ಮಂಗಳವಾರ, ಜುಲೈ 27, 2021
21 °C

ವಿಶ್ವ ಅಪ್ಪಂದಿರ ದಿನ: ಅಪ್ಪನೇ ನನ್ನ ಪಾಲಿನ ಹೀರೊ...

ಜಿ.ಶಿವಕುಮಾರ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಅಪ್ಪ (ಶ್ರೀನಿವಾಸ್‌) ಮಿತ ಭಾಷಿ. ಸಹೃದಯಿ ಕೂಡ. ತಂಗಿ ಹಾಗೂ ನನ್ನನ್ನು ತುಂಬಾ ಅಕ್ಕರೆಯಿಂದ ನೋಡಿಕೊಳ್ಳುತ್ತಿದ್ದರು. ಏನನ್ನು ಕೇಳಿದರೂ ಇಲ್ಲ ಅಂದವರಲ್ಲ.

ನಾನು ಚಿತ್ರದುರ್ಗದ ಶ್ರೀ ರಾಘವೇಂದ್ರ ಆಯುರ್ವೇದಿಕ್‌ ಮೆಡಿಕಲ್‌ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಕಾರಣ ಮನೆಯಿಂದ ದೂರ ಉಳಿಯಬೇಕಿದೆ. ಹೀಗಾಗಿ ರಜೆ ಸಿಕ್ಕಾಗಲೆಲ್ಲಾ ಆ್ಯಕ್ಟಿವಾ ಬೈಕ್‌ನಲ್ಲೇ ಬೆಂಗಳೂರಿನಿಂದ ಚಿತ್ರದುರ್ಗಕ್ಕೆ ಬಂದುಬಿಡುತ್ತಿದ್ದರು. ನಾನು ಬೇಡ ಅಂದರೂ ಕೇಳುತ್ತಿರಲಿಲ್ಲ. ಅಮ್ಮ ಮಾಡಿಕೊಟ್ಟ ತಿಂಡಿ ತಿನಿಸುಗಳನ್ನೂ ಜೊತೆಗೆ ತರುತ್ತಿದ್ದರು. ದಿನವಿಡೀ ಜೊತೆಯಲ್ಲೇ ಇದ್ದು ಕೇಳಿದ್ದನ್ನೆಲ್ಲಾ ಕೊಡಿಸಿ ಭಾರವಾದ ಮನಸ್ಸಿನಿಂದಲೇ ಹೋಗುತ್ತಿದ್ದರು.

ನಾನು ಬೆಂಗಳೂರಿಗೆ ಬಂದಾಗ ಗೊರಗುಂಟೆಪಾಳ್ಯದಲ್ಲಿ ಇಳಿದುಕೊಳ್ಳುತ್ತಿದ್ದೆ. ಎಷ್ಟೇ ಹೊತ್ತಾಗಿದ್ದರೂ ಸರಿ ಅಲ್ಲಿಗೆ ಬಂದು ನನಗೋಸ್ಕರ ಕಾಯುತ್ತಾ ನಿಂತಿರುತ್ತಿದ್ದರು. ಮನೆಯಲ್ಲಿ ಎಲ್ಲರೊಡನೆ ಆತ್ಮೀಯವಾಗಿ ಬೆರೆಯುತ್ತಿದ್ದರು. ಕೆಲವೊಮ್ಮೆ ಅವರೇ ಅಡುಗೆ ಮಾಡಿ ನಮಗೆಲ್ಲಾ ಬಡಿಸುತ್ತಿದ್ದರು. ರಜೆ ಸಿಕ್ಕಾಗಲೆಲ್ಲಾ ಪ್ರವಾಸಕ್ಕೆ ಹೋಗುತ್ತಿದ್ದೆವು. ಮಾರ್ಚ್‌ನಲ್ಲಿ ತಿರುಪತಿಗೆ ಕರೆದುಕೊಂಡು ಹೋಗಿದ್ದರು. ಅವರೊಂದಿಗೆ ನಾವು ಮಾಡಿದ ಕೊನೆಯ ಪ್ರವಾಸವದು. 

ನನ್ನೆಲ್ಲಾ ಕನಸುಗಳಿಗೆ ಅಪ್ಪ ಬೆಂಬಲವಾಗಿದ್ದರು. ನಾನು ವೈದ್ಯಕೀಯ ಶಿಕ್ಷಣ ಪಡೆಯುವುದು ಯಾರಿಗೂ ಇಷ್ಟ ಇರಲಿಲ್ಲ. ಆದರೆ ಅಪ್ಪ ಬೆನ್ನೆಲುಬಾಗಿ ನಿಂತರು. ‘ಎಷ್ಟೇ ಹಣ ಖರ್ಚಾದರೂ ಪರವಾಗಿಲ್ಲ; ನೀನು ಓದು’ ಎಂದು ಧೈರ್ಯ ತುಂಬಿದ್ದರು. ಅಂತಹ ವ್ಯಕ್ತಿಯನ್ನು ಅಪ್ಪನಾಗಿ ಪಡೆಯಲು ನಿಜಕ್ಕೂ ಪುಣ್ಯ ಮಾಡಿದ್ದೆ. ನಮ್ಮ ಬಾಂಧವ್ಯ ಕಂಡು ಭಗವಂತನಿಗೂ ಹೊಟ್ಟೆಕಿಚ್ಚಾಗಿರಬೇಕು. ಹೀಗಾಗಿ ಅಪ್ಪನನ್ನು ಬೇಗ ಕರೆದುಕೊಂಡುಬಿಟ್ಟ. ಅವರು ಈಗ ನಮ್ಮ ಜೊತೆ ಇಲ್ಲ ಎಂಬುದನ್ನು ನಂಬುವುದಕ್ಕೆ ಆಗುತ್ತಿಲ್ಲ. ಪ್ರತಿ ಕ್ಷಣವೂ ಅವರ ನೆನಪು ಕಾಡುತ್ತಿದೆ.

–ಶ್ರೀದುರ್ಗಾ ಭವಾನಿ, ಹಳೆ ಮದ್ರಾಸ್‌ ರಸ್ತೆ, ಬೆಂಗಳೂರು.

ನಿರೂಪಣೆ: ಜಿ.ಶಿವಕುಮಾರ

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು