ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ ಶಾಸಕರಿಂದ ತಪ್ಪು ಮಾಹಿತಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

Last Updated 2 ಜನವರಿ 2023, 15:55 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಕೆಲವು ಕಾಂಗ್ರೆಸ್ ಶಾಸಕರು ಕೇಂದ್ರ ಸರ್ಕಾರದ ಸ್ಮಾರ್ಟ್‌ ಸಿಟಿ ಯೋಜನೆಯ ಕಾಮಗಾರಿಗಳನ್ನು ತಮ್ಮದೇ ಕಾರ್ಯಕ್ರಮ ಎಂದು ಹೇಳಿಕೊಂಡು ಓಡಾಡುತ್ತಿದ್ದಾರೆ. ಈ ಬಗ್ಗೆ ಜನರಿಗೆ ವಾಸ್ತವ ವಿಚಾರ ತಿಳಿಸುವ ಕೆಲಸ ಆಗಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಮ್ಮ ಪಕ್ಷದ ಕಾರ್ಯಕರ್ತರಿಗೆ ತಿಳಿಸಿದ್ದಾರೆ.

ಶಿವಾಜಿನಗರ ವಿಧಾನಸಭಾ ಕ್ಷೇತ್ರದ ವಸಂತನಗರದಲ್ಲಿ ಸೋಮವಾರ ಅವರು ‘ಬೂತ್‌ ವಿಜಯ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಸ್ಮಾರ್ಟ್‌ ಸಿಟಿ ಯೋಜನೆಯನ್ನು ಜಾರಿ ಮಾಡಿದ್ದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ. ನಗರದಲ್ಲಿ ಯೋಜನೆ ಕಾರ್ಯಗತಗೊಳಿಸಲು ₹500 ಕೋಟಿ ನೀಡಿದ್ದಾರೆ. ಈ ಯೋಜನೆ ಶಿವಾಜಿನಗರ, ಗಾಂಧಿನಗರ, ಚಿಕ್ಕಪೇಟೆ ಮುಂತಾದ ಪ್ರದೇಶಗಳಲ್ಲಿ ಅನುಷ್ಠಾನಗೊಂಡಿದೆ. ಆದರೆ, ಇಲ್ಲಿಯ ಶಾಸಕರು ಸ್ಮಾರ್ಟ್‌ ಸಿಟಿ ಯೋಜನೆಯ ಬಗ್ಗೆ ಹೇಳದೇ, ತಾವೇ ಕೆಲಸ ಮಾಡಿಸಿದ್ದು ಎಂದು ಹೇಳಿಕೊಳ್ಳುತ್ತಿದ್ದಾರೆ. ಇದರಲ್ಲಿ ಕಾಂಗ್ರೆಸ್‌ ಲಾಭ ಮಾಡಿಕೊಳ್ಳುವುದನ್ನು ಬಿಟ್ಟರೆ ಬೇರೆ ಏನೂ ಮಾಡಿಲ್ಲ. ಈ ವಿಚಾರವನ್ನು ಜನರಿಗೆ ತಿಳಿಸಬೇಕು ಎಂದರು.

‘ಕಾಂಗ್ರೆಸ್‌ ಪಕ್ಷ ಶಿವಾಜಿನಗರ ಕ್ಷೇತ್ರವನ್ನು ಕೊಳಚೆ ಪ್ರದೇಶವನ್ನಾಗಿಯೇ ಇಟ್ಟುಕೊಂಡಿತ್ತು. ನಮ್ಮ ಸರ್ಕಾರ ಬಂದಮೇಲೆ ಶಿವಾಜಿನಗರ ಮತ್ತು ಸುತ್ತಮುತ್ತಲಿನ ಕ್ಷೇತ್ರಗಳಲ್ಲಿ ಅಭಿವೃದ್ಧಿಯಾಗುತ್ತಿದೆ. ನಗರೋತ್ಥಾನ ಯೋಜನೆಯಡಿ ಬೆಂಗಳೂರಿಗೆ ₹8 ಸಾವಿರ ಕೋಟಿ ನೀಡಿದ್ದೇವೆ. ರಾಜಕಾಲುವೆ ದುರಸ್ತಿ, ಉದ್ಯಾನಗಳು ಮತ್ತು ರಸ್ತೆಗಳ ಅಭಿವೃದ್ಧಿಗೆ ₹2 ಸಾವಿರ ಕೋಟಿ ನೀಡಿದ್ದೇವೆ’ ಎಂದರು.

2024 ಮೆಟ್ರೊ 2ನೇ ಹಂತ ಪೂರ್ಣ:

ಮೆಟ್ರೊ ರೈಲು ಯೋಜನೆಯ 2ನೇ ಹಂತವನ್ನು 2024 ರೊಳಗೆ ಪೂರ್ಣಗೊಳಿಸಲಾಗುವುದು. ಮೆಟ್ರೊ 3ನೇ ಹಂತಕ್ಕೆ ಕೇಂದ್ರದ ಅನುಮೋದನೆ ಸಿಕ್ಕಿದ ತಕ್ಷಣ ಕಾಮಗಾರಿ ಆರಂಭಿಸಲಾಗುವುದು. ಇದಕ್ಕೆ ₹26 ಸಾವಿರ ಕೋಟಿ ಬೇಕಾಗುತ್ತದೆ ಎಂದು ಬೊಮ್ಮಾಯಿ ಹೇಳಿದರು.

ಕಾವೇರಿ 5 ನೇ ಹಂತದ ಕಾಮಗಾರಿಯನ್ನು ಪೂರ್ಣಗೊಳಿಸಲಾಗುತ್ತಿದೆ. ಬಹಳ ವರ್ಷದಿಂದ ನನೆಗುದಿಗೆ ಬಿದ್ದಿರುವ ಯೋಜನೆಗಳಿಗೆ ಚಾಲನೆ ನೀಡಲಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಎಲ್ಲ ಯೋಜನೆಗಳನ್ನು ಜನರ ಮುಂದೆ ಇಡಬೇಕು. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಕೈಗೊಂಡಿರುವ ಕಾರ್ಯಕ್ರಮಗಳನ್ನು ಕಾರ್ಯಕರ್ತರು ಹೆಮ್ಮೆಯಿಂದ ಜನರ ಬಳಿಗೆ ಹೋಗಿ ವಿವರಿಸಬೇಕು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT