ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಂದ್ರ ತಂಡದ ಎದುರು ಬೆಳೆಗಾರರ ಅಳಲು

ಕೊಡಗು: ಮಳೆಯ ಅಬ್ಬರದ ನಡುವೆ ಹಾನಿಯ ಅಧ್ಯಯನ
Last Updated 8 ಸೆಪ್ಟೆಂಬರ್ 2020, 19:30 IST
ಅಕ್ಷರ ಗಾತ್ರ

ಮಡಿಕೇರಿ: ಕೊಡಗು ಜಿಲ್ಲೆಯ ವಿವಿಧೆಡೆ ಮಂಗಳವಾರ ಸುರಿದ ಭಾರಿ ಮಳೆಯ ನಡುವೆಯೇ, ಕೇಂದ್ರ ತಂಡವು ಮಳೆ ಹಾಗೂ ಭೂಕುಸಿತದಿಂದ ಉಂಟಾಗಿರುವ ಹಾನಿ ಅಧ್ಯಯನ ನಡೆಸಿತು.

ಮಧ್ಯಾಹ್ನ 2.15ರ ಸುಮಾರಿಗೆ ತಲಕಾವೇರಿಯ ಗಜಗಿರಿ ಬೆಟ್ಟ ಕುಸಿದ ಸ್ಥಳಕ್ಕೆ ಕೇಂದ್ರ ಗೃಹ ಇಲಾಖೆ ಜಂಟಿ ಕಾರ್ಯದರ್ಶಿ ಕೆ.ವಿ.ಪ್ರತಾಪ್‌ ನೇತೃತ್ವದ ತಂಡವು ಬಂದಾಗ ವರುಣನ ಅಬ್ಬರ ಆರಂಭವಾಯಿತು. ಮಳೆಯಿಂದಾಗಿ, ಅಧಿಕಾರಿಗಳು ಕೆಲವೇ ನಿಮಿಷಗಳಲ್ಲಿ ಅಧ್ಯಯನ ಮುಗಿಸಿ, ಕಾರನ್ನೇರಿ ಹೊರಟರು. ಗಜಗಿರಿ ಬೆಟ್ಟ ಕುಸಿತದಿಂದ ಕ್ಷೇತ್ರದ ಪ್ರಧಾನ ಅರ್ಚಕ ನಾರಾಯಣ ಆಚಾರ್‌ ಸೇರಿ ಐವರು ಮೃತಪಟ್ಟಿದ್ದರು.

ಪುತ್ರಿಯರ ಹುಡುಕಾಟ: ಕೇಂದ್ರ ತಂಡವು ಭೇಟಿ ನೀಡಿದ್ದ ವೇಳೆ ನಾರಾಯಣ ಆಚಾರ್‌ ಪುತ್ರಿಯರಾದ ಶಾರದಾ ಆಚಾರ್‌ (ಶೆನೋನ್‌ ಫರ್ನಾಂಡಿಸ್‌) ಹಾಗೂ ನಮಿತಾ ಆಚಾರ್‌ (ನಮಿತಾ ನಝರತ್‌) ಅವರು ತಮ್ಮ ತಂದೆಯ ಮನೆಯಿದ್ದ ಸ್ಥಳದಲ್ಲಿ ಏನೋ ಹುಡುಕಾಟ ನಡೆಸುತ್ತಿದ್ದು ಕಂಡುಬಂತು. ಅಧಿಕಾರಿಗಳು ಸ್ಥಳಕ್ಕೆ ಬಂದಾಗ ಅವರು ಅಲ್ಲಿಂದ ತೆರಳಿದರು.

ಕಾಫಿ ಬೆಳೆಗಾರರ ಕಣ್ಣೀರು: ತಾಲ್ಲೂಕಿನ ಕಡಗದಾಳು ಸಮೀಪದ ಬೊಟ್ಲಪ್ಪ ಎಂಬಲ್ಲಿ ಭೂಕುಸಿತದಿಂದ ಕಾಫಿ ತೋಟ ನಾಶವಾಗಿತ್ತು. ವೀಕ್ಷಣೆಗೆ ಬಂದ ಅಧಿಕಾರಿಗಳ ಎದುರು, ಕಾಫಿ ಬೆಳೆಗಾರರು ಕಣ್ಣೀರು ಸುರಿಸಿದರು. ‘ಹತ್ತಾರು ವರ್ಷದಿಂದ ಬೆಳೆದಿದ್ದ ಬೆಳೆ, ಆಶ್ರಯವಾಗಿದ್ದ ಕಾಫಿ ತೋಟ ನಾಶವಾಗಿದೆ. ಸೂಕ್ತ ಪರಿಹಾರ ಕೊಡಿಸಿ’ ಎಂದು ಬೆಳೆಗಾರರು ಆಗ್ರಹಿಸಿದರು.

ಚೇರಂಬಾಣೆ, ಕೋರಂಗಾಲ, ಬೇಂಗೂರು ಗ್ರಾಮದಲ್ಲಿ ಅತಿವೃಷ್ಟಿಯಿಂದ ಕಾಳು ಮೆಣಸಿನ ಬೆಳೆಗೂ ಹಾನಿಯಾಗಿದ್ದು ಅಧಿಕಾರಿಗಳು ವೀಕ್ಷಿಸಿದರು. ಕುಸಿದ ಮನೆಗಳನ್ನು ಪರಿಶೀಲಿಸಿದರು. ಭೂಕುಸಿತದಿಂದ ಭತ್ತದ ಗದ್ದೆಗಳಲ್ಲಿ ಮಣ್ಣು ಹಾಗೂ ದೊಡ್ಡ ಬಂಡೆಗಳು ಬಂದು ನಿಂತಿದ್ದು ತೆರವು ಮಾಡುವಂತೆ ರೈತರು ಮನವಿ ಮಾಡಿದರು.

‘ರಾಜ್ಯ ಸರ್ಕಾರದ ಮೇರೆಗೆ ಕೇಂದ್ರ ತಂಡವು ಕೊಡಗಿನಲ್ಲಿ ಅಧ್ಯಯನ ನಡೆಸಿದೆ. ಭೂಕುಸಿತ ಪ್ರದೇಶ ವೀಕ್ಷಣೆ ಮಾಡಿದ್ದೇವೆ. ಬುಧವಾರ ಮಧ್ಯಾಹ್ನ 12.30ಕ್ಕೆ ಬೆಂಗಳೂರಿನಲ್ಲಿ ಕಂದಾಯ ಸಚಿವ ಆರ್‌.ಅಶೋಕ್‌ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದೆ. ಮತ್ತಷ್ಟು ಮಾಹಿತಿ ಪಡೆಯಲಾಗುವುದು’ ಎಂದು ಅಧ್ಯಯನ ತಂಡದಲ್ಲಿರುವ ಅಧಿಕಾರಿ ಮನೋಜ್‌ ರಂಜನ್‌ ಪ್ರತಿಕ್ರಿಯಿಸಿದರು.

‘ಮಳೆಯಿಂದ ₹ 600 ಕೋಟಿಗೂ ಅಧಿಕ ಪ್ರಮಾಣದ ಹಾನಿ ಸಂಭವಿಸಿದೆ’ ಎಂದು ಜಿಲ್ಲಾಧಿಕಾರಿ ಅನೀಸ್ ಜಾಯ್ ಕಣ್ಮಣಿ ಅವರು ಕೇಂದ್ರ ತಂಡಕ್ಕೆ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT