ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೈಪ್‌ಲೈನ್‌ನಲ್ಲಿ ಸಿಲುಕಿದ್ದ ರೈತನ ರಕ್ಷಣೆ: ಸತತ ಎರಡು ತಾಸು ಕಾರ್ಯಾಚರಣೆ

Last Updated 4 ಜುಲೈ 2021, 20:30 IST
ಅಕ್ಷರ ಗಾತ್ರ

ರಾಮನಗರ: ತಾಲ್ಲೂಕಿನ ಕೊಂಕಾಣಿದೊಡ್ಡಿ ಸಮೀಪ ಪೈಪ್‌ಲೈನ್ ಒಳಗೆ ಸಿಲುಕಿದ್ದ ರೈತ‌ನನ್ನು ಅಗ್ನಿಶಾಮಕ ದಳದ ಸಿಬ್ಬಂದಿ ಭಾನುವಾರ ಕ್ಷಿಪ್ರ ಕಾರ್ಯಾಚರಣೆ ನಡೆಸಿ ರಕ್ಷಣೆ ಮಾಡಿದ್ದಾರೆ.

ಸಿಂಗ್ರಾಬೋವಿದೊಡ್ಡಿ ನಿವಾಸಿ ರಾಜಣ್ಣ (50) ರಕ್ಷಣೆಗೆ ಒಳಗಾದವರು. ಇವರ ಹೊಲದ ಮಧ್ಯೆ ಬೆಂಗಳೂರು-ಮೈಸೂರು‌ ಹೆದ್ದಾರಿಯ ಬೈಪಾಸ್ ರಸ್ತೆ ಹಾದುಹೋಗಿದೆ. ಮಳೆ ನೀರು ಹರಿದು ಹೋಗಲು ಈ ಬೈಪಾಸ್‌ ಅಡಿ ಬೃಹತ್ತಾದ ಪೈಪ್ ಗಳನ್ನು ಅಳವಡಿಸಲಾಗಿದೆ.

ರಾಜಣ್ಣ ಹೊಲದ ಒಂದು ಭಾಗದಲ್ಲಿ ಕೊಳವೆ ಬಾವಿ ಕೊರೆಯಿಸಿದ್ದು, ಆ ಕೊಳವೆಬಾವಿ ನೀರನ್ನು ರಸ್ತೆಯ ಕೆಳಗಿರುವ ಪೈಪ್‌ಲೈನ್‌ ಮುಖಾಂತರ ಮತ್ತೊಂದು ಬದಿಯಲ್ಲಿ ಇರುವ ಹೊಲಕ್ಕೆ ಸಾಗಿಸಲು ನಿರ್ಧರಿಸಿದ್ದರು. ಈ ಕೆಲಸಕ್ಕಾಗಿ ಅವರು ಪೈಪ್‌ಲೈನ್ ಒಳಗೆ ನುಸುಳಿದ್ದರು. ಸುಮಾರು 4 ಅಡಿ ಅಗಲ, 200 ಅಡಿ ಉದ್ದದ ಪೈಪ್‌ಲೈನ್‌ನ ಅರ್ಧಕ್ಕೆ ಸಾಗುತ್ತಲೇ ಅದರ ಒಳಗೆ ಸಂಗ್ರಹವಾಗಿದ್ದ ಮಣ್ಣಿನಲ್ಲಿ ಸಿಲುಕಿದ್ದರು.

ಅವರ ಸಹಾಯಕ್ಕಾಗಿ ಹೊರಗೆ ನಿಂತಿದ್ದ ಮಗ ಹಾಗೂ ಸ್ನೇಹಿತರು ಗಾಬರಿಗೊಂಡಿದ್ದು, ಗ್ರಾಮಸ್ಥರಿಗೆ ಕರೆ ಮಾಡಿ ಸುದ್ದಿ ಮುಟ್ಟಿಸಿದರು. ಮಾಹಿತಿ ಮೇರೆಗೆ ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ ಮೊದಲಿಗೆ ಪೈಪ್‌ ಒಳಗೆ ಆಮ್ಲಜನಕ ಪೂರೈಕೆ ಮಾಡಿ, ನಂತರ ಜೆಸಿಬಿ ಯಂತ್ರದ ಸಹಾಯದಿಂದ ಪೈಪ್‌ ಒಡೆದು ರೈತನನ್ನು ರಕ್ಷಣೆ ಮಾಡಿದರು. ಸುಮಾರು ಎರಡು ಗಂಟೆ ಕಾಲ ಈ ಕಾರ್ಯಾಚರಣೆ ನಡೆಯಿತು.

ರೈತನನ್ನು ಜಿಲ್ಲಾ ಆಸ್ಪತ್ರೆಯಲ್ಲಿ ತಪಾಸಣೆಗೆ ಒಳಪಡಿಸಿದ್ದು, ಅವರು ಆರೋಗ್ಯದಿಂದ ಇದ್ದಾರೆ. ಅಗ್ನಿಶಾಮಕ ದಳದ ತ್ವರಿತಗತಿಯ ಕಾರ್ಯಾಚರಣೆಯನ್ನು ಉಪಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ಶ್ಲಾಘಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT