ದುಬಾರಿ ಕಾರಿನ ಆಸೆಗೆ ಬಿದ್ದು ₹ 7 ಲಕ್ಷ ಕಳೆದುಕೊಂಡ ಮಂಡ್ಯದ ರೈತ

ಮೇಲುಕೋಟೆ (ಮಂಡ್ಯ ಜಿಲ್ಲೆ): ಮಹೀಂದ್ರ ಎಸ್‌ಯುವಿ ಗೆದ್ದಿರುವುದಾಗಿ ನಂಬಿಸಿದ ಸೈಬರ್ ವಂಚಕರು ರೈತರೊಬ್ಬರಿಂದ ₹ 7.23 ಲಕ್ಷ ಹಣ ಪಡೆದು ವಂಚಿಸಿದ್ದಾರೆ.
ಹೊಸ ಕಾರ್ ಆಸೆಗೆ ಬಿದ್ದ ಕನ್ನಗೋನಹಳ್ಳಿ ಗ್ರಾಮದ ಸಂಜೀವ್‌ಗೌಡ ಹಣ ಕಳೆದುಕೊಂಡವರು. ವಂಚನೆಯಾಗಿರುವುದು ತಿಳಿದ ನಂತರ ಅವರು ಜ.12ರಂದು ಮಂಡ್ಯ ಸೈಬರ್ ಠಾಣೆಗೆ ದೂರು ನೀಡಿದ್ದಾರೆ.
ಸಂಜೀವ್ ಗೌಡರ ಪತ್ನಿ ಆನ್‌ಲೈನ್ ಆ್ಯಪ್‌ಗಳ ಮೂಲಕ ಆನ್‌ಲೈನ್‌ನಲ್ಲಿ ವಸ್ತುಗಳನ್ನು ಖರೀದಿಸುತ್ತಿದ್ದರು. ಈಚೆಗೆ ರೈತನ ಮನೆಗೆ 1 ಕೂಪನ್ ಬಂದಿದೆ. ಅದನ್ನು ತೆರೆದು ನೋಡಿದಾಗ, ಆನ್‌ಲೈನ್ ಶಾಪಿಂಗ್ ಮಾಡಿರುವ ಕಾರಣ ₹ 30 ಲಕ್ಷದ ಮಹೀಂದ್ರ ಎಸ್‌ಯುವಿ ಗೆದ್ದಿರುವುದಾಗಿ ತಿಳಿಸಿದ್ದಾರೆ. ‘ಕಾರ್ ಬೇಕಾ ಅಥವಾ ಹಣ ಬೇಕಾ’ ಎಂದು ಪ್ರಶ್ನಿಸಿದ್ದಾರೆ.
ಇದನ್ನು ನಂಬಿದ ರೈತ ಹಣ ಬೇಕು ಎಂದು ಕೇಳಿದ್ದಾರೆ. ವಂಚಕರು ₹ 29.60 ಲಕ್ಷದ ನಕಲಿ ಚೆಕ್‌ಗಳನ್ನು ವಾಟ್ಸ್ ಆ್ಯಪ್ ಮೂಲಕ ಕಳುಹಿಸಿದ್ದಾರೆ. ಖಾತೆಗೆ ಹಣ ವರ್ಗಾವಣೆಗೂ ಮೊದಲು ಸೇವಾ ಶುಲ್ಕ ಪಾವತಿಸಬೇಕು ಎಂದು ಸೈಬರ್ ವಂಚಕರು ಒತ್ತಾಯಿಸಿದ್ದಾರೆ. ಇದನ್ನು ನಂಬಿದ ರೈತ ಮನೆಯಲ್ಲಿದ್ದ ಚಿನ್ನಾಭರಣ ಗಿರಿವಿ ಇಟ್ಟು ಸೆಪ್ಟೆಂಬರ್, ಡಿಸೆಂಬರ್ ತಿಂಗಳ ನಡುವೆ ಹಂತಹಂತವಾಗಿ ₹ 7.23 ಲಕ್ಷ ಹಣವನ್ನು ವಂಚಕರ ಖಾತೆಗೆ ಹಾಕಿದ್ದಾರೆ.
ವಂಚಕರು ಪದೇಪದೇ ಹಣಕ್ಕೆ ಬೇಡಿಕೆ ಇಡುತ್ತಿದ್ದ ಕಾರಣ ರೈತರನಿಗೆ ಅನುಮಾನ ಬಂದಿದೆ. ಕೆಲವರೊಂದಿಗೆ ಮಾಹಿತಿ ಹಂಚಿಕೊಂಡಾಗ ವಂಚನೆಯಾಗಿರುವ ವಿಷಯ ಗೊತ್ತಾಗಿದೆ. ನಂತರ ಸೈಬರ್ ಠಾಣೆಗೆ ದೂರು ನೀಡಿದ್ದಾರೆ.
ಪ್ರಕರಣ ದಾಖಲು ಮಾಡಿಕೊಂಡಿರುವ ಸೈಬರ್ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಸೈಬರ್ ವಂಚಕರ ಕುರಿತು ಜಾಗೃತಿ ಬಿತ್ತಿ ಪತ್ರವನ್ನು ಪೊಲೀಸರು ಜಿಲ್ಲೆಯ ವಿವಿಧೆಡೆ ಅಂಟಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.