗಳ ಜೊತೆ ಒಡಂಬಡಿಕೆ ಮಾಡಿಕೊಡು ನಕಲಿ ದಾಖಲೆಗಳ ಆಧಾರದಲ್ಲಿ ಕೆಂಪಮ್ಮ ಎಂಬುವರಿಗೆ ಪರಿಹಾರ ರೂಪದಲ್ಲಿ ನಾಡಪ್ರಭು ಕೆಂಪೇಗೌಡ ಬಡಾವಣೆಯ ಕೊಮ್ಮಘಟ್ಟ ಗ್ರಾಮದ ವಿವಿಧ ಸರ್ವೆ ನಂಬರ್‌ಗಳಲ್ಲಿ 15 ನಿವೇಶನಗಳನ್ನು ಬಿಡಿಎ ವತಿಯಿಂದ 2018ರ ಮಾ.3ರಂದು ಹಂಚಿಕೆ ಮಾಡಿರುವುದನ್ನು ಪತ್ತೆ ಮಾಡಿತ್ತು. ಎಸಿಬಿ ರದ್ದುಗೊಂಡು, ಅಲ್ಲಿನ ಪ್ರಕರಣಗಳು ಲೋಕಾಯುಕ್ತಕ್ಕೆ ವರ್ಗಾವಣೆಗೊಂಡಿರುವುದರಿಂದ, ತನಿಖೆ ಕೈಗೊಳ್ಳಲು ಲೋಕಾಯುಕ್ತ ಪೊಲೀಸ್‌ ವಿಭಾಗಕ್ಕೆ ಪೂರ್ವಾನುಮತಿ ನೀಡಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಆದೇಶ ಹೊರಡಿಸಿದೆ.

ಮಧ್ಯವರ್ತಿಗಳಿಗೆ ₹ 1.26 ಕೋಟಿಗೆ ಕರಾರು!

ಪ್ರಕರಣದ ತನಿಖೆ ನಡೆಸಿದ್ದ ಬಿಡಿಎ ಜಾಗೃತ ದಳ, ಕೆಂಪಮ್ಮ ಹೆಸರಿನಲ್ಲಿ ನಕಲಿ ದಾಖಲೆ ಸಲ್ಲಿಕೆ ಆಗಿರುವುದನ್ನು ಪತ್ತೆ ಮಾಡಿತ್ತು. ರಾಮನಗರದ ಕೆಂಪಮ್ಮ ಅವರನ್ನು ವಿಚಾರಣೆಗೆ ಒಳಪಡಿಸಿದಾಗ, ‘ಭೂ ಪರಿಹಾರ ಮಂಜೂರು ಮಾಡಿಕೊಳ್ಳುವ ಸಂಬಂಧ ವ್ಯವಹರಿಸಲು ಮಧ್ಯವರ್ತಿಗಳ ಹೆಸರಿಗೆ ₹1.26 ಕೋಟಿಗೆ ಕರಾರು ಮಾಡಿಕೊಟ್ಟಿದ್ದೆ. ಅವರಿಂದ ಇಲ್ಲಿಯವರೆಗೆ ₹1 ಕೋಟಿ ಪಡೆದು, ‌ಬಿಡಿಎದಿಂದ ನನಗೆ ಮಂಜೂರಾದ 15 ನಿವೇಶನಗಳನ್ನು ಅವರು ಸೂಚಿದವರಿಗೆ ಶುದ್ಧ ಕ್ರಯಪತ್ರಗಳನ್ನು ನೋಂದಣಿ ಮಾಡಿಕೊಟ್ಟಿದ್ದೇನೆ’ ಎಂದಿದ್ದರು.

ಮಧ್ಯವರ್ತಿಗಳಾದ ಮಂಜುನಾಥ್ ಮತ್ತು ನಾಗೇಶ್‌ ಸೂಚಿಸಿದ ವ್ಯಕ್ತಿಗಳಿಗೆ ಕೆಂಪಮ್ಮ 2018ರ ಮಾರ್ಚ್‌ 22ರಿಂದ ಏಪ್ರಿಲ್‌ 12 ರ ಅವಧಿಯಲ್ಲಿ ನಿವೇಶನಗಳನ್ನು ಮಾರಾಟ ಮಾಡಿ ಕೋಟ್ಯಂತರ ರೂಪಾಯಿ ಗಳಿಸಿರುವುದು ತನಿಖೆಯಿಂದ ದೃಢಪಟ್ಟಿತ್ತು. ಈ ಅಕ್ರಮದಲ್ಲಿ ಕಂದಾಯ ಇಲಾಖೆ ಮತ್ತು ಬಿಡಿಎ ಅಧಿಕಾರಿಗಳು ಭಾಗಿಯಾಗಿರುವುದು ಕಂಡುಬಂದಿರುವುದರಿಂದ, ಭ್ರಷ್ಟಾಚಾರ ತಡೆ ಕಾಯ್ದೆ ‌ಅನ್ವಯ ತನಿಖೆಗೆ ಪೂರ್ವಾನುಮತಿ
ಕೋರಲಾಗಿತ್ತು.

ಏನಿದು ಪ್ರಕರಣ?: ಕೆಂಪೇಗೌಡ ಬಡಾವಣೆಗೆ ಭೂಸ್ವಾಧೀನಪಡಿಸಿಕೊಂಡ ಯಶವಂತರಪುರ ಹೋಬಳಿಯ ಕನ್ನಲ್ಲಿ ಗ್ರಾಮದ ಸರ್ವೆ ನಂಬರ್‌ 93ರಲ್ಲಿ 22 ಎಕರೆ 32 ಗುಂಟೆ ಜಮೀನು ಚನ್ನಪ್ಪ, ಬೈಲಪ್ಪ, ವೆಂಕಟಪ್ಪ, ರೇವಣ್ಣ, ಸಚ್ಚಿನಚಾರಿ, ಸಚ್ಚಿದಾನಂದ ಮೂರ್ತಿ, ಗಂಗಾಧರಪ್ಪ, ಬಸಯ್ಯ, ಬಿ.ಆರ್‌. ರಾಜಕುಮಾರ್‌ ಎಂಬವರ ಸ್ವಾಧೀನದಲ್ಲಿರುವುದಾಗಿ ಬಿಡಿಎಗೆ 2012ರಲ್ಲಿ ಬೆಂಗಳೂರು ಉತ್ತರ ತಾಲ್ಲೂಕಿನ ತಹಶೀಲ್ದಾರ್‌ ವರದಿ ನೀಡಿದ್ದರು. ಆದರೆ, ಮಧ್ಯವರ್ತಿಗಳಾದ ಮಂಜುನಾಥ್‌ ಮತ್ತು ನಾಗೇಶ್‌ ಬಿಡಿಎದಿಂದ ಅಕ್ರಮವಾಗಿ ಪರಿಹಾರ ಪಡೆಯಲು ಒಳಸಂಚು ನಡೆಸಿ, ಈ ಸರ್ವೆ ನಂಬರ್‌ನಲ್ಲಿ 2 ಎಕರೆ ಜಮೀನು ರಾಮನಗರದ ಕೆಂಪಮ್ಮ ಹೆಸರಿಗೆ 1957ರಲ್ಲಿ ದರಖಾಸ್ತು ರೂಪದಲ್ಲಿ ಮಂಜೂರಾಗಿದೆ ಎಂದು ಕೈ ಬರಹದಲ್ಲಿ ನಕಲಿ ದಾಖಲೆ ಸೃಷ್ಟಿಸಿದ್ದರು. ಈ ದಾಖಲೆಗಳನ್ನು 2017ರ ಫೆ. 4ರಂದು ಕೆಂಪಮ್ಮ ಅವರು ತಹಶೀಲ್ದಾರ್‌ಗೆ ಸಲ್ಲಿಸಿ ಪಹಣಿಯಲ್ಲಿ ಹೆಸರು ನಮೂದಿಸಲು ಕೋರಿದ್ದರು. ಆದರೆ, ಸಾಗುವಳಿ ಚೀಟಿ, ಮೂಲ ಮಂಜೂರಾತಿ ಕಡತ ಲಭ್ಯ ಇಲ್ಲವೆಂದು ಬೆಂಗಳೂರು ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದರು.

ನಂತರ ಈ ಬಗ್ಗೆ ಬೆಂಗಳೂರು ಉತ್ತರ ತಾಲ್ಲೂಕು ವಿಶೇಷ ಜಿಲ್ಲಾಧಿಕಾರಿ ಎಸ್‌.ಎನ್‌. ಗಂಗಾಧರಯ್ಯ ಈ ಪ್ರಕರಣದ ವಿಚಾರಣೆ ನಡೆಸಿದ್ದು, ಕೆಂಪಮ್ಮ ಅವರಿಗೆ ಮಂಜೂರಾದ ಕಡತ ಇಲ್ಲದಿದ್ದರೂ, ಪಹಣಿಯಲ್ಲಿ ಹೆಸರು ದಾಖಲಿಸಲು ಆದೇಶಿಸಿದ್ದರು. ಈ ನಕಲಿ ದಾಖಲೆಗಳನ್ನು ಕೆಂಪಮ್ಮ ಅವರ ಮೂಲಕ ಬಿಡಿಎಗೆ ಸಲ್ಲಿಸಿದ ಮಧ್ಯವರ್ತಿಗಳು, ಬಿಡಿಎ ಭೂಸ್ವಾಧೀನಾಧಿಕಾರಿಯಾಗಿದ್ದ ಬಿ. ಸುಧಾ ಮತ್ತು ಇತರ ಅಧಿಕಾರಿಗಳೊಂದಿಗೆ ಒಡಂಬಡಿಕೆ ಮಾಡಿಕೊಂಡು 2 ಎಕರೆಗೆ ಬದಲಿಯಾಗಿ, 19,166 ಚದರ ಅಡಿ ವಿಸ್ತೀರ್ಣದ ಅಭಿವೃದ್ಧಿಪಡಿಸಿದ 15 ನಿವೇಶನಗಳನ್ನು ಕೆಂಪಮ್ಮ ಅವರಿಗೆ ಹಂಚಿಕೆ ಮಾಡುವ ಬಗ್ಗೆ 2017ರ ಜುಲೈ 31ರಂದು ಅನುಮೋದಿಸಿದ್ದರು.

ಈ ಮಧ್ಯೆ, ಹುಚ್ಚ ಹನುಮಯ್ಯ ಎಂಬವರು, ಸರ್ವೆ ನಂಬರ್‌ 93ರಲ್ಲಿ ಸ್ವಾಧೀನಾನುಭವದಲ್ಲಿ ಇರುವುದಾಗಿ ಕೋರ್ಟ್‌ನಲ್ಲಿ ಅಸಲು ದಾವೆ ಹೂಡಿದ್ದರು. ಕೆಂಪಮ್ಮ ಅವರಿಗೆ ಬಿಡಿಎದಿಂದ ಪರಿಹಾರ ನೀಡಬಾರದೆಂದು ಬಿಡಿಎಗೆ ಮನವಿ ಸಲ್ಲಿಸಿದ್ದರು. ಉಪವಿಭಾಗಾಧಿಕಾರಿಯ 2017 ಜುಲೈ 7ರಂದು ಭೂಮಾಪಕರು ನೀಡಿದ ನಕ್ಷೆಯಂತೆ ಹುಚ್ಚ ಹನುಮಯ್ಯ ಸ್ವಾಧೀನಾನುಭವದಲ್ಲಿ ಇರುವುದಾಗಿ ಜಿಲ್ಲಾಧಿಕಾರಿಗೆ ವರದಿ ನೀಡಿದ್ದರು. ಇದೇ ವಿಚಾರದಲ್ಲಿ ಬಿಎಸ್‌ಪಿಯ ಮಾರಸಂದ್ರ ಮುನಿಯಪ್ಪ ಕೂಡಾ ಬಿಡಿಎಗೆ ದೂರು ಸಲ್ಲಿಸಿದ್ದರು. ಈ ನಡುವೆ, ಇನ್ನೊಬ್ಬ ಮಹಿಳೆ, ‘ನಾನು ನಿಜವಾದ ಕೆಂಪಮ್ಮ’ ಆಗಿದ್ದು, ರಾಮನಗರದ ಕೆಂಪಮ್ಮ‌ಗೆ ಪರಿಹಾರ ನೀಡಬಾರೆಂದು 2018ರ ಜುಲೈ 13ರಂದು ಬಿಡಿಎಗೆ ಮನವಿ ಸಲ್ಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT