ಮಂಗಳವಾರ, ಜೂನ್ 15, 2021
23 °C
ಲಾಕ್‌ಡೌನ್: ಖರೀದಿಸುವವರೇ ಇಲ್ಲ– ಆರ್ಥಿಕ ಸಂಕಷ್ಟದಲ್ಲಿ ರೈತರು

ಹೊಲದಲ್ಲಿಯೇ ಕೊಳೆಯುತ್ತಿರುವ ಎಲೆಕೋಸು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕುಶಾಲನಗರ: ಎಲೆಕೋಸು, ಹೂಕೋಸು ಸೇರಿದಂತೆ ತರಕಾರಿಗಳನ್ನು ಬೆಳೆದು ಉತ್ತಮ ಆದಾಯ ಗಳಿಸುವ ನಿರೀಕ್ಷೆಯಲ್ಲಿದ್ದ ತಾಲ್ಲೂಕಿನ ರೈತಾಪಿ ವರ್ಗ ಲಾಕ್‌ಡೌನ್‌ನಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಹತ್ತಾರು ಎಕರೆ ಪ್ರದೇಶಗಳಲ್ಲಿ ಬೆಳೆದಿದ್ದ ತರಕಾರಿಗಳು ಹಾಗೂ ಎಲೆಕೋಸು ಮಾರಾಟವಾಗದೆ ಹೊಲದಲ್ಲಿ ಕೊಳೆಯುತ್ತಿದೆ. ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಸೀಗೆಹೊಸೂರು ಗ್ರಾಮದ ನಾಗೇಶ್ ಅವರ ಎರಡು ಎಕರೆಯಲ್ಲಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬೇಸಾಯ ಮಾಡಿದ್ದು ಉತ್ತಮ ಇಳುವರಿ ಬಂದಿದೆ, ಉತ್ತಮ ಆದಾಯ ನಿರೀಕ್ಷೆ ಇತ್ತು. ಆದರೆ, ಇದೀಗ ಕೇಳುವವರಿಲ್ಲದೆ ಬೇಡಿಕೆ ಕುಸಿದಿದೆ. ಜೊತೆಗೆ ಮಳೆಯಿಂದಾಗಿ ಹೊಲದಲ್ಲಿಯೇ ಕೊಳೆಯುತ್ತಿವೆ.

‘ಕೊರೊನಾ ಸೋಂಕು ಹರಡುತ್ತಿದ್ದು, ಲಾಕ್‌ಡೌನ್ ಹಿನ್ನೆಲೆಯಲ್ಲಿ ಖರೀದಿಸುವವರು ಬಾರದೆ ಇರುವುದರಿಂದ ಎರಡೂ ಎಕರೆ ಪ್ರದೇಶದ ಹೊಲದಲ್ಲಿ ಎಲೆಕೋಸು (ಮೊಟ್ಟೆಕೋಸು) ಕೊಳೆಯುತ್ತಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬರದಂತೆ ಆಗಿದೆ’ ಎಂದು ರೈತ ನಾಗೇಶ್ ತಮ್ಮ ಅಳಲು ತೋಡಿಕೊಂಡಿದ್ದಾರೆ.

‘ಕಳೆದ ಮೂರು ತಿಂಗಳು  ಹಿಂದೆ ಕೊಳವೆಬಾವಿಯ ನೀರನ್ನು ಉಪಯೋಗಿಸಿಕೊಂಡು ಎಲೆಕೋಸು ಬೆಳೆಯನ್ನು ಬೆಳೆಯಲಾಗಿದೆ. ಬೆಳೆಯು ಉತ್ತಮವಾಗಿ ಬಂದಿದ್ದು ಇದೀಗ ಕಟಾವು ಮಾಡುವ ಸಮಯ ಬಂದಿದೆ. ಅದರೆ, ಇದುವರೆಗೂ ಮಧ್ಯವರ್ತಿ ವ್ಯಾಪಾರಿಗಳಿಗೆ ತಿಳಿಸಿದರೂ ಲಾಕ್‌ಡೌನ್ ಇರುವುದರಿಂದ ಯಾರೂ ಸಹ ಬರುತ್ತಿಲ್ಲ ಇದರಿಂದಾಗಿ ಬಾರಿ ನಷ್ಟವಾಗಿದೆ. ನಷ್ಟಕ್ಕೆ ಸರ್ಕಾರ ಸೂಕ್ತ ಪರಿಹಾರ ಘೋಷಣೆ ಮಾಡುವ ಮೂಲಕ ರೈತರ ಹಿತಕಾಯಬೇಕು’ ಎಂದು ರೈತ ನಾಗೇಶ್ ಒತ್ತಾಯಿಸಿದ್ದಾರೆ.

ಜಿಲ್ಲೆಯ ಗಡಿಭಾಗ ಅರೆ ಮಲೆನಾಡು ಹಾಗೂ ಬಯಲು ಸೀಮೆ ಪ್ರದೇಶವಾದ ಹೆಬ್ಬಾಲೆ‌, ತೊರೆನೂರು, ಅಳುವಾರ, ಸೀಗೆಹೊಸೂರು, ಮದಲಾಪುರ ವ್ಯಾಪ್ತಿಯಲ್ಲಿ ಎಲೆಕೋಸು ಬೆಳೆಯು ಬಿಸಿಲಿನ ತಾಪದ ಅನುಗುಣವಾಗಿ ಉತ್ತಮವಾಗಿ ಬರುತ್ತದೆ. ಅದರಿಂದಾಗಿ ಈ ಭಾಗದ ಅನೇಕ ರೈತರು ಮುಖ್ಯ ಬೆಳೆಯ ಜೊತೆಯಲ್ಲಿ ಉಪ ಬೆಳೆಯಾಗಿ ಎಲೆಕೋಸು, ಸಿಹಿಗೆಣಸು, ಕೇಸು ಮುಂತಾದ ಅನೇಕ ಬೆಳೆಗಳನ್ನು ಬೆಳೆಯುತ್ತಾರೆ. ಅದರೆ ಇತ್ತೀಚಿನ ದಿನಗಳಲ್ಲಿ ಕಷ್ಟಪಟ್ಟು ಬೆಳೆದ ಸೂಕ್ತ ಬೆಲೆ ಸಿಗದೆ ರೈತರು ಕಂಗಾಲಾಗಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು