ಮಂಗಳವಾರ, ಆಗಸ್ಟ್ 3, 2021
21 °C

ರೈತ ಹೋರಾಟ ಮುಂದುವರಿಕೆಗೆ ಒಲವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ಕೃಷಿ ಸಂಬಂಧಿ ಕಾಯ್ದೆಗಳ ವಿರುದ್ಧ ಸಂಯುಕ್ತ ಕಿಸಾನ್‌ ಮೋರ್ಚಾ ನೇತೃತ್ವದಲ್ಲಿ ನಡೆಯುತ್ತಿರುವ ಹೋರಾಟವನ್ನು ಕೋವಿಡ್‌ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಸಿಕೊಂಡೇ ಮುಂದುವರಿಸಬೇಕು ಎಂಬ ಒಲವು ರೈತ ಸಂಘಟನೆಗಳು ಹಾಗೂ ಜನಪರ ಸಂಘಟನೆಗಳ ಮುಖಂಡರಿಂದ ವ್ಯಕ್ತವಾಗಿದೆ.

ದೆಹಲಿಯಲ್ಲಿ ನಡೆಯುತ್ತಿರುವ ರೈತ ಹೋರಾಟ ಆರು ತಿಂಗಳು ಪೂರೈಸಿರುವ ಪ್ರಯುಕ್ತ annadaruna.com ವೆಬ್‌ಸೈಟ್‌ ಬುಧವಾರ ಆಯೋಜಿಸಿದ್ದ ‘ದೆಹಲಿ ಹೋರಾಟದ ಚಾರಿತ್ರಿಕ ಮಹತ್ವ, ಕೊರೋನೋತ್ತರ ರೈತ ಹೋರಾಟ ಹಾಗೂ ಕರ್ನಾಟಕದಲ್ಲಿ ಮುಂದೇನು?’ ಎಂಬ ವೆಬಿನಾರ್‌ನಲ್ಲಿ ಭಾಗವಹಿಸಿದ್ದ ರೈತ ಮುಖಂಡರು ಹಾಗೂ ಜನಪರ ಸಂಘಟನೆಗಳ ಮುಖಂಡರು ಹೋರಾಟ ಮುಂದುವರಿಸುವಂತೆ ಒತ್ತಾಯಿಸಿದ್ದಾರೆ.

‘ಕೋವಿಡ್‌ ಹೆಸರಿನಲ್ಲಿ ಹೋರಾಟ ಸ್ಥಗಿತಗೊಳಿಸಲು ಕೇಂದ್ರ ಸರ್ಕಾರ ಪ್ರಯತ್ನಿಸುತ್ತಿದೆ. ಅಂತಹ ಬೆಳವಣಿಗೆಗಳಿಗೆ ಅವಕಾಶ ನೀಡಬಾರದು. ಹೋರಾಟದ ಎಲ್ಲ ಸ್ಥಳಗಳಲ್ಲೂ ಕೋವಿಡ್‌ ನಿಯಂತ್ರಣ ಕ್ರಮಗಳನ್ನು ಪಾಲನೆ ಮಾಡಬೇಕು. ಎಲ್ಲ ರೈತ ಸಂಘಟನೆಗಳು ಮತ್ತು ಜನಪರ ಸಂಘಟನೆಗಳು ಒಗ್ಗೂಡುವ ಮೂಲಕ ಹೋರಾಟವನ್ನು ಮತ್ತಷ್ಟು ವಿಸ್ತರಿಸಬೇಕು. ಕೋವಿಡ್‌ ನಿಯಂತ್ರಣಕ್ಕೆ ಬರುತ್ತಿದ್ದಂತೆಯೇ ರಾಷ್ಟ್ರ ಮಟ್ಟದಲ್ಲಿ ರೈತ ಸಮಾವೇಶಗಳನ್ನು ನಡೆಸುವ ಮೂಲಕ ಶಕ್ತಿ ಪ್ರದರ್ಶಿಬೇಕು’ ಎಂಬ ಸಲಹೆಗಳನ್ನು ಮುಖಂಡರು ನೀಡಿದರು.

ರಾಜ್ಯದಲ್ಲೂ ರೈತ ಹೋರಾಟವನ್ನು ಮತ್ತಷ್ಟು ವಿಸ್ತರಿಸುವ ಪ್ರಯತ್ನ ಆಗಬೇಕು. ಅದಕ್ಕೆ ಪೂರಕವಾಗಿ ರೈತ ಸಂಘಟನೆಗಳ ಜತೆ ಎಲ್ಲ ಕಾರ್ಮಿಕ, ದಲಿತ ಮತ್ತು ಜನಪರ ಸಂಘಟನೆಗಳೂ ಕೈಜೋಡಿಸಬೇಕು. ಆನ್‌ಲೈನ್‌ ಸಭೆಗಳ ಮೂಲಕವೇ ಮುಂದಿನ ಹಂತದ ಹೋರಾಟಕ್ಕೆ ಸಿದ್ಧತೆ ನಡೆಸಬೇಕು ಎಂದು ಹಲವರು ಹೇಳಿದರು.

ರೈತ ಸಂಘದ ವಿವಿಧ ಬಣಗಳ ಮುಖಂಡರಾದ ಬಡಗಲಪುರ ನಾಗೇಂದ್ರ, ಚಾಮರಸ ಮಾಲಿಪಾಟೀಲ, ಎಚ್‌.ಆರ್‌. ಬಸವರಾಜಪ್ಪ, ಕುರುಬೂರು ಶಾಂತಕುಮಾರ್‌, ನಳಿನಿ ಗೌಡ, ಕರ್ನಾಟಕ ಜನಶಕ್ತಿಯ ನೂರ್‌ ಶ್ರೀಧರ್‌, ಡಾ.ಎಚ್‌.ವಿ. ವಾಸು, ಸ್ವರಾಜ್‌ ಅಭಿಯಾನದ ರಾಜಶೇಖರ್‌ ಅಕ್ಕಿ ಸೇರಿದಂತೆ 200ಕ್ಕೂ ಹೆಚ್ಚು ಜನರು ವೆಬಿನಾರ್‌ನಲ್ಲಿ ಭಾಗವಹಿಸಿದ್ದರು.

ಏಳು ಪ್ರಶ್ನೆ: ದೆಹಲಿಯ ಪ್ರತಿಭಟನಾ ಸ್ಥಳದಿಂದ ಮಾತನಾಡಿದ ಸಂಯುಕ್ತ ಕಿಸಾನ್‌ ಮೋರ್ಚಾ ಸಂಚಾಲನಾ ಸಮಿತಿಯ ಸದಸ್ಯ ಯೋಗೇಂದ್ರ ಯಾದವ್‌, ‘ರೈತರನ್ನು ನಷ್ಟಕ್ಕೆ ಸಿಲುಕಿಸುತ್ತಿರುವ ಆಮದು ನೀತಿ, ಮೂರು ಕೃಷಿ ವಿರೋಧಿ ಕಾನೂನುಗಳು, ಪೆಟ್ರೋಲಿಯಂ ಉತ್ಪನ್ನ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆ, ಫಸಲ್‌ ವಿಮಾ ಯೋಜನೆಯ ವೈಫಲ್ಯ ಸೇರಿದಂತೆ ಏಳು ಪ್ರಶ್ನೆಗಳನ್ನು ಕೇಳುವ ಮೂಲಕ ರೈತರು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಬೇಕು’ ಎಂದು ಪ್ರಶ್ನೆಗಳ ಪಟ್ಟಿಯನ್ನು ಹಂಚಿಕೊಂಡರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು