ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೇಂಗಾ ಬೀಜಕ್ಕಾಗಿ ನೂಕಾಟ

ರೈತ ಮಹಿಳೆಯನ್ನು ತಳ್ಳಿದ್ದ ಪಿಎಸ್‌ಐ ಗಂಗಮ್ಮಗೆ ವರ್ಗಾವಣೆ ಶಿಕ್ಷೆ
Last Updated 29 ಸೆಪ್ಟೆಂಬರ್ 2021, 17:46 IST
ಅಕ್ಷರ ಗಾತ್ರ

ಕಲಬುರ್ಗಿ: ಹಿಂಗಾರು ಹಂಗಾಮಿಗೆ ಭೂಮಿ ಸಜ್ಜುಗೊಳ್ಳುತ್ತಿದ್ದಂತೆಯೇ ಕಲಬುರ್ಗಿ ಹಾಗೂ ಯಾದಗಿರಿ ಜಿಲ್ಲೆಗಳಲ್ಲಿ ಶೇಂಗಾ ಬೀಜಕ್ಕೆ ಬೇಡಿಕೆ ಹೆಚ್ಚಾಗಿದೆ. ಆದರೆ, ಒಬ್ಬ ರೈತರಿಗೆ ಗರಿಷ್ಠ ಒಂದೂವರೆ ಕ್ವಿಂಟಲ್ ಮಾತ್ರ ಬೀಜ ನೀಡುವ ಸರ್ಕಾರದ ಧೋರಣೆ ರೈತರನ್ನು ರೊಚ್ಚಿಗೆಬ್ಬಿಸಿದೆ.

ಜಿಲ್ಲೆಯಲ್ಲಿ ಅತಿವೃಷ್ಟಿಯಿಂದಾಗಿ ಬೆಳೆ ನಷ್ಟವಾಗಿದ್ದು, ಕೊಳೆತು ಹೋದ ಬೆಳೆಯನ್ನು ನಾಶ ಮಾಡಿ ಭೂಮಿಯನ್ನು ಹದಗೊಳಿಸಿ ರೈತರು ಹಿಂಗಾರು ಬಿತ್ತನೆಗೆ ಅಣಿಯಾಗುತ್ತಿದ್ದಾರೆ. ಹೀಗಾಗಿ, ಬೀಜಕ್ಕೆ ಬೇಡಿಕೆ ಹೆಚ್ಚಾಗಿದೆ.

ಕಲಬುರ್ಗಿ ಜಿಲ್ಲೆ ಚಿತ್ತಾಪುರ ತಾಲ್ಲೂಕಿನ ನಾಲವಾರ ಹೋಬಳಿ, ಸೇಡಂ ತಾಲ್ಲೂಕಿನ ಮುಧೋಳ ಹಾಗೂ ಅಡಕಿ ಹೋಬಳಿಗಳಲ್ಲಿ ಹೆಚ್ಚಾಗಿ ಶೇಂಗಾ ಬಿತ್ತನೆ ಮಾಡುತ್ತಾರೆ.

‘6 ಕ್ವಿಂಟಲ್ ಶೇಂಗಾ ಬೀಜದ ಅವಶ್ಯಕತೆ ಇದೆ. ಮೂರು ದಿನಗಳಿಂದ ಅಲೆಯುತ್ತಿದ್ದರೂ ಬೀಜ ಸಿಕ್ಕಿಲ್ಲ. ಇವರು ನೀಡುವ ಒಂದೂವರೆ ಕ್ವಿಂಟಲ್ ಬೀಜ ಸಾಕಾಗುವುದಿಲ್ಲ. ಸಣ್ಣ, ಅತಿಸಣ್ಣ ರೈತರಿಗೆ ಕವಡೆ ಕಾಸಿನ ಕಿಮ್ಮತ್ತು ನೀಡದೆ ಅನ್ಯಾಯ ಮಾಡಲಾಗುತ್ತಿದೆ’ ಎಂದು ಚಿತ್ತಾಪುರ ತಾಲ್ಲೂಕು ಲಾಡ್ಲಾಪುರದ ರೈತ ದುರ್ಗಪ್ಪ ನಾಟೀಕಾರ ಆಕ್ರೋಶ ವ್ಯಕ್ತಪಡಿಸಿದರು.

‘ಬೇಡಿಕೆ ಸಲ್ಲಿಸಿದಷ್ಟು ಬಿತ್ತನೆ ಬೀಜ ಲಭ್ಯವಿದ್ದು, ರೈತರು ಆತಂಕಕ್ಕೆ ಒಳಗಾಗಬಾರದು. ರೈತರ ಜಮೀನಿನ ಮಾಹಿತಿ ಆನ್‌ಲೈನ್‌ನಲ್ಲಿ ಇರುವುದರಿಂದ ಬೀಜ ಹಂಚಿಕೆಯಲ್ಲಿ ತಾರತಮ್ಯ ಸಾಧ್ಯವಾಗುವುದಿಲ್ಲ’ ಎಂದು ಕಲಬುರ್ಗಿಯ ಜಂಟಿ ಕೃಷಿ ನಿರ್ದೇಶಕ ಡಾ. ರತೇಂದ್ರನಾಥ ಸೂಗುರ ಹೇಳಿದರು.

‘ಯಾದಗಿರಿ, ಗುರುಮಠಕಲ್‌ ತಾಲ್ಲೂಕಿನಲ್ಲಿ ಮಾತ್ರ ಶೇಂಗಾ ಬೀಜಕ್ಕೆ ಹೆಚ್ಚಿನ ಬೇಡಿಕೆ ಇದೆ. ಈಚೆಗೆ ಉತ್ತಮ ಮಳೆಯಾಗಿದ್ದರಿಂದ ಶೇಂಗಾ ಬಿತ್ತನೆಗೆ ಬೇಡಿಕೆ ಹೆಚ್ಚಿದೆ. ಆದರೂ, ಬಿತ್ತನೆ ಬೀಜ ಕೊರತೆ ಇಲ್ಲ’ ಎಂದು ಯಾದಗಿರಿ ಜಂಟಿ ಕೃಷಿ ನಿರ್ದೇಶಕ ಎಸ್‌.ಎಸ್‌. ಅಭೀದ್‌ ತಿಳಿಸಿದರು.

ಪಿಎಸ್‌ಐ ವರ್ಗಾವಣೆ: ಗುರುಮಠಕಲ್‌ ಪಟ್ಟಣದ ರೈತ ಸಂಪರ್ಕ ಕೇಂದ್ರದಲ್ಲಿ ಮಂಗಳವಾರ ಬಿತ್ತನೆ ಬೀಜಕ್ಕಾಗಿ ಸರದಿಯಲ್ಲಿ ನಿಂತಿದ್ದ ರೈತ ಮಹಿಳೆಯನ್ನು ತಳ್ಳಿ ನೆಲಕ್ಕೆ ಕೆಡವಿದ ಪಿಎಸ್‌ಐ ಗಂಗಮ್ಮ ಭದ್ರಾಪುರ ವರ್ತನೆಗೆ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದ್ದಂತೆ ಅವರನ್ನು ನಾರಾಯಣಪುರ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಿ ಯಾದಗಿರಿ ಎಸ್ಪಿ ವೇದಮೂರ್ತಿ ಆದೇಶ ಹೊರಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT