ಬಾಗಲಕೋಟೆ: ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಚಿಕ್ಕಲಗಿ ಗ್ರಾಮದ ಆರು ಜನ ರೈತರು ಮಳೆಯಿಂದಾದ ನಷ್ಟಕ್ಕೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಗುರುವಾರ ಮೊಬೈಲ್ ಟವರ್ ಏರಿ ಕುಳಿತುಕೊಂಡಿದ್ದರಿಂದ ಕೆಲಕಾಲ ಆತಂಕದ ವಾತಾವರಣ ಉಂಟಾಗಿತ್ತು.
ಮಲ್ಲಪ್ಪ ಬಿರಾದಾರ, ಸಿದ್ದು ಶಿಂಧೆ, ಯಲ್ಲಪ್ಪ ಬೆಳ್ಳುಬ್ಬಿ, ಮುನಿಕ ಗುರಚಿ, ಜ್ಞಾನದೇವ ಮಳಿಕ ಹಾಗೂ ಚಿರಾವ ಮೊಹಿತೆ ಟವರ್ ಏರಿದವರು. ವರ್ಷಪೂರ್ತಿ ಕಷ್ಟಪಟ್ಟು ಬೆಳೆದ ದ್ರಾಕ್ಷಿ ಬೆಳೆ ಹಾಳಾಗಿದೆ. ಕೂಡಲೇ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ಗ್ರಾಮಸ್ಥರು ಕೆಳಗಿಳಿಯುವಂತೆ ಮನವಿ ಮಾಡಿದರೂ, ಅವರು ಅಧಿಕಾರಿಗಳು ಬರುವವರೆಗೆ ಇಳಿಯುವುದಿಲ್ಲ ಎಂದು ಪಟ್ಟು ಹಿಡಿದರು.
ತಹಶೀಲ್ದಾರ್ ಸದಾಶಿವ ಮುಕ್ಕೋಜಿ ಭೇಟಿ ನೀಡಿ, ‘ಬೆಳೆ ಹಾನಿಯಾಗಿರುವುದರ ಸರ್ವೆ ಮಾಡಿಸಲಾಗುವುದು. ಹಾನಿಗೆ ಸೂಕ್ತ ಪರಿಹಾರ ನೀಡಲಾಗುವುದು’ ಎಂದು ಭರವಸೆ ನೀಡಿದ ನಂತರ ಕೆಳಗಿಳಿದರು.
ದ್ರಾಕ್ಷಿ ಬೆಳೆಗೆ ಅಪಾರ ಹಾನಿ: ಜಮಖಂಡಿ ಭಾಗದಲ್ಲಿ ಬುಧವಾರ ರಾತ್ರಿ ಬಿದ್ದ ಮಳೆಯಿಂದಾಗಿ, ₹40 ಕೋಟಿಗೂ ಹೆಚ್ಚು ಮೌಲ್ಯದ ದ್ರಾಕ್ಷಿ ಬೆಳೆ ಹಾನಿಯಾಗಿದೆ. ತಾಲ್ಲೂಕಿನಲ್ಲಿ ಐದು ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ದ್ರಾಕ್ಷಿ ಬೆಳೆಯಲಾಗಿದೆ. ಈ ಭಾಗದಲ್ಲಿ ಎರಡು ಸಾವಿರಕ್ಕೂ ಹೆಚ್ಚು ರೈತರ ದ್ರಾಕ್ಷಿ ಬೆಳೆಗಾರರು ತೊಂದರೆಗೆ ಸಿಲುಕಿದ್ದಾರೆ. ತೇರದಾಳ ಭಾಗದಲ್ಲಿ ಆಲಿಕಲ್ಲು ಮಳೆಯಾಗಿರುವುದರಿಂದ ಗೋಧಿ ಬೆಳೆ ಹಾನಿಯಾಗಿದೆ. ಬಾದಾಮಿಯಲ್ಲಿಯೂ ಜಿಟಿ ಜಿಟಿ ಮಳೆಯಾಗಿದ್ದು, ಮಹಾಲಿಂಗಪುರ, ಬಾಗಲಕೋಟೆಯಲ್ಲಿಯೂ ತುಂತುರು ಮಳೆಯಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.