ಸೋಮವಾರ, ಜನವರಿ 17, 2022
27 °C

ಹಾಲು ಕೊಡದ ಹಸುಗಳ ವಿರುದ್ಧ ಠಾಣೆ ಮೆಟ್ಟಿಲೇರಿದ ರೈತ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಳೆಹೊನ್ನೂರು (ಶಿವಮೊಗ್ಗ ಜಿಲ್ಲೆ): ಹಾಲು ಕೊಡದ ತಮ್ಮ ಹಸುಗಳ ವಿರುದ್ಧವೇ ರೈತರೊಬ್ಬರು ಶನಿವಾರ ಬೆಳಿಗ್ಗೆ ಪೊಲೀಸ್‌ ಠಾಣೆಯ ಮೆಟ್ಟಿಲೇರಿರುವ ವಿಚಿತ್ರ ಪ್ರಸಂಗ ನಡೆದಿದೆ.

ಸಮೀಪದ ಸಿದ್ಲಿಪುರ ಗ್ರಾಮದ ರೈತ ರಾಮಯ್ಯ ಅವರು ತಾವು ಸಾಕಿದ್ದ ನಾಲ್ಕು ಹಸುಗಳನ್ನು ಪ್ರತಿದಿನ ಬೆಳಿಗ್ಗೆ 8ರಿಂದ 11ರವರೆಗೂ ಹಾಗೂ ಸಂಜೆ 4ರಿಂದ 6ರವರೆಗೂ ಚೆನ್ನಾಗಿ ಮೇಯಿಸಿಕೊಂಡು ಬರುತ್ತಿದ್ದರು. ನಾಲ್ಕೈದು ದಿನಗಳಿಂದ ಹಾಲನ್ನು ಕರೆಯಲು ಹೋದರೆ ಆ ಹಸುಗಳು ಹಾಲನ್ನು ಕೊಡದೇ ಜಾಡಿಸಿ ಒದೆಯುತ್ತಿವೆ ಎಂದು ಪೊಲೀಸರ ಬಳಿ ಹೋಗಿ ದೂರಿದ್ದಾರೆ.

‘ಹಸುಗಳು ನನಗೆ ಹಾಗೂ ಪತ್ನಿ ರತ್ನಮ್ಮ ಅವರಿಗೂ ಸರಿಯಾಗಿ ಹಾಲನ್ನು ಕೊಡುತ್ತಿಲ್ಲ. ಅವುಗಳನ್ನು ಠಾಣೆಗೆ ಕರೆಯಿಸಿ ಬುದ್ಧಿ ಹೇಳಿ. ಸರಿಯಾಗಿ ಹಾಲನ್ನು ಕೊಡುವಂತೆ ಮಾಡಿ ನಮಗೆ ನ್ಯಾಯ ಒದಗಿಸಿ. ಸೂಕ್ತ ಬಂದೋಬಸ್ತ್ ಒದಗಿಸಿ’ ಎಂದು ರಾಮಯ್ಯ ಅವರು ಪೊಲೀಸರಲ್ಲಿ ಮನವಿ ಮಾಡಿದ್ದಾರೆ.

‘ಇಂತಹ ಪ್ರಕರಣಗಳಿಗೆ ಕಾನೂನಿನಲ್ಲಿ ಯಾವುದೇ ಅವಕಾಶವಿಲ್ಲ. ಹೀಗಾಗಿ ಈ ಪ್ರಕರಣವನ್ನು ದಾಖಲಿಸಿಕೊಳ್ಳಲು ಸಾಧ್ಯವಿಲ್ಲ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ವೈರಲ್‌ ಆಗಿದೆ. ಇದಕ್ಕೂ ಠಾಣೆಗೂ ಯಾವುದೇ ಸಂಬಂಧವಿಲ್ಲ’ ಎಂದು ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌ ಲಕ್ಷ್ಮೀಪತಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ಯತ್ನಿಸಿದರೂ ರೈತ ರಾಮಯ್ಯ ಸಂಪರ್ಕಕ್ಕೆ ಸಿಗಲಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು